ಅರಸೀಕೆರೆಯಲ್ಲಿ ಬೀದಿ ನಾಯಿಗಳಿಂದ ಆತಂಕ: ಸಾರ್ವಜನಿಕರ ಕಿಡಿ

| Published : Apr 29 2024, 01:35 AM IST

ಅರಸೀಕೆರೆಯಲ್ಲಿ ಬೀದಿ ನಾಯಿಗಳಿಂದ ಆತಂಕ: ಸಾರ್ವಜನಿಕರ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಕು ಪ್ರಾಣಿಗಳ ಜೀವಕ್ಕೆ ಸಂಚಕಾರ ಮತ್ತೊಂದೆಡೆ ಮಹಿಳೆಯರು ಮಕ್ಕಳು ನಗರದ ರಸ್ತೆಗಳಲ್ಲಿ ಓಡಾಡಲು ಭಯಪಡುವಂತ ಸನ್ನಿವೇಶವನ್ನು ಬೀದಿ ನಾಯಿಗಳು ಅರಸೀಕೆರೆ ನಗರದಲ್ಲಿ ಸೃಷ್ಟಿಸಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಾಕು ಪ್ರಾಣಿಗಳ ಜೀವಕ್ಕೆ ಸಂಚಕಾರ ಮತ್ತೊಂದೆಡೆ ಮಹಿಳೆಯರು ಮಕ್ಕಳು ನಗರದ ರಸ್ತೆಗಳಲ್ಲಿ ಓಡಾಡಲು ಭಯಪಡುವಂತ ಸನ್ನಿವೇಶವನ್ನು ಬೀದಿ ನಾಯಿಗಳು ನಗರದಲ್ಲಿ ಸೃಷ್ಟಿಸಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿರುವ ಬೀದಿನಾಯಿಗಳು ನಗರ ವ್ಯಾಪ್ತಿಯ ಅಲ್ಲಲ್ಲಿ ಹಿಂಡು ಹಿಂಡಾಗಿ ಕಾಣಬಹುದು. ಇವುಗಳ ಅಟ್ಟಹಾಸ ಎಲ್ಲೆ ಮೀರಿದ್ದು ಸಾಕು ಪ್ರಾಣಿಗಳ ಬಲಿ ತೆಗೆದುಕೊಳ್ಳುತ್ತಿವೆ. ಮತ್ತೊಂದೆಡೆ ಮಹಿಳೆಯರು ಮಕ್ಕಳು ನಗರ ವ್ಯಾಪ್ತಿಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ.

ಕುರಿ, ಕೋಳಿ, ಹಂದಿ, ಕರು ಹೀಗೆ ಸಾಕುಪ್ರಾಣಿಗಳ ಮೇಲೆ ಎರಗಿ ಬಲಿ ತೆಗೆದುಕೊಳ್ಳುತ್ತಿರುವ ಬೀದಿ ನಾಯಿಗಳ ಹಾವಳಿಯಿಂದ ರೋಸಿ ಹೋಗಿರುವ ಸಾಕುಪ್ರಾಣಿಗಳ ಮಾಲೀಕರು ನಾಯಿಗಳ ಹಾವಳಿ ತಪ್ಪಿಸಿ ಎಂದು ನಗರಸಭೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ೨೦೦೬ ಟಿಎಚ್ ರಸ್ತೆ ಸೇರಿದಂತೆ ರೈಲು ಮತ್ತು ಬಸ್ಸು ನಿಲ್ದಾಣ ಮಾರುತಿ ನಗರ, ಲಕ್ಷ್ಮಿಪುರ, ಶಾನುಭೋಗರ ಬೀದಿ ಸುತ್ತಮುತ್ತ ಮುಜಾರ್ ಮಹಲ, ಮಟನ್ ಮಾರುಕಟ್ಟೆ, ಸಿದ್ದಪ್ಪನಗರ, ಶ್ರೀನಿವಾಸ ನಗರ.ಹೀಗೆ ನಗರದ ಬಹುತೇಕ ಬಡಾವಣೆಗಳು ಬೀದಿ ನಾಯಿಗಳ ಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

ಕಳೆದ ಒಂದು ವರ್ಷದಿಂದ ಈಚೆಗೆ ನೂರಾರು ಸಾಕುಪ್ರಾಣಿಗಳನ್ನು ಬಲಿ ತೆಗೆದುಕೊಂಡು ಹತ್ತಾರು ಮಕ್ಕಳು ಹಾಗೂ ವೃದ್ಧರ ಮೇಲೆ ಏಕಾಏಕಿ ಎರಗಿ ಗಾಯಗೊಳಿಸಿರುವ ಈ ಬೀದಿ ನಾಯಿಗಳ ಅಟ್ಟಹಾಸಕ್ಕೆ ಎಂದು ಕಡಿವಾಣ ಬೀಳುತ್ತದೆಯೋ ಎಂದು ನಗರದ ಜನತೆ ನಗರಸಭೆಯನ್ನು ಶಪಿಸುತ್ತಲೇ ದಿನ ದೂಡುತ್ತಿದ್ದಾರೆ.

‘ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ನನ್ನ ಆರು ಹಾಡುಗಳನ್ನು ಬೀದಿ ನಾಯಿಗಳು ಬಲಿ ತೆಗೆದುಕೊಂಡವು. ಇದಕ್ಕೆ ಸ್ಥಳೀಯ ನಗರಸಭೆ ಅಥವಾ ಸರ್ಕಾರದಿಂದ ಯಾವುದೇ ಪರಿಹಾರವು ದೊರೆಯಲಿಲ್ಲ’ ಎಂದು ಮಾಧ್ಯಮದ ಮುಂದೆ ಅಳಲು ತೋಡಿಕೊಳ್ಳುತ್ತಾರೆ ಸಾಕುಪ್ರಾಣಿಯ ಮಾಲಿಕ ರಾಘವೇಂದ್ರ.