ಸಾರಾಂಶ
ಬೆಂಗಳೂರು : ಸೇನಾ ಆಯುಧ, ಆಧುನಿಕ ತಂತ್ರಜ್ಞಾನದ ರಕ್ಷಣಾ ಉತ್ಪಾದನೆ ವಿಚಾರದಲ್ಲಿ ಬೆಂಗಳೂರು ಪೂರಕ ವಾತಾವರಣ ಒದಗಿಸಿದ್ದು, ಇಲ್ಲಿ ಬೆಳೆಯುತ್ತಿರುವ ಉದ್ಯಮ, ನವೋದ್ಯಮಗಳು ಹೊಸ ಆಶಾವಾದ ಮೂಡಿಸಿವೆ ಎಂದು ದಕ್ಷಿಣ ವಲಯದ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆ.ಜನರಲ್ ಎ.ಕೆ.ಸಿಂಗ್ ಹೇಳಿದರು.
ಬುಧವಾರ ಇಲ್ಲಿನ ಆರ್ಮಿ ಪಬ್ಲಿಕ್ ಸ್ಕೂಲ್ ಮತ್ತು ಕಾಲೇಜಿನ ಛೋಪ್ರಾ ಸಭಾಂಗಣದಲ್ಲಿ ‘ಸದರ್ನ್ ಸ್ಟಾರ್ ಆರ್ಮಿ ಅಕಾಡೆಮಿಯಾ ಇಂಡಸ್ಟ್ರಿ ಇಂಟರ್‌ಫೇಸ್’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಭವಿಷ್ಯದ ದೃಷ್ಟಿಯಿಂದ ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಅತ್ಯಾಧುನಿಕ ತಂತ್ರಜ್ಞಾನದ ಆಯುಧಗಳನ್ನು ಹೊಂದುವುದು ಅಗತ್ಯ. ಈ ದೃಷ್ಟಿಯಿಂದ ರಕ್ಷಣಾ ಉದ್ಯಮಗಳು, ಸ್ಟಾರ್ಟ್-ಅಪ್‌ಗಳು, ಎಂಎಸ್‌ಎಂಇಗಳು ಮತ್ತು ಅಕಾಡೆಮಿಗಳ ಪಾತ್ರ ದೊಡ್ಡದು. ಈ ಸಂಬಂಧ ಬೆಂಗಳೂರಿನಲ್ಲಿ ರಕ್ಷಣಾ ಉತ್ಪಾದನೆಯ ಪರಿಸರ ವ್ಯವಸ್ಥೆಯು ಅಗಾಧ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಭವಿಷ್ಯದ ಯುದ್ಧಗಳಲ್ಲಿ ಕ್ವಾಂಟಮ್ ಎನ್‌ಕ್ರಿಪ್ಶನ್, ಸೈಬರ್ ಸೆಕ್ಯುರಿಟಿ, ಕೃತಕ ಬುದ್ಧಿಮತ್ತೆ, ಏರೋಸ್ಪೇಸ್ ಮತ್ತು ಸುಧಾರಿತ ಕಂಪ್ಯೂಟಿಂಗ್‌ನಂತಹ ಆಧುನಿಕ ತಂತ್ರಜ್ಞಾನ ವ್ಯಾಪಕ ಬಳಕೆಯಾಗಲಿದೆ. ಇದಕ್ಕಾಗಿ ನಾವು ಸಿದ್ಧಗೊಳ್ಳಬೇಕು ಎಂದು ಹೇಳಿದರು.
ದಕ್ಷಿಣ ವಲಯದ ಕಮಾಂಡಿಂಗ್ ಆಫೀಸರ್ ಲೆ.ಜನರಲ್ ಕರಣ್‌ಬೀರ್ ಸಿಂಗ್ ಬ್ರಾರ್ ಮಾತನಾಡಿದರು. ಶೈಕ್ಷಣಿಕ, ಕಾರ್ಯತಂತ್ರದ ತಜ್ಞರು, ಉದ್ಯಮಿಗಳು, ನವೋದ್ಯಮಿಗಳು ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ರಾಮಯ್ಯ, ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ರಾಷ್ಟ್ರೀಯ ಭದ್ರತಾ ಸಲಹಾ ಸಮಿತಿ ಚೇರ್‌ಮನ್ ಪಿ.ಎಸ್.ರಾಘವನ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಚಾನ್ಸಲರ್ ಪ್ರೊ. ಬಿ.ಎನ್.ಸುರೇಶ್ ಇದ್ದರು.