ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುನಗರದ ಕುಲಶೇಖರದಲ್ಲಿ ವಯೋವೃದ್ಧ ಮಾವನನ್ನು ಮನೆಯಲ್ಲಿ ಕೂಡಿ ಹಾಕಿ ವಾಕಿಂಗ್ ಸ್ಟಿಕ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಿದ ಸೊಸೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ಅತ್ತಾವರ ಮೆಸ್ಕಾಂನಲ್ಲಿ ಸಿಬ್ಬಂದಿಯಾಗಿರುವ ಕುಲಶೇಖರ ನಿವಾಸಿ ಉಮಾಶಂಕರಿ (47) ಬಂಧಿತ ಆರೋಪಿ.ಕುಲಶೇಖರ ನಿವಾಸಿಯಾಗಿರುವ ಪದ್ಮನಾಭ ಸುವರ್ಣ (88) ತನ್ನ ಸೊಸೆ ಉಮಾಶಂಕರಿ ಜತೆ ವಾಸಿಸುತ್ತಿದ್ದರು. ಪದ್ಮನಾಭರ ಪುತ್ರ ಪ್ರೀತಂ ಸುವರ್ಣ ವಿದೇಶದಲ್ಲಿ ಕೆಲಸದಲ್ಲಿದ್ದು, ಕುಲಶೇಖರದಲ್ಲಿರುವ ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ತನ್ನ ಮೊಬೈಲ್‌ಗೆ ಕನೆಕ್ಟ್ ಮಾಡಿದ್ದರು. ಎರಡು ದಿನಗಳ ಹಿಂದೆ ಪ್ರೀತಂ ಅವರ ಪತ್ನಿ ಉಮಾಶಂಕರಿ ವಾಕಿಂಗ್ ಸ್ಟಿಕ್‌ನಿಂದ ತನ್ನ ತಂದೆ ಮೇಲೆ ಹಲ್ಲೆ ನಡೆಸಿರುವುದನ್ನು ಸಿಸಿಟಿವಿ ಮೂಲಕ ವೀಕ್ಷಣೆ ಮಾಡಿದ್ದಾರೆ. ಕೂಡಲೆ ಪ್ರೀತಂ ಅವರು ಮೂಡುಬಿದಿರೆಯಲ್ಲಿರುವ ತನ್ನ ತಂಗಿಗೆ ವಿಷಯ ತಿಳಿಸಿ, ಸಿಸಿಟಿವಿ ದಾಖಲೆಯನ್ನು ನೀಡಿ ಪೊಲೀಸ್ ದೂರು ದಾಖಲಿಸುವಂತೆ ಹೇಳಿದ್ದಾರೆ. ಅದರಂತೆ ಕಂಕನಾಡಿ ನಗರ ಠಾಣೆಯಲ್ಲಿ ಕೊಲೆಯತ್ನ ದೂರು ದಾಖಲಾಗಿದೆ.ಸೊಸೆಯಿಂದ ತೀವ್ರ ಹಲ್ಲೆಗೀಡಾದ ಪದ್ಮನಾಭ ಸುವರ್ಣ ಅಸ್ವಸ್ಥಗೊಂಡಿದ್ದಾರೆ. ಅವರ ಮುಖ ಬಾತುಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಜಾಲತಾಣದಲ್ಲಿ ಆಕ್ರೋಶ: ಸೊಸೆ ಹಲ್ಲೆ ನಡೆಸುವ ಸಿಸಿ ಕ್ಯಾಮರಾ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವಾಕಿಂಗ್ ಸ್ಟಿಕ್‌ನಿಂದ ವೃದ್ಧ ಮಾವನಿಗೆ ಹೊಡೆದಿದ್ದಲ್ಲದೆ ದೂಡಿ ಹಾಕಿದ್ದರಿಂದ ಮಾವ ಎದ್ದೇಳಲೂ ಆಗದಂತೆ ಬಿದ್ದು ಅಸ್ವಸ್ಥಗೊಂಡಿದ್ದರು.
ತನ್ನದೇ ರಿಕ್ಷಾಕ್ಕೆ ಬೆಂಕಿ ಹಚ್ಚಲು ಮುಂದಾದ ಚಾಲಕ!:ಕಾನೂನು ಬಾಹಿರವಾಗಿ ರಿಕ್ಷಾ ಚಲಾಯಿಸುತ್ತಿದ್ದ ವ್ಯಕ್ತಿಯೋರ್ವನನ್ನು ಟ್ರಾಫಿಕ್ ಪೋಲೀಸರು ತಡೆದು ದಂಡ ಹಾಕಿದರು ಎಂಬ ಕಾರಣಕ್ಕೆ ಆವೇಶಕ್ಕೊಳಗಾದ ರಿಕ್ಷಾ ಚಾಲಕ ಟ್ರಾಫಿಕ್ ಎಸ್.ಐ ಹಾಗೂ ಸರ್ಕಾರಿ ವಾಹನಕ್ಕೆ ಮತ್ತು ಅಟೋ ರಿಕ್ಷಾಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ ಬಿ.ಸಿ ರೋಡಿನ ಕೈಕಂಬ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ವಾಹನಗಳಿಗೆ ಸಾರ್ವಜನಿಕವಾಗಿ ಪೆಟ್ರೋಲ್ ಸುರಿದ ಆಟೋ ಚಾಲಕನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗೂಡಿನಬಳಿ ನಿವಾಸಿ ಮಹಮ್ಮದ್ ಅನ್ಸಾರ್ ಪ್ರಕರಣದ ಆರೋಪಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ.ಟ್ರಾಫಿಕ್ ಎಸ್‌ಐ.ಸುತೇಶ್ ಅವರು ಕೈಕಂಬದಲ್ಲಿ ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ವೇಳೆ, ಯೂನಿಫಾರ್ಮ್ ಹಾಕದೆ ಮೊಬೈಲ್ ನಲ್ಲಿ ಮಾತನಾಡಿಕೊಂಡು ರಿಕ್ಷಾ ಓಡಿಸುತ್ತಿದ್ದ ಚಾಲಕನನ್ನು ನಿಲ್ಲಿಸಿ , ಆತನ ಮೇಲೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕಾಗಿ 2 ಸಾವಿರ ದಂಡ ಹಾಕಿ ನೋಟೀಸ್ ನೀಡಿದರು.ಇದೇ ಕಾರಣದಿಂದ ಸಾರ್ವಜನಿಕವಾಗಿ ಬೀದಿ ರಂಪಾಟ ಮಾಡಿ, ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅನ್ಸಾರ್ ಬಳಿಕ ರಿಕ್ಷಾವನ್ನು ಪೋಲೀಸರ ಎದುರಿನಲ್ಲಿಯೇ ಸುಟ್ಟುಹಾಕುವುದಾಗಿ ಬೆದರಿಸಿದ. ಬಳಿಕ ಎಸ್ಐ ಹಾಗೂ ಜೀಪ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ನೀಡಲು ಮುಂದಾದ. ಎಸ್.ಐ ಅವರು ಆತನ ಮೇಲೆ ದೂರು ನೀಡಿದ್ದಾರೆ. ಇದೀಗ ಈತನ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.