ಮಂಗಳೂರು: ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ ವತಿಯಿಂದ ಬುಧವಾರ ಕಂಕನಾಡಿಯ ಆಸ್ಪತ್ರೆಯ ಆವರಣದಲ್ಲಿ ಆ್ಯಂಟಿ-ಡ್ರಗ್ ವಾಕಥಾನ್ ನಡೆಯಿತು. ನಶಾ ಮುಕ್ತ ಭಾರತ ಅಭಿಯಾನದಡಿ ಆಯೋಜಿಸಲಾದ ಈ ಜಾಥಾದಲ್ಲಿ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಭಾಗವಹಿಸಿ ಮಾದಕ ವಸ್ತು ವಿರೋಧಿ ಘೋಷಣೆ ಹಾಕಿ ಸಮಾಜಕ್ಕೆ ಬಲವಾದ ಸಂದೇಶ ನೀಡಿದರು.ಸೇಂಟ್ ಜೋಸೆಫ್ ಚಾಪೆಲ್ ಮುಂಭಾಗದ ಮೈದಾನದಲ್ಲಿ ವಿಶೇಷ ಆ್ಯಂಟಿ-ಡ್ರಗ್ ಟಿ-ಶರ್ಟ್ ಧರಿಸಿದ್ದ ಸಾವಿರಾರು ವಿದ್ಯಾರ್ಥಿಗಳು ಒಂದೇ ಧ್ವನಿಯಲ್ಲಿ ಮಾದಕವಸ್ತು ವಿರೋಧಿ ಸಂದೇಶ ಸಾರಿದ ದೃಶ್ಯ ಗಮನ ಸೆಳೆಯಿತು. ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ಫಾ. ಫಾವೊಸ್ತಿನ್ ಲೂಕಾಸ್ ಲೋಬೊ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯುವಜನತೆ ಸಮಾಜದ ಪರಿವರ್ತನೆಗೆ ಶಕ್ತಿಯಾಗಬೇಕು ಎಂದರು.ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ವ್ಯಸನದಿಂದ ಬಳಲುತ್ತಿರುವವರು ಗೌಪ್ಯವಾಗಿ ಅಧಿಕಾರಿಗಳ ನೆರವು ಪಡೆಯಬಹುದೆಂದು ತಿಳಿಸಿ, ಯುವಕರು ಮಾದಕವಸ್ತು ಚಟುವಟಿಕೆಗಳ ಬಗ್ಗೆ ಎಚ್ಚರಿಕೆಯಿಂದಿದ್ದು ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಬೇಕು ಎಂದು ಮನವಿ ಮಾಡಿದರು. ಉದ್ಯಮಿ ಹಾಗೂ ಸಮಾಜ ಸೇವಕ ಮೈಕೆಲ್ ಡಿಸೋಜ ಮುಖ್ಯ ಅತಿಥಿಗಳಾಗಿದ್ದರು. ಫಾದರ್ ಮುಲ್ಲರ್ ಆವರಣದಿಂದ ಆರಂಭವಾದ ಮೆರವಣಿಗೆ ಕರಾವಳಿ ವೃತ್ತ, ಪಂಪ್‌ವೆಲ್ ರಸ್ತೆ ಮಾರ್ಗವಾಗಿ ಸಾಗಿಬಂದು ಫಾದರ್ ಮುಲ್ಲರ್ ಮೈದಾನದಲ್ಲಿ ಸಮಾಪ್ತಿಯಾಯಿತು. ಜಾಥಾದಲ್ಲಿ ಮಾದಕ ವಸ್ತು ವಿರೋಧಿ ಸಂದೇಶಗಳನ್ನು ಹೊತ್ತ ಓಪನ್ ಟ್ಯಾಬ್ಲೋ ವಾಹನ ಹಾಗೂ ಜಾಗೃತಿ ವಾಹನ ವಿಶೇಷ ಆಕರ್ಷಣೆಯಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪಿಎಸ್‌ಐ ಮಾರುತಿ ಮಾತನಾಡಿ, ಮಾದಕವಸ್ತು ವ್ಯಸನ ವ್ಯಕ್ತಿಯ ಜೀವನ ಮಾತ್ರವಲ್ಲದೆ ಕುಟುಂಬ ಮತ್ತು ಸಮಾಜವನ್ನೂ ಹಾಳುಮಾಡುತ್ತದೆ ಎಂದು ಎಚ್ಚರಿಸಿದರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಡಾ. ಮೈಕಲ್ ಸಂತುಮಯೋರ್ ಇದ್ದರು. ಫಾದರ್‌ಮುಲ್ಲರ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಚೆರಿಷ್ಮಾ ಡಿಸಿಲ್ವಾ ಹಾಗೂ ಪಥಾಲಜಿಸ್ಟ್ ಡಾ. ಸೂಅಲೆನ್ ಡಿಸೋಜಾ ನಿರೂಪಿಸಿದರು.ಮಾದಕವಸ್ತು ವಿರೋಧಿ ಜಾಗೃತಿ ಅಂಗವಾಗಿ ಆಯೋಜಿಸಲಾದ ರೀಲ್ಸ್ ಹಾಗೂ ಘೋಷವಾಕ್ಯ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.