ಮಾಧ್ಯಮಗಳಲ್ಲಿ ನಿರ್ಭೀತ ಬರವಣಿಗೆ ಮಾಯ: ಹೊರಟ್ಟಿ

| Published : Jun 30 2025, 12:34 AM IST

ಸಾರಾಂಶ

ಪುಸ್ತಕ ಬರೆಯುವವರ ಸಂಖ್ಯೆಯೂ ಈಗ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಹಬ್ಬು ಅವರು ನಾಡಿಗೆ ಉತ್ತಮ ಪುಸ್ತಕ ನೀಡಿದ್ದಾರೆ. ಪತ್ರಕರ್ತರಾಗಿದ್ದುಕೊಂಡು ಪುಸ್ತಕ ರಚನೆ ಸುಲಭ ಕಾರ್ಯವಲ್ಲ. ಅವರ ಈ ಕಾರ್ಯ ಅಭಿನಂದನೀಯ.

ಹುಬ್ಬಳ್ಳಿ: ಸಂವಿಧಾನದ ಮೂರೂ ಅಂಗಗಳಲ್ಲಿ ಸುಧಾರಣೆ ತರುವವುದು ನಾಲ್ಕನೇ ಅಂಗವಾದ ಮಾಧ್ಯಮದ ಕರ್ತವ್ಯ. ಆದರೆ, ಇತ್ತೀಚಿಗೆ ಮಾಧ್ಯಮಗಳಲ್ಲಿ ನಿರ್ಭೀತಿಯ ಬರವಣಿಗೆ ಕಂಡುಬರುತ್ತಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿಷಾಧಿಸಿದರು.

ಡಾ. ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನ, ಸಂಯುತಾ ಪ್ರತಿಷ್ಠಾನ, ಕನ್ನಡ ಧ್ವನಿ ಟ್ರಸ್ಟ್ ಮತ್ತು ಹು-ಧಾ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದ ಹವ್ಯಕ ಭವನದಲ್ಲಿ ಆಯೋಜನೆಯಾಗಿದ್ದ ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರ ''''''''ಬೊಗಸೆ ನೀರು'''''''' ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಪುಸ್ತಕ ಬರೆಯುವವರ ಸಂಖ್ಯೆಯೂ ಈಗ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಹಬ್ಬು ಅವರು ನಾಡಿಗೆ ಉತ್ತಮ ಪುಸ್ತಕ ನೀಡಿದ್ದಾರೆ. ಪತ್ರಕರ್ತರಾಗಿದ್ದುಕೊಂಡು ಪುಸ್ತಕ ರಚನೆ ಸುಲಭ ಕಾರ್ಯವಲ್ಲ. ಅವರ ಈ ಕಾರ್ಯ ಅಭಿನಂದನೀಯ ಎಂದರು.

ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ ಅವರು, ಹಬ್ಬು ಅವರ ಕುಟುಂಬವೇ ಸಾಹಿತ್ಯ ಕ್ಷೇತ್ರದಲ್ಲಿರುವುದು, ಸೃಜನಶೀಲ, ಕ್ರಿಯಾಶೀಲವಾಗಿರುವುದು ಹೆಮ್ಮೆಯ ವಿಷಯ. ಜೀವನದ ಕಥೆ ಜತೆ ವೃತ್ತಿ ಜೀವನದಲ್ಲಿ ಎದುರಿಸಿದ ಸವಾಲುಗಳನ್ನು ದಾಖಲಿಸಿದ್ದಾರೆ. ಇದು ಹೊಸ ಪತ್ರಕರ್ತರ ಪಾಲಿಗೆ ಮಾದರಿಯಾಗಲಿದೆ ಎಂದರು.

ಧಾರವಾಡ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಸಾಹಿತ್ಯಿಕ ಕಾರ್ಯ ಖುಷಿಕೊಟ್ಟಿದೆ. ಇಲ್ಲಿನ ಸಾಹಿತಿಗಳು ವಿದ್ಯಾವರ್ಧಕ ಸಂಘದ ಮೂಲಕ ಸಾಹಿತ್ಯಿಕ ಕಾರ್ಯಕ್ರಮ ನಡೆಸಲು ಕೈಜೋಡಿಸಲಿ ಎಂದು ಆಶಿಸಿದರು. ಬೊಗಸೆ ಮೂಲಕ ನೀರು ಹಾಕುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಪತ್ರಕರ್ತ ಗಣಪತಿ ಗಂಗೊಳ್ಳಿ ಪುಸ್ತಕ ಅವಲೋಕನ ಮಾಡಿದರು. ಹು-ಧಾ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ವಿ.ಎಂ. ಭಟ್ ಅಧ್ಯಕ್ಷತೆ ವಹಿಸಿದ್ದರು. ಸುಶೀಲೇಂದ್ರ ಕುಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಬ್ಬು ಅವರು ತಮ್ಮ ಬದುಕಿನ ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಹಲವರನ್ನು ಸನ್ಮಾನಿಸಲಾಯಿತು. ಮಾಜಿ ಮೇಯರ್ ಪಾಂಡುರಂಗ ಪಾಟೀಲ, ಮೋಹನ ಹೆಗಡೆ, ಬಂಡು ಕುಲಕರ್ಣಿ, ವೆಂಕಟೇಶ ಪ್ರಭು, ಮಲ್ಲಿಕಾರ್ಜುನ ಸಿದ್ದಣ್ಣವರ ಸೇರಿದಂತೆ ಪತ್ರಕರ್ತರು, ಸಾಹಿತಿಗಳು ಮತ್ತಿತರರು ಭಾಗವಹಿಸಿದ್ದರು.