ಹುಳಿಯಾರು: ಮನೆ ಮುಂದೆ ಗಿಡಗಳಿಗೆ ನೀರುಣಿಸುತ್ತಿದ್ದ ವ್ಯಕ್ತಿಯನ್ನು 8 ವರ್ಷದ ಮಗಳ ಮುಂದೆಯೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಇಲ್ಲಿನ ಕೆಂಕೆರೆ ಗ್ರಾಮದಲ್ಲಿ ನಡೆದಿದೆ.

ಹುಳಿಯಾರು: ಮನೆ ಮುಂದೆ ಗಿಡಗಳಿಗೆ ನೀರುಣಿಸುತ್ತಿದ್ದ ವ್ಯಕ್ತಿಯನ್ನು 8 ವರ್ಷದ ಮಗಳ ಮುಂದೆಯೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಇಲ್ಲಿನ ಕೆಂಕೆರೆ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವರನ್ನು ಗ್ರಾಮದ ಮಂಜುನಾಥ್‌ (41) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ 9ರಿಂದ 9.30ರ ಅವಧಿಯಲ್ಲಿ ನಡೆದಿರುವ ಘಟನೆಯಲ್ಲಿ ಮೃತ ಮಂಜುನಾಥ ಮನೆಗೆ ಬಂದ 5-6 ಜನ ದುಷ್ಕರ್ಮಿಗಳು ಏಕಾಏಕಿ ಮಂಜುನಾಥ್ ಅವರ ಮೇಲೆ ದಾಳಿ ನಡೆಸಿ ಚಾಕುವಿನಿಂದ ಚುಚ್ಚಿದ್ದಾರೆ. ಈ ವೇಳೆ ಇಬ್ಬರು ಮಕ್ಕಳು ಸಹ ಸ್ಥಳದಲ್ಲಿದ್ದು ಈ ವೇಳೆ 5 ವರ್ಷದ ಮಗಳು ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದು 8 ವರ್ಷದ ಮಗಳು ಚೀರಾಟ ಮಾಡಿದ್ದಾಳೆ. ಆಗ ಮಗುವಿನ ಬಾಯಿ ಮುಚ್ಚಿರುವ ದುರುಳರು ಮಂಜುನಾಥನನ್ನು ಮನಸೋ ಇಚ್ಛೆ ಇರಿದು ಕತ್ತಲಲ್ಲಿ ಪರಾರಿಯಾಗಿದ್ದಾರೆ. ಮೃತ ಮಂಜನಾಥ ಗ್ರಾಮದಲ್ಲಿ ಶಾಮಿಯಾನ ಹಾಕುವ ಕಾಯಕ ಮಾಡುತ್ತಿದ್ದು ಜೊತೆಗೆ ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಘಟನೆ ನಡೆದ ವೇಳೆ ಪತ್ನಿ ಅಂಗಡಿಯಲ್ಲಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಘಟನೆ ಕುರಿತಂತೆ ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.