ತಹಸೀಲ್ದಾರ ನಾಗೇಂದ್ರ ಭೇಟಿ: ಸುಳ್ಳು ವದಂತಿ ನಂಬಬೇಡಿ, ಪೆಟ್ರೋಲ್ ಕೊರತೆ ಆಗಿಲ್ಲ
ಕನ್ನಡಪ್ರಭ ವಾರ್ತೆ ಭಟ್ಕಳಇರಾನ್-ಇಸ್ರೇಲ್ ಯುದ್ಧ ನಡೆಯುತ್ತಿರುವ ಹಿನ್ನೆಲೆ ಪೆಟ್ರೋಲ್-ಡಿಸೇಲ್ ಅಭಾವ ಉಂಟಾಗಬಹುದು ಅಥವಾ ದರ ಏರಿಕೆ ಆಗಬಹುದು ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿದ ಹಿನ್ನೆಲೆ ಬುಧವಾರ ಭಟ್ಕಳದ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್, ಡಿಸೇಲ್ ತುಂಬಿಸಿಕೊಳ್ಳಲು ವಾಹನಗಳ ಸರದಿ ಸಾಲು ಉಂಟಾಗಿತ್ತು.
ಪಟ್ಟಣದ ನಾಲ್ಕೂ ಪೆಟ್ರೋಲ್ ಬಂಕ್‌ಗಳಲ್ಲಿ ಬೆಳಗಿನ ಜಾವದಿಂದಲೇ ಕ್ಯೂ ಉಂಟಾಗಿತ್ತು. ವೃತ್ತದ ಪೆಟ್ರೋಲ್ ಬಂಕಿನಲ್ಲಿ ಮಧ್ಯಾಹ್ನವೇ ಪೆಟ್ರೋಲ್ ಸ್ಟಾಕ್ ಖಾಲಿಯಾಗಿತ್ತು. ಜನರು ವಾಹನಕ್ಕೆ ಪೆಟ್ರೋಲ್ ಹಾಕಿಸಿದ್ದಲ್ಲದೇ ಕ್ಯಾನುಗಳಲ್ಲಿ, ಬಾಟಲಿಗಳಲ್ಲಿ ಪೆಟ್ರೋಲ್ ಒಯ್ದಿದ್ದರಿಂದ ಪೆಟ್ರೋಲ್ ಖಾಲಿಯಾಗುವಂತಾಯಿತು. ಕಾಮಾಕ್ಷಿ ಬಂಕ್‌ಗಳಲ್ಲಿ ಪೆಟ್ರೋಲ್ ಟ್ಯಾಂಕರ್‌ಗಳನ್ನು ತರಿಸಿ ರಾತ್ರಿಯ ವರೆಗೂ ಪೆಟ್ರೋಲ್, ಡಿಸೇಲ್ ಗ್ರಾಹಕರಿಗೆ ನೀಡಲಾಗಿದೆ. ಯಾರೋ ಸುಳ್ಳು ವದಂತಿ ಹಬ್ಬಿಸಿದ್ದರಿಂದ ಬಂಕ್‌ಗಳಲ್ಲಿ ಈ ರೀತಿ ಕ್ಯೂ ನಿಲ್ಲುವಂತಾಗಿದೆ. ಬಂಕಿಗೆ ಒಮ್ಮೇಲೆ ಜನರು ವಾಹನಗಳನ್ನು ತಂದಿದ್ದರಿಂದ ಪೆಟ್ರೋಲ್, ಡಿಸೇಲ್ ಹಾಕುವ ಹುಡುಗರು ಹೈರಾಣಾದರು. ವಿಶೇಷವೆಂದರೆ ಕ್ಯೂ ರಸ್ತೆಯ ವರೆಗೂ ಬಂದಿತ್ತು. ಪೆಟ್ರೋಲ್-ಡಿಸೇಲ್ ಕೊರೆತೆ ಉಂಟಾಗಿಲ್ಲ. ಹೊರದೇಶದ ಯುದ್ಧದಿಂದ ಸದ್ಯ ಭಾರತಕ್ಕೆ ತೈಲ ಸರಬರಾಜಿನಲ್ಲಿ ಯಾವುದೇ ತೊಂದರೆ ಆಗಿಲ್ಲ ಎಂದು ಬಂಕಿನವರು ಸ್ಪಷ್ಟಪಡಿಸಿದ್ದರೂ ಸಹ ಜನರು ಇವರ ಮಾತನ್ನು ಕೇಳದೇ ವದಂತಿಯನ್ನೇ ನಂಬಿ ಪೆಟ್ರೋಲ್ ಹಾಕಲು ತಂಡೋಪತಂಡವಾಗಿ ವಾಹನಗಳನ್ನು ತಂದ ಘಟನೆಯೂ ನಡೆಯಿತು.