ಮೌಲ್ಯಯುತ ಶಿಕ್ಷಣ ದೂರವಾಗುವ ಆತಂಕ: ಡಾ.ಮೋಹನ ಆಳ್ವ

| Published : Mar 27 2024, 01:09 AM IST

ಸಾರಾಂಶ

ರಾಜಕೀಯ ಪಕ್ಷಗಳ ಮೇಲೆ ನನಗೆ ಗೌರವ ಇದೆ, ಆದರೆ ರಾಜಕೀಯ ಪಕ್ಷಗಳಿಂದ ನಾನು ದೂರ ಇದ್ದೇನೆ. ಬಾಲ್ಯದಿಂದ ಇಲ್ಲಿವರೆಗೂ ನಾನು ಇನ್ನೊಬ್ಬರ ಜತೆ ಸ್ಪರ್ಧೆ ಮಾಡಿದವನಲ್ಲ ಎಂದು ಡಾ. ಮೋಹನ ಆಳ್ವ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಆಧುನಿಕ ಕಾಲಘಟ್ಟದಲ್ಲಿ ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತಿದ್ದು, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ಹೀಗಾಗಿ ಇಂದಿನ ದಿನಗಳಲ್ಲಿ ಮೌಲ್ಯಯುತ ಶಿಕ್ಷಣ ಎಲ್ಲಿ ದೂರವಾಗುತ್ತದೋ ಎಂಬ ಆತಂಕ ಎದುರಾಗಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಪ್ರೆಸ್‌ಕ್ಲಬ್‌ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಸಂವಾದ ನಡೆಸಿದರು.

ಶಿಕ್ಷಣಕ್ಕೆ ಹಾಸ್ಟೆಲ್‌ವಾಸ ಅಗತ್ಯ:

ಸುಮಾರು 20 ವರ್ಷ ಕಾಲ ಹಾಸ್ಟೆಲ್‌ನಲ್ಲಿದ್ದುಕೊಂಡು ಕಲಿತ ಬಗ್ಗೆ ಸ್ವಾನುಭವ ಹೇಳಿದ ಡಾ.ಮೋಹನ ಆಳ್ವ, ಹಾಸ್ಟೆಲ್‌ನಲ್ಲಿ ವಿದ್ಯೆ ಜತೆ ಕ್ರೀಡೆ, ಸಾಂಸ್ಕೃತಿಕಕ್ಕೂ ಒತ್ತು ನೀಡಲು ಸಾಧ್ಯವಾಗುತ್ತದೆ ಎಂಬುದು ನನ್ನ ಅನುಭವ. ಅದಕ್ಕಾಗಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಹಾಸ್ಟೆಲ್‌ ಸಹಿತ ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ ಎಂದರು.

ಪಕ್ಷಗಳಿಂದ ದೂರ:

ರಾಜಕೀಯ ಪಕ್ಷಗಳ ಮೇಲೆ ನನಗೆ ಗೌರವ ಇದೆ, ಆದರೆ ರಾಜಕೀಯ ಪಕ್ಷಗಳಿಂದ ನಾನು ದೂರ ಇದ್ದೇನೆ. ಬಾಲ್ಯದಿಂದ ಇಲ್ಲಿವರೆಗೂ ನಾನು ಇನ್ನೊಬ್ಬರ ಜತೆ ಸ್ಪರ್ಧೆ ಮಾಡಿದವನಲ್ಲ. ಯಾರಲ್ಲೂ ವೈರತ್ವ ಹೊಂದಿಲ್ಲ. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಆಯಾಮಗಳಲ್ಲೂ ನಾಯಕತ್ವ ವಹಿಸಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದರು.

ಮಂಗಳೂರು ಟುಡೇ ಮಾಸಿಕದ ಸಂಪಾದಕ ವಿ.ಯು.ಜಾರ್ಜ್‌ ಗೌರವ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ್‌ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್‌. ಇದ್ದರು.

ಮಂಗಳೂರು ಪ್ರೆಸ್‌ಕ್ಲಬ್‌ ಅಧ್ಯಕ್ಷ ಹರೀಶ್‌ ರೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಆರ್‌.ಸಿ.ಭಟ್‌ ನಿರೂಪಿಸಿದರು.

250 ಕೋಟಿ ರು.ಗಳ ಸಾಲ ಧನಿಕ!

ಡಾ.ಮೋಹನ ಆಳ್ವರು 250 ಕೋಟಿ ರು. ಸಾಲದ ಧನಿಕ. ನಾನು ಕ್ಲಿನಿಕ್‌ ತೆರೆಯುವಾಗ 1 ಲಕ್ಷ ರು. ಸಾಲ ಮಾಡಿದ್ದೆ. ನನ್ನ 125 ಎಕರೆ ವಿಶಾಲ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದ ಕ್ಯಾಂಪಸ್‌ ಅಭಿವೃದ್ಧಿಯಾಗಿದ್ದು, ಈಗ 250 ಕೋಟಿ ರು.ಗಳಷ್ಟು ಸಾಲ ಇದೆ. ಸಾಲ ಮಾಡುವುದು, ಸಾಲ ಮರು ಪಾವತಿಸುವುದರಲ್ಲಿ ಖುಷಿ ಇದೆ, ಸಾಲ ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ, ಸಾಲ ಇಲ್ಲದಿದ್ದರೆ, ಅದು ಹೆಬ್ಬಾವಿನಂತೆ ಆಲಸ್ಯತನಕ್ಕೆ ಕಾರಣವಾಗುತ್ತದೆ ಎಂದರು.ಇನ್ನು ಸಾಹಿತ್ಯ ಆಸಕ್ತರಿಗೆ ಮಾತ್ರ ನುಡಿಸಿರಿ

ಇನ್ನು ಮುಂದೆ ನುಡಿಸಿರಿ ಕಾರ್ಯಕ್ರಮ ಕೇವಲ ಸಾಹಿತ್ಯ ಆಸಕ್ತರಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಹಿಂದಿನಂತೆ ಬೇಕಾಬಿಟ್ಟಿ ಜಾತ್ರೆಯಂತೆ ಇರುವುದಿಲ್ಲ ಎಂದು ನುಡಿಸಿರಿ ರೂವಾರಿ ಡಾ.ಮೋಹನ ಆಳ್ವ ಹೇಳಿದರು.

ಈ ಬಾರಿಯ ನುಡಿಸಿರಿಗೆ ಆಸಕ್ತ ಸಾಹಿತ್ಯಾಸಕ್ತರನ್ನು ಆಹ್ವಾನಿಸಿ ವಿಭಿನ್ನ ರೀತಿಯಲ್ಲಿ ಮೂರು ದಿನಗಳ ಕಾಲ ಸಂಘಟಿಸಲಾಗುವುದು. ಆದರೆ ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮ ವಿರಾಸ್‌ ಎಂದಿನಂತೆಯೇ ನಡೆಯಲಿದೆ ಎಂದರು.