ಸಾರಾಂಶ
ಹೊನ್ನಾವರ: ತಾಲೂಕಿನ ಭಾಸ್ಕೇರಿ ಹಾಗೂ ಸಮೀಪದ ವರ್ನಕೇರಿಯ ಬಳಿ ಹೊನ್ನಾವರ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಇದೀಗ ಅವಧಿಗೂ ಮುನ್ನ ಬಂದಿರುವ ಮುಂಗಾರಿನ ಪ್ರಭಾವಕ್ಕೆ ಮತ್ತೆ ಗುಡ್ಡ ಕುಸಿತದ ಭೀತಿ ಉಂಟಾಗಿದೆ. ವರ್ನಕೇರಿಯ ಸಮೀಪ ಕಳೆದ ವರ್ಷ ಗುಡ್ಡ ಕುಸಿತ ಉಂಟಾದಲ್ಲಿಯೇ ಮತ್ತೆ ಗುಡ್ಡ ಸಣ್ಣ ಪ್ರಮಾಣದಲ್ಲಿ ಉಂಟಾಗಿದೆ.
ಕಳೆದ ವರ್ಷ ಅಂಕೋಲಾದ ಶಿರೂರಿನಲ್ಲಿ ಗುಡ್ಡ ಕುಸಿದು ಆದ ಅನಾಹುತದ ಸಂದರ್ಭದಲ್ಲಿಯೇ ಹೊನ್ನಾವರದ ಭಾಸ್ಕೇರಿ ಹಾಗೂ ವರ್ನಕೇರಿ ಬಳಿಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಯಾವುದೇ ಸಾವು- ನೋವು ಸಂಭವಿಸದೇ ಇದ್ದರೂ ಅಪಾಯದ ಮುನ್ಸೂಚನೆಯನ್ನು ನೀಡಿತ್ತು. ಈ ಬಾರಿಯೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಭಾಸ್ಕೇರಿಯಿಂದ ಸಂತೇಗುಳಿಗೆ ಹೋಗುವ ಮಾರ್ಗದ ಬಳಿ ಗುಡ್ಡ ಕುಸಿದು, ಆ ಮಾರ್ಗ ನಿರ್ಬಂಧಿಸಿ ಫಲಕ ಅಳವಡಿಸಲಾಗಿತ್ತು.ಆ ಕಲ್ಲು ಈಗಲೂ ಹಾಗೆ ಇದೆ. ಆ ರಸ್ತೆಯ ಹತ್ತಿರ ಮತ್ತೆ ಮಣ್ಣು ನಿಧಾನಕ್ಕೆ ಕುಸಿಯಲು ಪ್ರಾರಂಭಿಸಿದೆ.
ಗಟಾರದಲ್ಲಿ ತುಂಬಿದೆ ಮಣ್ಣು:
ಇನ್ನು ವರ್ನಕೇರಿಯಿಂದ ಭಾಸ್ಕೇರಿ ವರೆಗೆ ಕಳೆದ ವರ್ಷದಲ್ಲಿ ಬಿದ್ದ ಮಳೆಯಿಂದ ಆದ ಗುಡ್ಡ ಕುಸಿತದ ಮಣ್ಣು, ದೊಡ್ಡ ಕಲ್ಲುಗಳನ್ನು ರಸ್ತೆಯ ಪಕ್ಕದ ಗಟಾರದಿಂದ ಇನ್ನು ತೆಗೆದಿಲ್ಲ. ಗಟಾರದ ಮಧ್ಯದಲ್ಲೆ ಮಣ್ಣಿನ ರಾಶಿ ಹಾಗೂ ಕಲ್ಲು ಬಿದ್ದಿದ್ದು, ಈಗ ಬರುತ್ತಿರುವ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಜತೆಗೆ ಮಳೆಯ ಪ್ರಮಾಣ ಇನ್ನು ಜೋರಾಗಿ ಮಳೆ ಬಿದ್ದಾಗ ಗಟಾರದಲ್ಲಿ ಹರಿಯಬೇಕಾದ ನೀರು ರಸ್ತೆಯ ಮೇಲೆ ತುಂಬಿ ಹರಿಯಬೇಕಾಗುತ್ತದೆ.
ಇನ್ನು ಮಳೆಗಾಲ ಆರಂಭ ಆಗುತ್ತದೆ ಇನ್ನು ಎಂದು ತಿಳಿದಿದ್ದರೂ ಲೋಕೋಪಯೋಗಿ ಇಲಾಖೆ ಆಗಲಿ, ತಾಲೂಕು ಆಡಳಿತವಾಗಲಿ ಗಮನ ಹರಿಸಿಲ್ಲ. ಅಲ್ಲದೆ, ಇದು ಮುಗ್ವಾ ಗ್ರಾಪಂ ವ್ಯಾಪ್ತಿಗೆ ಬರುವುದರಿಂದ ಇಲ್ಲಿನ ಆಡಳಿತ ವರ್ಗ ಸಹ ಮುತುವರ್ಜಿ ತೋರಿಸಿದಂತೆ ಕಾಣುತ್ತಿಲ್ಲ.
ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕಾದರೆ ಈಗಲೇ ಎಚ್ಚೆತ್ತುಕೊಳ್ಳುವುದು ಸೂಕ್ತ. ಸಂಬಂಧಪಟ್ಟ ಇಲಾಖೆ ತಮ್ಮ ಜವಾಬ್ಧಾರಿಯನ್ನು ಅರಿಯಲಿ ಎಂಬುದು ಜನಸಾಮಾನ್ಯರ ಮನವಿಯಾಗಿದೆ.