ಸಾರಾಂಶ
ಚನ್ನಪಟ್ಟಣ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಬಂದು ಹೋದ ನೆನಪಿನ ಹಿನ್ನೆಲೆಯಲ್ಲಿರುವ ನಗರದ ಗಾಂಧಿ ಭವನ ಶಿಥಿಲಗೊಂಡಿರುವುದು ಬೇಸರದ ಸಂಗತಿ. ಗಾಂಧಿ ಭವನಕ್ಕೆ ಆದಷ್ಟು ಬೇಗ ಕಾಯಕಲ್ಪ ಕಲ್ಪಿಸಬೇಕು ಎಂದು ಗಾಂಧಿವಾದಿ ಕೆಂಗಲ್ ರುದ್ರಯ್ಯ ಆಗ್ರಹಿಸಿದರು.
ನಗರದ ಗಾಂಧಿ ಸ್ಮಾರಕ ಭವನದ ಆವರಣದಲ್ಲಿ ಗಾಂಧಿ ಭವನದ ಕಾಯಕಲ್ಪ, ಆನೆ ದಾಳಿ ಸೇರಿದಂತೆ ತಾಲೂಕಿನ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಗಾಂಧಿ ಭವನ ಶಿಥಿಲಾವಸ್ಥೆ ತಲುಪಿದೆ. ಇದನ್ನು ನೂತನವಾಗಿ ನಿರ್ಮಿಸುವ ಕುರಿತು ತಾಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಗಮನಹರಿಸುತ್ತಿಲ್ಲ. ನಿಗಧಿತ ಕಾಲಮಿತಿಯೋಳಗೆ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಗಾಂಧಿ ಭವನ ನಿರ್ಮಾಣಕ್ಕೆ ಅಗತ್ಯ ಜಾಗದ ಸಮಸ್ಯೆ ಇಲ್ಲ, ಹಣದ ಕೊರತೆಯು ಇಲ್ಲ ಅಂದಮೇಲೆ ಭವನ ನಿರ್ಮಾಣದ ಹಿಂದಿರುವ ಸಮಸ್ಯೆಯಾದರೂ ಏನೆಂದು ನಮಗೆ ತಿಳಿಸಬೇಕು, ಲಕ್ಷಾಂತರ ಹೋರಾಟಗಳಿಗೆ ಸಾಕ್ಷಿಯಾಗಿರುವ ಗಾಂಧಿಭವನವನ್ನು ಸುಸಜ್ಜಿತವಾಗಿ ನಿರ್ಮಿಸಬೇಕೆಂದು ಹೋರಾಟ ನಡೆಸಬೇಕಾಗಿ ಬಂದಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.
ಆನೆಗಳ ದಾಳಿಯಿಂದ ಜಿಲ್ಲೆಯ ರೈತರು ಕಂಗಾಲಾಗಿ ಬೇಸತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಲು ಅರಣ್ಯ ಇಲಾಖೆ ವಿಫಲವಾಗಿದೆ. ಆನೆಗಳ ದಾಳಿಗೆ ಪರಿಹಾರ, ಆನೆಗಳನ್ನು ಓಡಿಸಲು ಸೇರಿದಂತೆ ಇನ್ನಿತರೆ ವಿಚಾರಕ್ಕೆ ಅರಣ್ಯ ಇಲಾಖೆ ೧೮ ಕೋಟಿ ಖರ್ಚು ಮಾಡಿದೆ. ಇಷ್ಟು ಹಣದಲ್ಲಿ ಕಬ್ಬಿಣದ ಬ್ಯಾರಿಕೇಡ್ ನಿರ್ಮಿಸಬಹುದಿತ್ತು. ಆದರೆ, ಯಾವುದೇ ವೈಜ್ಞಾನಿಕ ನಿರ್ಧಾರ ಮಾಡದೇ ಕಾಲಹರಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಬೇಕು. ಜೊತೆಗೆ, ತೆಂಗಿನ ನುಸಿ ರೋಗಕ್ಕೆ ಕ್ರಮಕೈಗೊಳ್ಳಬೇಕು. ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು, ಮಹಿಳೆಯರಿಗೆ ಶೀಘ್ರದಲ್ಲಿ ಬಿಪಿಎಲ್ ಕಾರ್ಡ್ ವಿತರಿಸಬೇಕು ಎಂದು ಆಗ್ರಹಿಸಿದರು.ಹಿರಿಯ ರೈತ ಹೋರಾಟಗಾರ್ತಿ ಅನುಸೂಯಮ್ಮ ಮಾತನಾಡಿ, ಉತ್ತರ ಕರ್ನಾಟಕದ ಭಾಗದಲ್ಲಿ ಒಮ್ಮೆ ಮಹಾತ್ಮ ಗಾಂಧಿ ರೈಲಿನಲ್ಲಿ ಬಂದು ಇಳಿದು ಹೋಗಿದ್ದರೂ ಎಂಬ ಸ್ಮರಣಾರ್ಥ ಆ ಸ್ಥಳದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಿದ್ದಾರೆ. ಆದರೆ ನಮ್ಮ ಈ ಜಾಗದಲ್ಲಿ ಮಹಾತ್ಮ ಗಾಂಧಿ ಬಂದು ವಾಸ್ತವ್ಯ ಹೂಡಿದ್ದರೂ ಕೂಡ ಅದರ ನೆನಪಿಗಾಗಿ ಒಂದು ಭವನ ನಿರ್ಮಿಸಲು ಸಾಧ್ಯವಾಗಿಲ್ಲ ಎಂದರೆ ಇದಕ್ಕಿಂತಲೂ ನಾಚಿಗೇಡಿನ ಸಂಗತಿ ಮತ್ತೊಂದಿಲ್ಲ ಎಂದರು.
ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಗಾಂಧಿ ಭವನದ ನಿರ್ಮಾಣ, ಆನೆ ದಾಳಿಗೆ ಶಾಶ್ವತ ಪರಿಹಾರ ಸೇರದಂತೆ ಇತರ ವಿಷಯಗಳನ್ನು ಪರಿಹರಿಸುವ ಭರವಸೆ ನೀಡಿದರು. ಶಾಸಕ ಯೋಗೇಶ್ವರ್ ಕರೆ ಮಾಡಿ ಬೇಡಿಕೆಗಳನ್ನು ಅದಷ್ಟು ಶೀಘ್ರ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ಕೈಬಿಡಲಾಯಿತು.ಈ ವೇಳೆ ಹಿರಿಯ ರೈತ ಹೋರಾಟಗಾರ ಸಿ.ಪುಟ್ಟಸ್ವಾಮಿ, ಕರ್ನಾಟಕ ರಾಜ್ಯ ರೈತಸಂಘದ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಎಸ್‌ಡಿಎಂಸಿ ಸಮನ್ವಯ ವೇದಿಕೆಯ ನಾಗವಾರ ಶಂಭೂಗೌಡ, ಭಾರತ ವಿಕಾಸ್ ಪರಿಷದ್ ಅಧ್ಯಕ್ಷ ಡಿಪಿಎಸ್ ಗೌಡ, ಕೊರಣಗೆರೆ ಕೃಷ್ಣಪ್ಪ, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ವಂದಾರಗುಪ್ಪೆ ವಿಎಸ್‌ಎಸ್‌ಎನ್ ಅಧ್ಯಕ್ಷ ವಿ.ಬಿ.ಚಂದ್ರಯ್ಯ, ಎಚ್.ಸಿ.ಕೃಷ್ಣಯ್ಯ ಭಾಗಿಯಾಗಿದ್ದರು.
ಕೋಟ್............ಕಳೆದ ಕೆಲ ವರ್ಷಗಳಿಂದ ಸುಸಜ್ಜಿತ ಗಾಂಧಿ ಭವನದ ನಿರ್ಮಾಣಕ್ಕೆ ಆಗ್ರಹಿಸಿ ಸಮಾನ ಮನಸ್ಕರೆಲ್ಲಾ ಸೇರಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ರಾಜಕಾರಣಿಗಳು ಭವನ ನಿರ್ಮಾಣ ಕುರಿತು ನಿರ್ಲಕ್ಷ ತೋರುತ್ತಿದ್ದಾರೆ. ಇದನ್ನು ನಾವೆಲ್ಲರೂ ಸೇರಿ ತಾರ್ಕಿಕ ಹಂತಕ್ಕೆ ಮುಟ್ಟಿಸಬೇಕಿದೆ.
ಸು.ತ.ರಾಮೇಗೌಡ, ಹಿರಿಯ ಪ್ರತಕರ್ತಪೋಟೊ೨ಸಿಪಿಟಿ೧:
ಚನ್ನಪಟ್ಟಣದ ಗಾಂಧಿ ಭವನದ ಆವರಣದಲ್ಲಿ ಸುಸಜ್ಜಿತ ಭವನ ನಿರ್ಮಾಣಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.