25 ವರ್ಷಗಳ ಬಳಿಕ ಹನೂರು ಫ್ಯಾಕ್ಸ್‌ ಚುನಾವಣೆ!

| Published : May 11 2025, 01:17 AM IST

ಸಾರಾಂಶ

ಶತಮಾನೋತ್ಸವಕ್ಕೆ ಒಂದು ಹೆಜ್ಜೆ ಬಾಕಿ ಇರುವ ಹನೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ 25 ವರ್ಷಗಳ ನಂತರ ಮೊದಲ ಬಾರಿಗೆ ಚುನಾವಣೆ ನಿಗದಿಯಾಗಿದೆ.

ಕನ್ನಡಪ್ರಭ ವಾರ್ತೆ ಹನೂರುಶತಮಾನೋತ್ಸವಕ್ಕೆ ಒಂದು ಹೆಜ್ಜೆ ಬಾಕಿ ಇರುವ ಹನೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ 25 ವರ್ಷಗಳ ನಂತರ ಮೊದಲ ಬಾರಿಗೆ ಚುನಾವಣೆ ನಿಗದಿಯಾಗಿದೆ.

ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಮುಂದಿನ ಐದು ವರ್ಷಗಳ ಅವಧಿಗೆ ನಡೆಯಲಿರುವ ಸಹಕಾರ ಸಂಘದ ಚುನಾವಣೆ ಮೇ 14 ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3.00ರ ವರೆಗೆ ಹನೂರು ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಡೆಯಲಿದೆ. ಹನೂರು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆಗೆ ಸಹಕಾರ ಸಂಘದ ಅಧಿಕಾರಿ ಎಸ್. ನಾಗೇಶ್ ಚುನಾವಣಾ ಅಧಿಕಾರಿಯಾಗಿ ನೇಮಕವಾಗಿದ್ದಾರೆ.ಹನೂರು ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 13ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಬೇಕಿದ್ದು, ಈ ಪೈಕಿ ಚುನಾಯಿಸಬೇಕಾದ ಒಟ್ಟು 12 ಸಾಲಗಾರರ ಕ್ಷೇತ್ರದಿಂದ 11 ಸ್ಥಾನಗಳ ಪೈಕಿ ಸಾಮಾನ್ಯ ವರ್ಗಕ್ಕೆ ಐದು ಸ್ಥಾನ, ಪರಿಶಿಷ್ಟ ವರ್ಗದವರಿಗೆ ಒಂದು ಸ್ಥಾನ, ಪರಿಶಿಷ್ಟ ಪಂಗಡದ ಸದಸ್ಯರಿಗೆ ಒಂದು ಸ್ಥಾನ, ಮಹಿಳೆಯರಿಗೆ ಎರಡು ಸ್ಥಾನ, ಹಿಂದುಳಿದ ವರ್ಗದ ಪ್ರವರ್ಗ ಎ ಸದಸ್ಯರಿಗೆ ಒಂದು ಸ್ಥಾನ ಹಾಗೂ ಹಿಂದುಳಿದ ವರ್ಗದ ಪ್ರವರ್ಗ ಬಿ ಸದಸ್ಯರಿಗೆ ಒಂದು ಸ್ಥಾನ ಮೀಸಲಿಡಲಾಗಿದೆ.

ಸಾಲಗಾರರಲ್ಲದ ಕ್ಷೇತ್ರದಿಂದ ಒಂದು ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಸಾಲಗಾರರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಚುನಾವಣೆ ನಿಗದಿಗೊಂಡಿದೆ. ಪ್ರತಿ ಬಾರಿಯೂ ಐದು ವರ್ಷಗಳ ನಿರ್ದೇಶಕರ ಆಯ್ಕೆಗೆ ಅವಿರೋಧ ಆಯ್ಕೆಗೊಳ್ಳುತ್ತಿತ್ತು. ಈ ಬಾರಿ ಸಾಲಗಾರರಲ್ಲದ ಕ್ಷೇತ್ರಕ್ಕೆ ಇಬ್ಬರು ಅಭ್ಯರ್ಥಿಗಳು, ಸಾಲಗಾರರ ಕ್ಷೇತ್ರದಿಂದ 11 ಸ್ಥಾನಗಳಿಗೆ 23 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇರುವುದರಿಂದ 14ರಂದು ನಡೆಯುವ ಚುನಾವಣೆಗೆ ತೀವ್ರ ಪೈಪೋಟಿ ಏರ್ಪಟ್ಟಿದೆ.ಕಣದಲ್ಲಿ ಮಾಜಿ ಶಾಸಕ:

