ಮಳೆಗೆ ಮತ್ತೆ ಬೆಳೆಹಾನಿಯ ಆತಂಕ!

| Published : Sep 29 2025, 03:02 AM IST

ಸಾರಾಂಶ

ನವಲಗುಂದ ತಾಲೂಕಿನಲ್ಲಿ ಮಲೆನಾಡು ಮೀರಿಸುವಂತೆ ಮಳೆ ಸುರಿಯುತ್ತಿದ್ದು, ಬೆಳೆದು ನಿಂತ ಫಸಲು ಹಾಳಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ಆದ ಅತಿವೃಷ್ಟಿಯ ಪರಿಹಾರ ರೈತರ ಕೈ ತಲುಪುವ ಮುನ್ನ ಅಳಿದುಳಿದ ಬೆಳೆಯೂ ಈಗ ಹಾಳಾಗಿ ಮತ್ತೆ ರೈತರು ಹಾನಿ ಅನುಭವಿಸುವಂತಾಗಿದೆ.

ಫಕೃದ್ದೀನ್ ಎಂ.ಎನ್.

ನವಲಗುಂದ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳು ಸೇರಿದಂತೆ ಹಲವು ಹಳ್ಳಗಳು ತುಂಬಿ ಹರಿಯುತ್ತಿದ್ದು, ಹಳ್ಳದ ನೆರೆಯಿಂದ ರೈತರು ಬೆಳೆದ ಬೆಳೆಗಳೂ ನೀರಲ್ಲಿ ಮುಳುಗಿವೆ.

ತಾಲೂಕಿನಲ್ಲಿ ಮಲೆನಾಡು ಮೀರಿಸುವಂತೆ ಮಳೆ ಸುರಿಯುತ್ತಿದ್ದು, ಬೆಳೆದು ನಿಂತ ಫಸಲು ಹಾಳಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ಆದ ಅತಿವೃಷ್ಟಿಯ ಪರಿಹಾರ ರೈತರ ಕೈ ತಲುಪುವ ಮುನ್ನ ಅಳಿದುಳಿದ ಬೆಳೆಯೂ ಈಗ ಹಾಳಾಗಿ ಮತ್ತೆ ರೈತರು ಹಾನಿ ಅನುಭವಿಸುವಂತಾಗಿದೆ.

ಒಕ್ಕಲಿಗೆ ಬಂದ ಗೋವಿನಜೋಳ, ಈರುಳ್ಳಿ ಹಾಗೂ ಹತ್ತಿ ಬೆಳೆಗಳು ನಿರಂತರ ಮಳೆಯಿಂದ ಹಾಳಾಗುವ ಭೀತಿಯಲ್ಲಿವೆ. ಈಗಾಗಲೇ ಮುಂಗಾರು ಹಂಗಾಮಿನ ಹೆಸರು ಹಾಗೂ ಉದ್ದಿನ ಬೆಳೆಗಳು ನೀರು ಪಾಲಾಗಿದ್ದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದು, ಪ್ರಸ್ತುತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮತ್ತಷ್ಟು ಆತಂಕ ಮನೆ ಮಾಡಿದೆ.

ಜತೆಗೆ ಮಣ್ಣಿನಿಂದ ನಿರ್ಮಿಸಿದ ಮನೆಗಳ ಚಾವಣಿಗಳು ಸೋರುತ್ತಿದ್ದು, ನಾಗರಿಕರು ತಾಡಪತ್ರಿಗಳನ್ನು ಹಾಕಿ ರಕ್ಷಣೆ ಪಡೆಯುತ್ತಿದ್ದಾರೆ. ಬೆಣ್ಣಿಹಳ್ಳ ಹಾಗೂ ತುಪ್ಪರಿ ಹಳ್ಳಗಳ ಪ್ರವಾಹ ಏರು ಗತಿಯಲ್ಲಿದ್ದು ಇನ್ನೂ ಎರಡು ದಿನಗಳ ವರೆಗೆ ಹಳ್ಳದ ಹರಿವು ಕಡಿಮೆ ಆಗುವ ಸಾಧ್ಯತೆಗಳು ಕಾಣುತ್ತಿಲ್ಲ.

ಶುಕ್ರವಾರ ರಾತ್ರಿ ಸುರಿದ ಮಳೆಗೆ ತುಪ್ಪರಿಹಳ್ಳದ ಪ್ರವಾಹದಿಂದ ನಾಗನೂರು, ಸೊಟಕನಾಳ ಹಾಗೂ ಕಡದಳ್ಳಿ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿತ್ತು.

ಮನೆ ಕುಸಿತ: ತಾಲೂಕಿನ ಬೆಳವಟಗಿ ಹಾಗೂ ಅಳಗವಾಡಿ ಗ್ರಾಮಗಳಲ್ಲಿ 5 ಮನೆಗಳು ಕುಸಿದು ಬಿದ್ದಿದ್ದು, ನವಲಗುಂದ ಪಟ್ಟಣದಲ್ಲಿಯೂ 6 ಮನೆಗಳು ಬಿದ್ದಿರುವ ಕುರಿತು ವರದಿಯಾಗಿದೆ.

ನವಲಗುಂದ ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ರೈತರು ತತ್ತರಿಸಿ ಹೋಗಿದ್ದಲ್ಲದೆ ಮತ್ತೆ ಈಗ ಆರಂಭವಾಗಿರುವ ಮಳೆಯಿಂದ ಗೋವಿನಜೋಳ, ಈರುಳ್ಳಿ, ಕಬ್ಬು ಸೇರಿದಂತೆ ಎಲ್ಲ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ಈ ಹಿಂದೆ ಮುಂಗಾರು ಮಳೆಗೆ ಹಾಳಾದ ಹೆಸರು, ಉದ್ದು ಹಾಗೂ ಇತರ ಬೆಳೆಗೆ ಇದುವರೆಗೂ ಪರಿಹಾರ ಬಿಡುಗಡೆಯಾಗಿಲ್ಲ. ಸರ್ಕಾರ ಕೂಡಲೇ ಬೆಳೆ ಹಾನಿ ಪರಿಹಾರ ನೀಡದಿದ್ದಲ್ಲಿ ರೈತರೊಂದಿಗೆ ಸೇರಿ ಉಗ್ರ ಹೋರಾಟ ಮಾಡಲಾಗುವುದು ನವಲಗುಂದ ತಾಲೂಕು ಬಿಜೆಪಿ ಅಧ್ಯಕ್ಷ ಗಂಗಪ್ಪ ಮನಮಿ ಹೇಳಿದರು.

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ರೈತರು ತಮ್ಮ ದನ- ಕರುಗಳೊಂದಿಗೆ ಹಳ್ಳವನ್ನು ದಾಟುವ ಪ್ರಯತ್ನ ಮಾಡದೇ ಮುನ್ನೆಚ್ಚರಿಕೆ ವಹಿಸಬೇಕು ತಹಸೀಲ್ದಾರ್‌ ಸುಧೀರ ಸಾಹುಕಾರ ಹೇಳಿದರು.