ಮಧ್ಯಾಹ್ನ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿಯವರೂ ಸಹ ಪೆಟ್ರೋಲ್ ಬಂಕ್‌ಗಳಿಗೆ ತೆರಳಿ ಪರಿಶೀಲಿಸಿ, ವಾಹನಗಳ ಟ್ಯಾಂಕುಗಳಿಗೆ ಮಾತ್ರ ಪೆಟ್ರೋಲ್ ತುಂಬಿಸಬೇಕು. ಯಾವುದೇ ಕಾರಣಕ್ಕೂ ಕ್ಯಾನುಗಳಿಗೆ, ಬಾಟಲಿಗಳಿಗೆ ಪೆಟ್ರೋಲ್ ತುಂಬಿಸಿಕೊಡಬಾರದು ಎಂದು ಬಂಕ್ ಮಾಲೀಕರಿಗೆ ತಿಳಿಸಿದ್ದಾರೆ. ಪೆಟ್ರೋಲ್ ಸಿಗುವುದಿಲ್ಲ ಅಥವಾ ದರ ಏರಿಕೆ ಎನ್ನುವುದು ಕೇವಲ ವಂದತಿ ಆಗಿದ್ದು, ಇದನ್ನು ನಂಬಬಾರದು ಎಂದು ಕ್ಯೂ ನಿಂತ ಗ್ರಾಹಕರಿಗೂ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪೆಟ್ರೋಲ್ ದರ ಏರಿಕೆ ಮತ್ತು ಕೊರತೆ ಉಂಟಾಗಲಿದೆ ಎನ್ನುವ ಬಗ್ಗೆ ಯಾರೋ ವದಂತಿ ಹಬ್ಬಿಸಿದ್ದರಿಂದಲೇ ಪೆಟ್ರೋಲ್ ಬಂಕುಗಳಲ್ಲಿ ಜನರು ವಾಹನಗಳೊಂದಿಗೆ ಕ್ಯೂ ನಿಲ್ಲುವಂತಾಗಿದೆ. ಈ ಸುದ್ದಿ ತಾಲೂಕಿನಾದ್ಯಂತ ಹರಡಿ ಹಳ್ಳಿಗಳಿಂದಲೂ ಜನರು ಪೆಟ್ರೋಲ್ ಹಾಕಿಸಲು ಬಂಕ್ ಗೆ ತರುವಂತಾಯಿತು. ಈ ಕುರಿತು ಪ್ರತಿಕ್ರಿಯಿಸಿದ ಕಾಮಾಕ್ಷಿ ಪೆಟ್ರೋಲ್ ಬಂಕ್ ಮಾಲೀಕ ನಾಗೇಶ ಭಟ್, ಇಸ್ರೇಲ್-ಇರಾನ್ ಯುದ್ಧದಿಂದ ಪೆಟ್ರೋಲ್ ಕೊರತೆ ಉಂಟಾಗಲಿದೆ ಎನ್ನುವ ಬಗ್ಗೆ ಭಟ್ಕಳದಲ್ಲಿ ಕೆಲವರು ಸುಳ್ಳು ವದಂತಿ ಹಬ್ಬಿಸಿದ್ದರಿಂದ ಬೆಳಗ್ಗೆ ಜನರು ಪೆಟ್ರೋಲ್ ಗಾಗಿ ಕ್ಯೂ ನಿಲ್ಲುವಂತಾಗಿದೆ. ಕಂಪೆನಿಯಿಂದ ನಮಗೆ ಪೆಟ್ರೋಲ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಬಗ್ಗೆ ಯಾವುದೇ ಸಂದೇಶ ಬಂದಿಲ್ಲ. ಪೆಟ್ರೋಲ್-ಡಿಸೇಲ್ ಎಂದಿನಂತೆ ಕಳುಹಿಸುತ್ತಿದ್ದಾರೆ. ಜನರು ಸುಳ್ಳು ವದಂತಿ ನಂಬಬಾರದು ಎಂದು ತಿಳಿಸಿದ್ದಾರೆ.