ಕನ್ನಡಪ್ರಭ ವಾರ್ತೆ ವಿಜಯಪುರ

ಮಕ್ಕಳ ಜೀವನದಲ್ಲಿ ತಂದೆಯರ ಪಾತ್ರ, ಅವರ ಜವಾಬ್ದಾರಿಗಳು ಹಾಗೂ ಕುಟುಂಬದ ಸದೃಢ ಬೆಳವಣಿಗೆಯಲ್ಲಿ ತಂದೆಯ ಕೊಡುಗೆ ಅನನ್ಯ ಎಂದು ವೇದ ಶಿಕ್ಷಣ ಸಂಸ್ಥೆಯ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಶಿವಾನಂದ ಕೆಲೂರ ಹೇಳಿದರು.

ನಗರದ ಹೊರವಲಯದ ಇಟ್ಟಂಗಿಹಾಳದ ಶ್ರೀ ಸಂಸ್ಥೆಯ ವೇದ ಅಕಾಡೆಮಿಯಲ್ಲಿ ಆಚರಿಸಲಾದ ತಂದೆಯರ ದಿನಾಚರಣೆ ಕಾರ್ಯಕ್ರಮದದಲ್ಲಿ ಮಾತನಾಡಿದ ಅವರು, ತಂದೆಯು ಮಕ್ಕಳಿಗೆ ಶಿಸ್ತು, ಮೌಲ್ಯಗಳು, ಆತ್ಮವಿಶ್ವಾಸ ಹಾಗೂ ಉತ್ತಮ ವ್ಯಕ್ತಿತ್ವ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮಕ್ಕಳ ಜೀವನ ರೂಪಿಸುವಲ್ಲಿ ತಂದೆಯ ಪಾತ್ರ ಮಹತ್ವದ್ದು ಎಂದರು.

ಮುಖ್ಯ ಅತಿಥಿ ಸಂಸ್ಥೆಯ ಖಜಾಂಚಿ ಶಿವಲೀಲಾ ಕೆಲೂರ ಮಾತನಾಡಿ, ಮಕ್ಕಳಿಗೆ ತಂದೆ-ತಾಯಿ ಎಂದರೆ ಒಂದೇ ನಾಣ್ಯ ಎರಡು ಮುಖಗಳು. ತಂದೆಯರು ಮಕ್ಕಳಿಗಾಗಿ ಹಗಲಿರುಳು ಕಷ್ಟಪಡುತ್ತಾರೆ. ಅದನ್ನು ಮಕ್ಕಳಿಗೆ ತಿಳಿಸುವ ಕಾರ್ಯ ತಾಯಂದಿರು ಮಾಡಬೇಕು. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆಯರಿಗೆ ಪ್ರತ್ಯಕ್ಷ ಪಾದಪೂಜೆ ನೆರವೇರಿಸಿದ್ದು, ಇದು ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಬಿಂಬಿಸಿ, ತಂದೆ-ಮಕ್ಕಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದರು.

ಈ ವೇಳೆ ಎನ್.ಜಿ. ಯರನಾಳ, ಕೃಪಾ ಕೆಲೂರ, ಮುಖ್ಯಶಿಕ್ಷಕಿ ರಶ್ಮಿ ಕವಟಗಿಮಠ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.