ಸಾರಾಂಶ
ಸೊರಬ: ನಾಡಿಗೆ ಅನ್ನ ನೀಡುವ ರೈತರಿಗೆ ಕೃತಜ್ಞತೆ ಹೇಳಲು ಸರ್ಕಾರ ರೈತ ದಿನ ಆಚರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಆಗ್ರಹಿಸಿದರು.
ಮಂಗಳವಾರ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಸರ್ಕಾರ ರಾಷ್ಟ್ರೀಯ ರೈತ ದಿನಾಚರಣೆಯನ್ನು ಅಧಿಕೃತವಾಗಿ ಆಚರಿಸುವಂತೆ ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.ವಿವಿಧ ಜಾತಿ- ಜನಾಂಗಗಳ ಮಹನೀಯರ, ಸಂತರು, ಮಹಾಪುರುಷರ ಜಯಂತಿಯಂತೆ ಸರ್ಕಾರದ ಮಟ್ಟದಲ್ಲಿ ಆಚರಿಸಲಾಗುತ್ತದೆ. ಆದರೆ ಡಿ.23 ರಾಷ್ಟ್ರೀಯ ರೈತ ದಿನವಾಗಿದ್ದು, ನಾಡಿಗೆ ಅನ್ನ ನೀಡುವ ಕೃಷಿಕರನ್ನು ಗೌರವಿಸಲು ರೈತ ದಿನ ಆಚರಿಸದಿರುವುದು ವಿಷಾದನೀಯ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದಿಂದ ರೈತ ದಿನಾಚರಣೆಯನ್ನು ಅಧಿಕೃತ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳೇನು?:ಪಟ್ಟಣದ ಪುರಸಭೆ ಮುಂಭಾಗದ ವೃತ್ತ ಸೇರಿದಂತೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ರೈತ ವೃತ್ತ ಸ್ಥಾಪಿಸಬೇಕು. ರೈತ ದಿನಾಚರಣೆಯಂದು ಉತ್ತಮ ರೈತರನ್ನು ಗೌರವಿಸಬೇಕು. ಪ್ರತಿ ಗ್ರಾಮಗಳಲ್ಲಿ 2 ಎಕರೆ ಒಕ್ಕಲು ಕಣ ನಿರ್ಮಿಸಬೇಕು. ಗೋಮಾಳಗಳನ್ನು ಜಾನುವಾರುಗಳಿಗೆ ಮೀಸಲಿಡಬೇಕು. ಅಧಿವೇಶನದಲ್ಲಿ ಇಂಥ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳದಿದ್ದರೆ ಡಿ.15ರಿಂದ ಪುರಸಭೆ ಮುಂಭಾಗ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಮಿತಿ ಗೌರವಾಧ್ಯಕ್ಷ ಕೆ.ಪ್ರಭಾಕರ ರಾಯ್ಕರ್, ಉಪಾಧ್ಯಕ್ಷ ಕೆ.ವಿ. ದತ್ತಾತ್ರೇಯ, ಕಾರ್ಯದರ್ಶಿ ಶರತ್‌ಸ್ವಾಮಿ, ಪ್ರಮುಖರಾದ ಶಿವಯೋಗಿಸ್ವಾಮಿ ಸುತ್ತೂರುಮಠ, ಶಿವಾನಂದ, ಹನುಮಂತ, ರಮೇಶ್, ರಾಜು ಎಲ್. ಶೇಟ್, ಲೋಹಿತ ಇತರರು ಪಾಲ್ಗೊಂಡಿದ್ದರು.- - -
-12ಕೆಪಿಸೊರಬ01: