ಚಿಕ್ಕಮಗಳೂರು2029ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಕಳೆದುಕೊಳ್ಳುವ ಭಯದಿಂದಲೇ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಮೂಲಕ ಮತಗಳ್ಳತನಕ್ಕೆ ಮುಂದಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

2029ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಕಳೆದುಕೊಳ್ಳುವ ಭಯದಿಂದಲೇ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಮೂಲಕ ಮತಗಳ್ಳತನಕ್ಕೆ ಮುಂದಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಆರೋಪಿಸಿದರು.ಕಾಂಗ್ರೆಸ್‌ ಸೇರಿದಂತೆ ಇಂಡಿಯಾ ಒಕ್ಕೂಟದ ಪಕ್ಷಗಳ ನೇತೃತ್ವದಲ್ಲಿ ಗುರುವಾರ ನಗರದ ಹನುಮಂತಪ್ಪ ವೃತ್ತದಿಂದ ಗಾಂಧಿ ಪಾರ್ಕ್‌ವರೆಗೆ ‘ಪ್ರಜಾಪ್ರಭುತ್ವ ಉಳಿಸಿ, ಮತ ಬಚಾವೋ, ದೇಶ ಬಚಾವೋ’ ಘೋಷವಾಕ್ಯದೊಂದಿಗೆ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿ ಚುನಾವಣೆಯಿಂದ ಚುನಾವಣೆಗೆ ಬಿಜೆಪಿ ಹಾಗೂ ಮಿತ್ರಪಕ್ಷಗಳ ಸ್ಥಾನಗಳ ಸಂಖ್ಯೆ ಕಡಿಮೆಯಾಗುತ್ತಿದೆ. 2029ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಈ ಭಯದಿಂದಲೇ ಎಸ್‌ಐಆರ್‌ ಹೆಸರಿ ನಲ್ಲಿ ಮತಗಳ್ಳತನಕ್ಕೆ ಇಳಿದಿದ್ದಾರೆ ಎಂದು ದೂರಿದರು.ಜಾತಿ-ಧರ್ಮದ ಹೆಸರಿನಲ್ಲಿ ಸಮಾಜ ಒಡೆದಾಳುವ ಕೆಲಸ ಬಿಜೆಪಿ ಮಾಡುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್‌ ಸಂವಿಧಾನಕ್ಕೆ ಧಕ್ಕೆ ತರುವ ಪ್ರಯತ್ನ ಎನ್‌ಡಿಎ ಮೈತ್ರಿಕೂಟ ಮಾಡುತ್ತಿದೆ. ಯುವಜನರನ್ನು ಬೌದ್ಧಿಕವಾಗಿ ದಾರಿ ತಪ್ಪಿಸುವ ಕೆಲಸ ನಡೆಸ ಲಾಗಿದೆ. ಇದೀಗ ಮತಗಳ್ಳತನಕ್ಕೆ ಮುಂದಾಗಿದ್ದಾರೆ. ಇಂತಹ ಮತಗಳ್ಳರನ್ನು ಜನರು ಎಂದಿಗೂ ಕ್ಷಮಿಸಬಾರದು ಎಂದರು.ಬಿಜೆಪಿ ನೇತೃತ್ವದ ಸರ್ಕಾರವೇ ಎಸ್‌ಐಆರ್‌ ಪ್ರಕ್ರಿಯೆ ನಡೆಸುತ್ತಿದೆ. ಹೀಗಿರುವಾಗ ಚಿಕ್ಕಮಗಳೂರಿನ ಬಿಜೆಪಿ ಮುಖಂಡ ರೊಬ್ಬರು 30 ಸಾವಿರ ಹಿಂದೂಗಳ ಮತಗಳು ಹೋಗಿವೆ ಎಂದು ಹೇಳಿಕೆ ನೀಡುತ್ತಾರೆ. ಈ ರೀತಿ ಹೇಳಿಕೆ ನೀಡಲು ಯಾವ ನೈತಿಕತೆ ಇದೆ ಎಂದು ಪರೋಕ್ಷವಾಗಿ ಸಿ.ಟಿ.ರವಿ ಅವರನ್ನು ಟೀಕಿಸಿದರು.ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಮತ ಕಳ್ಳತನ ಮಾಡಲಾಗುತ್ತಿದೆ. ಸಂವಿಧಾನ ಉಳಿಸಲು ಮೊದಲು ನಮ್ಮ ಮತದ ಹಕ್ಕು ರಕ್ಷಿಸಿಕೊಳ್ಳಬೇಕು ಎಂದರು.ಸಿಪಿಐ ಮುಖಂಡ ರೇಣುಕ ಆರಾಧ್ಯ ಮಾತನಾಡಿ ಮತದಾರ ಪಟ್ಟಿ ಪರಿಷ್ಕರಣೆ ಸಾಮಾನ್ಯ ಹಾಗೂ ನಿರಂತರ ಪ್ರಕ್ರಿಯೆ ಯಾಗಿದೆ. ಮೃತಪಟ್ಟವರ ಹೆಸರು ತೆಗೆಯುವುದು, 18 ವರ್ಷ ಪೂರ್ಣಗೊಂಡ ಹೊಸ ಮತದಾರರನ್ನು ಸೇರಿಸು ವುದು ಹಿಂದಿನಿಂದಲೂ ನಡೆಯುತ್ತಿದೆ. ಆದರೆ ಈ ಪ್ರಕ್ರಿಯೆ ಇಷ್ಟೊಂದು ಗೊಂದಲಕ್ಕೆ ಕಾರಣವಾಗಿರಲಿಲ್ಲ ಎಂದರು.ತಮ್ಮ 72 ವರ್ಷಗಳ ಜೀವನದಲ್ಲಿ ಹಲವು ಚುನಾವಣೆಗಳಲ್ಲಿ ಮತದಾನ ಮಾಡಿದ್ದು, ಅನೇಕ ಬಾರಿ ಮತದಾರರ ಪಟ್ಟಿ ಪರಿ ಷ್ಕರಣೆಯನ್ನೂ ಕಂಡಿದ್ದೇನೆ. ಆದರೆ ಪ್ರಸ್ತುತ ನಡೆಯುತ್ತಿರುವ ಪರಿಷ್ಕರಣೆ ಕುರಿತು ಇಷ್ಟೊಂದು ವಿವಾದ ಉಂಟಾಗಿರು ವುದೇಕೆ ಎಂಬುದನ್ನು ಜನರು ಪ್ರಶ್ನಿಸಬೇಕಿದೆ ಎಂದರು.ಮತದಾರರ ಪಟ್ಟಿ ಪರಿಷ್ಕರಣೆ ಉದ್ದೇಶ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುವುದಲ್ಲ. ಮತದಾನದಿಂದ ಹೊರ ಗುಳಿ ದಿರುವ ಅರ್ಹರನ್ನು ಗುರುತಿಸಿ ಪಟ್ಟಿಗೆ ಸೇರಿಸುವುದಾಗಿರಬೇಕು. ಆದರೆ ಈಗ ಯಾರನ್ನು ಯಾವ ಕಾರಣಕ್ಕೆ ಕೈಬಿಡಬೇಕು ಎಂಬ ರೀತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಸಿಪಿಐ ಮುಖಂಡ ರಘು,ಎಐಟಿಯುಸಿ ಮುಖಂಡ ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ಮಲ್ಲೇಶ್ ಸ್ವಾಮಿ, ಬೆಟಗೆರೆ ಪ್ರವೀಣ್, ತನೋಜ್ ನಾಯ್ಡು, ರಸೂಲ್ ಖಾನ್, ಸಿಪಿಐ ಮುಖಂಡರಾದ ರಾಧಾಸುಂದರೇಶ್, ವಸಂತ್ ಕುಮಾರ್ ಮತ್ತಿತರರು ಇದ್ದರು.