ಸಾಲಗಾರರಲ್ಲದ ಕ್ಷೇತ್ರದಿಂದ ಮಾಜಿ ಶಾಸಕ ಆರ್‌.ನರೇಂದ್ರ ಮತ್ತು ಜೆಡಿಎಸ್ ಮುಖಂಡ ಉದ್ದನೂರು ಗಿರೀಶ್ ಕಣದಲ್ಲಿದ್ದು, ಸಾಲಗಾರರ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು 11 ಕ್ಷೇತ್ರಗಳಿಗೆ ಚುನಾವಣಾ ಕಣದಲ್ಲಿ ಉಳಿದಿರುವುದರಿಂದ ಎಲ್ಲರ ಚಿತ್ತ ಹನೂರು ಪಟ್ಟಣದ ಸಹಕಾರ ಸಂಘದತ್ತ ಗಮನ ಸೆಳೆಯುವಂತೆ ಮಾಡಿದೆ. 13ರಲ್ಲಿ ಒಂದು ಸ್ಥಾನ ಸರ್ಕಾರ ಪ್ರತಿನಿಧಿಯಾಗಿ ಆಯ್ಕೆಯಾಗಲಿದ್ದಾರೆ.

1926ರಲ್ಲಿ ಪ್ರಾರಂಭ:

ಹನೂರು ಕೃಷಿ ಪತ್ತಿನ ಸಹಕಾರ ಸಂಘವು 1926ರಲ್ಲಿ ತಮಿಳುನಾಡಿನ ನೀಲಗಿರಿ ಮಾವಟ್ಟಂ ಇದ್ದಂತ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಸಹಕಾರ ಸಂಘ 99 ವರ್ಷಗಳು ಪೂರೈಸಿದ್ದು ಶತಕದ ಅಂಚಿನಲ್ಲಿದೆ. ಕಳೆದ 25 ವರ್ಷಗಳಿಂದ ಚುನಾವಣೆ ನಡೆಯದೆ ಅವಿರೋಧ ಆಯ್ಕೆಯಾಗುತ್ತಿದ್ದು, ಈ ಬಾರಿ ಮೇ 14ರಂದು ನಡೆಯುವ ಸಹಕಾರ ಸಂಘದ ಚುನಾವಣೆಯು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಸಹಕಾರ ಸಂಘಕ್ಕೆ ನಾನು ಶಾಸಕನಾಗಿದ್ದಾಗ ಮೈಸೂರು ಮತ್ತು ಚಾಮರಾಜನಗರ ಸಹಕಾರ ಸಂಘದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಈ ಭಾಗದ ರೈತರಿಗೆ ಹೆಚ್ಚಿನ ಸಾಲ ಕೊಡಿಸುವಲ್ಲಿ ಶ್ರಮಿಸಿದ್ದೇನೆ. ಈ ಬಾರಿ ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೇನೆ.

-ಆರ್‌.ನರೇಂದ್ರ, ಮಾಜಿ ಶಾಸಕ.

ಹನೂರು ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರಲ್ಲದ ಕ್ಷೇತ್ರದಿಂದ ನಿರ್ದೇಶಕರ ಸ್ಥಾನಕ್ಕೆ ಪಕ್ಷದ ಹಿರಿಯ ನಾಯಕರ ಅಣತಿಯಂತೆ ಸ್ಪರ್ಧೆ ಮಾಡುವ ಮೂಲಕ, ಸಹಕಾರ ಕ್ಷೇತ್ರದಲ್ಲಿ ಸೇವೆ ಮಾಡಲು ಅವಕಾಶ ಕಲ್ಪಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದೇನೆ.

-ಗಿರೀಶ್ ಉದ್ದನೂರು, ಸಾಲಗಾರರಲ್ಲದ ಕ್ಷೇತ್ರದ ಅಭ್ಯರ್ಥಿ