ಸಾರಾಂಶ
ಕಾರವಾರ: ಹೆದರುವುದೇ ನಮ್ಮೆಲ್ಲರ ದೌರ್ಬಲ್ಯವಾಗಿದ್ದು, ಹೆದರದೇ ಮುನ್ನುಗಿದಾಗ ಯಶಸ್ಸು ಸಾಧ್ಯವಾಗುತ್ತದೆ. ನಾವು ಸಶಕ್ತವಾಗಿದ್ದಾಗ ಮಾತ್ರ ಜಗತ್ತಿನಲ್ಲಿ ಗೌರವ ಪ್ರಾಪ್ತವಾಗುತ್ತದೆ. ಉದ್ಯಮಗಳನ್ನು ಹುಟ್ಟುಹಾಕಲು ಈಗ ಪೂರಕ ವಾತಾವರಣವಿದ್ದು, ಈ ದಿಶೆಯಲ್ಲಿ ಯುವ ಸಮುದಾಯ ಆಲೋಚಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಹವ್ಯಕ ಮಹಾಸಭೆಯಿಂದ ಬೆಂಗಳೂರಿನ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಆಯೋಜಿಸಿದ್ದ ಪ್ರತಿಬಿಂಬ ಫೈನಲ್ ಹಾಗೂ ಯುವಜನೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ, ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಭಾಷೆ ನಮ್ಮ ಸಂಸ್ಕೃತಿಯ ಸಂವಹನ ಮಾಧ್ಯಮವೂ ಹೌದು. ಮಾತೃಭಾಷೆಯನ್ನೇ ಮನೆಯಲ್ಲಿ ಬಳಸುವುದರಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಇರುವವರು ಉದ್ಯಮ ಜಗತ್ತಿನಲ್ಲಿ ಯಶಸ್ಸು ಗಳಿಸುವುದು ಅಸಾಧ್ಯ ಎಂಬ ವಾತಾವರಣವನ್ನು ಕಲ್ಪಿಸಲಾಗಿದೆ. ಇದನ್ನು ಮೀರಿ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜತೆಗೆ ಉದ್ಯಮದಲ್ಲೂ ಯಶಸ್ಸು ಗಳಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿ. ಸೂರ್ಯನಾರಾಯಣ ಭಟ್ ಹಿತ್ಲಳ್ಳಿ ಅವರು, ನಾವು ಅನುಸರಿಸುವ ಅದ್ವೈತ ತತ್ವದ ಪ್ರತಿಪಾದನೆಯಂತೆ ಈ ಜಗತ್ತೇ ಪ್ರತಿಬಿಂಬವಾಗಿದ್ದು, ಈ ಪ್ರತಿಬಿಂಬ ಕಾರ್ಯಕ್ರಮ ಹವ್ಯಕ ಸಮಾಜದ ಪ್ರತಿಬಿಂಬವಾಗಿದೆ. ಹವ್ಯಕ ಸಮಾಜ ಎಲ್ಲ ರಂಗದಲ್ಲೂ ಇದ್ದು, ನಮ್ಮ ಛಾಪನ್ನು ಎಲ್ಲೆಡೆ ಮೂಡಿಸಬೇಕು ಎಂದರು.ಹಿರಿಯ ಪತ್ರಕರ್ತ ರವಿಶಂಕರ್ ಭಟ್ ಮಾತನಾಡಿ, ಸಂಸ್ಕೃತಿ ಎಂಬುದು ಎಂಜಿನ್ ಇದ್ದಂತೆ. ನಾವು ಬಳಸಿದಂತೆ ನಮ್ಮ ಸಂಸ್ಕೃತಿಯು ಉಳಿದು ಬೆಳೆಯುತ್ತದೆ. ವೈವಿಧ್ಯಮಯವಾದ ನಮ್ಮ ಸಂಸ್ಕೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಇಂದು ಸಂಬಂಧಗಳು ವಾಟ್ಸ್‌ಆ್ಯಪ್ - ಫೇಸ್‌ಬುಕ್‌ಗೇ ಮಾತ್ರ ಸೀಮಿತವಾಗುತ್ತರುವುದು ವಿಷಾದನೀಯ ಎಂದರು.ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ಮಾತನಾಡಿ, ಯಾವುದೇ ಬೇಡಿಕೆ ಇಲ್ಲದ ಸಮಾಜ ಹವ್ಯಕ ಸಮಾಜವಾಗಿದೆ. ನಾವು ಸರ್ಕಾರಗಳಿಗೆ ಎಂದಿಗೂ ಬೇಡಿಕೊಳ್ಳುವುದಿಲ್ಲ. ಹವ್ಯಕ ಸಮಾಜ ನೀಡುವ ಸಮಾಜವಾಗಿದ್ದು, ನಮ್ಮಲ್ಲಿರುವ ಪ್ರತಿಭೆಯಿಂದ ಸಮಷ್ಟಿ ಸಮಾಜದಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿದ್ದೇವೆ ಎಂದರು.ಡಿ. 27, 28 ಹಾಗೂ 29ರಂದು ಮೂರನೇ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ. ಇದು ಜಾತಿಯ ಸಮ್ಮೇಳನವಾಗಿರದೇ, ಹವ್ಯಕ ಸಂಸ್ಕೃತಿಯನ್ನು ಜಗತ್ತಿನ ಮುಂದೆ ತೆರದಿಡುವ ಕಾರ್ಯವಾಗಿರಲಿದೆ. ಈ ಬೃಹತ್ ಕಾರ್ಯಕ್ರಮಕ್ಕೆ ಸಮಾಜ ಕೈಜೋಡಿಸಬೇಕು ಎಂದರು.ಖ್ಯಾತ ಗಾಯಕಿ ಪೃಥ್ವಿ ಭಟ್ ಹಾಗೂ ದಿಯಾ ಹೆಗಡೆ ಅವರ ಭಾವಯಾನ ಸಂಗೀತ ಕಾರ್ಯಕ್ರಮ, ಯಕ್ಷನೃತ್ಯ ವೈಭವ, ಯೋಗನೃತ್ಯ ಮುಂತಾದ ಕಾರ್ಯಕ್ರಮಗಳು ಜನಮನರಂಜಿಸಿತು.
ಮಿಸ್ ಯುನಿವರ್ಸ್ ಪಿಟೈಟ್ ಡಾ. ಶೃತಿ ಹೆಗಡೆ. ಅಜಿತ್ ಬೊಪ್ಪನಹಳ್ಳಿ, ಮಹಾಸಭೆಯ ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿಘ್ನೇಶ ಸಂಪ, ಉಪಾಧ್ಯಕ್ಷ ಶ್ರೀಧರ ಭಟ್ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ ಭಟ್, ಆದಿತ್ಯ ಕಲಗಾರು, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್, ಕಾರ್ಯಕ್ರಮದ ಸಂಚಾಲಕ ದಿನೇಶ ಭಟ್ ಮೊದಲಾದವರು ಇದ್ದರು.