ಸಾರಾಂಶ
ಪ್ರಿಯತಮನೊಂದಿಗೆ ಮಗಳು ಓಡಿ ಹೋಗಿದ್ದರಿಂದ ಆಕ್ರೋಶಗೊಂಡ ತಂದೆ, ಮಗಳ ತಿಥಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಪ್ರಿಯತಮನೊಂದಿಗೆ ಮಗಳು ಓಡಿ ಹೋಗಿದ್ದರಿಂದ ಆಕ್ರೋಶಗೊಂಡ ತಂದೆ, ಮಗಳ ತಿಥಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಸುಶ್ಮಿತಾ ಶಿವಗೌಡ ಪಾಟೀಲ (19), ಅದೇ ಗ್ರಾಮದ ವಿಠ್ಠಲ ಬಸ್ತವಾಡೆ (29) ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಓಡಿಹೋಗಿದ್ದಳು. ವಿಠ್ಠಲ ಬಸ್ತವಾಡ ತಹಸೀಲ್ದಾರ್ ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕೆಲಸ ಮಾಡುತ್ತಿದ್ದ. ಈ ಸಂಬಂಧ ಯುವತಿಯ ತಂದೆ, ಶಿವಗೌಡ, ರಾಯಬಾಗ ಪೊಲೀಸ್ ಠಾಣೆಯಲ್ಲಿ ಮಗಳು ನಾಪತ್ತೆಯಾದ ಬಗ್ಗೆ ದೂರು ಕೊಟ್ಟಿದ್ದರು. ಆದರೆ, ಆಕೆ ಸ್ವ ಇಚ್ಛೆಯಿಂದ ಆತನೊಂದಿಗೆ ಹೋಗಿರುವುದು ವಿಚಾರಣೆ ವೇಳೆ ತಿಳಿದು ಬಂತು. ತಂದೆ-ತಾಯಿಯ ನಾಲ್ಕು ಜನ ಹೆಣ್ಣುಮಕ್ಕಳ ಪೈಕಿ ಸುಶ್ಮಿತಾ ಕೊನೆಯವಳು. ಇದರಿಂದ ಮನನೊಂದ ತಂದೆ, ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಮಾಡಿ, ಊರವರಿಗೆ ಊಟ ಹಾಕಿಸಿ, ನನ್ನ ಮಗಳು ನಮ್ಮ ಪಾಲಿಗೆ ಸತ್ತಿದ್ದಾಳೆ ಎಂದು ಕರುಳ ಬಳ್ಳಿಯ ಸಂಬಂಧ ಕತ್ತರಿಸಿಕೊಂಡಿದ್ದಾರೆ.