ಫೆ.17ರೊಳಗೆ ಎಚ್ಎಸ್ಆರ್‌ಪಿ ಸಂಖ್ಯಾಫಲಕ ಅಳವಡಿಸಿ

| Published : Feb 09 2024, 01:49 AM IST

ಸಾರಾಂಶ

ಆನ್‌ಲೈನ್‌ನಲ್ಲಿ ಬುಕ್‌ ಮಾಡಿ ಅಳವಡಿಸಿಕೊಳ್ಳುವಂತೆ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಸೂಚನೆ. ಆನ್‌ಲೈನ್‌ನಲ್ಲಿ ತೊಂದರೆ ಆದರೆ ಸಹಾಯವಾಣಿ 94498 63429, 94498 63426 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯದಲ್ಲಿ 2019ರ ಏ.1ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ( ಎಚ್ಎಸ್ಆರ್‌ಪಿ) ಅಳವಡಿಸುವುದು ಕಡ್ಡಾಯವಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ದ್ವಿಚಕ್ರ, ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳು ಎಚ್ಎಸ್ಆರ್‌ಪಿ ಪಡೆಯಬೇಕು.

https//transport.karnataka.gov.in ಅಥವ www.siam.in ಗೆ ಭೇಟಿ ನೀಡಿ ಮತ್ತು Book HSRP ಕ್ಲಿಕ್ ಮಾಡಿ ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಬೇಕು. ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ ಎಚ್ಎಸ್ಆರ್‌ಪಿ ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳ ಆಯ್ಕೆ ಮಾಡಬೇಕು. ಬಳಿಕ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು. ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಚ್ಎಸ್ಆರ್‌ಪಿ ಅಳವಡಿಕೆಯ ದಿನಾಂಕ ಮತ್ತು ಸಮಯ ಆಯ್ಕೆ ಮಾಡಿ. ನಿಮ್ಮ ವಾಹನದ ಯಾವುದೇ ತಯಾರಕ/ ಡೀಲರ್ ಸಂಸ್ಥೆಗೆ ಭೇಟಿ ನೀಡಿ, ವಾಹನ ಮಾಲೀಕರ ಕಚೇರಿ ಆವರಣ/ ಮನೆಯ ಸ್ಥಳದಲ್ಲಿ ಎಚ್ಎಸ್ಆರ್‌ಪಿ ಅಳವಡಿಕೆಗಾಗಿ ಆಯ್ಕೆ ಮಾಡಬಹುದು.

ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್‌/ ಐಎನ್‌ಡಿ ಮಾರ್ಕ್/ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೀಯ ಎಚ್ಎಸ್ಆರ್‌ಪಿ ಒಂದೇ ರೀತಿಯ ಪ್ಲೇಟ್‌ /ಸ್ಮಾರ್ಟ್ ನಂಬರ್ ಪ್ಲೇಟ್‌ ಅಳವಡಿಸುವಂತಿಲ್ಲ. ಅವು ಎಚ್ಎಸ್ಆರ್‌ಪಿ ಫಲಕಗಳಾಗಿರುವುದಿಲ್ಲ.

ಎಚ್ಎಸ್ಆರ್‌ಪಿ ಅಳವಡಿಸದ ವಿನಾ ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು ನಮೂದು/ ರದ್ದತಿ, ಅರ್ಹತಾ ಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳನ್ನು ಅನುಮತಿಸುವುದಿಲ್ಲ. ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ 30 ದಿನಗಳವರೆಗೆ ರಶೀದಿ ಪ್ರಸ್ತುತ ಪಡಿಸುವ ವಾಹನಗಳಿಗೆ ಯಾವುದೇ ದಂಡವಿಲ್ಲ. ಎಚ್ಎಸ್ಆರ್‌ಪಿ ಅಳವಡಿಕೆಗೆ ಫೆ.17ರವರೆಗೆ ವಿಸ್ತರಿಸಲಾಗಿದೆ. ಸಾರ್ವಜನಿಕರು ಆನ್ ಲೈನ್ ಮೂಲಕ ಪಡೆಯಲು ತೊಂದರೆಗಳಾದಲ್ಲಿ ಕೆಳಕಂಡ ದೂರವಾಣಿ ಅಥವಾ ಸಹಾಯವಾಣಿ 94498 63429 & 94498 63426 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.