ಕನ್ನಡಪ್ರಭ ವಾರ್ತೆ ಕೋಲಾರತಿಂಡಿ ತಿನಿಸು ಸವಿಯಲು ಜನರಿಗೆ ಫುಡ್ ಸ್ಟ್ರೀಟ್, ಹೋಟೆಲ್ ವ್ಯವಸ್ಥೆ ಇರುವಂತೆ ಬೀದಿನಾಯಿಗಳಿಗೂ ‘ಮಿನಿ ಹೋಟೆಲ್’ ರೀತಿಯ ಫೀಡಿಂಗ್ ಜೋನ್ ನಿರ್ಮಿಸಲಾಗಿದೆ.ಬಡಾವಣೆಗಳಲ್ಲಿ ಬೀದಿನಾಯಿಗಳಿಗೆ ಸಾರ್ವಜನಿಕರು ಎಲ್ಲಿಬೇಕೆಂದರಲ್ಲಿ ಊಟ ಹಾಕುವುದನ್ನು ತಪ್ಪಿಸಲು ಹಾಗೂ ನೈರ್ಮಲ್ಯ ಕಾಪಾಡಲು ಕೋಲಾರ ನಗರಸಭೆಯು ಪ್ರತ್ಯೇಕ ಸ್ಥಳ ನಿಗದಿ ಮಾಡಿದೆ.ಸಾರ್ವಜನಿಕರು ಬೀದಿನಾಯಿಗಳಿಗೆ ಒಂದೇ ಕಡೆ ಆಹಾರ ಹಾಕಲು ಅನುಕೂಲವಾಗುವಂತೆ ಪ್ಲಾಸ್ಟಿಕ್‌ನ ನಾಲ್ಕು ದೊಡ್ಡ ಬೌಲ್ ರೀತಿ ಮಾಡಿ ಬಿಸಿಲು, ಮಳೆಯಿಂದ ರಕ್ಷಣೆ ಒದಗಿಸಲು ತಗಡಿನ ಚಾವಣಿ ನಿರ್ಮಿಸಿದೆ. ವಾರ್ಡ್‌ಗೆ ಎರಡರಂತೆ ಇಂಥ ಆಹಾರ ಶೆಲ್ಟರ್ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ನಾಮಫಲಕವನ್ನೂ ಹಾಕಲಾಗುತ್ತಿದೆ.ಸಾರ್ವಜನಿಕರು ಬೀದಿನಾಯಿಗಳಿಗೆ ಈಗ ಎಲ್ಲಿಬೇಕೆಂದರಲ್ಲಿ ಆಹಾರ ಹಾಕುತ್ತಿದ್ದಾರೆ. ಮನೆ ಮುಂದೆ, ಚರಂಡಿ ಕಲ್ಲುಹಾಸಿನ ಮೇಲೆ, ರಸ್ತೆ ಬದಿಯಲ್ಲಿ ಆಹಾರ ಇಡುತ್ತಿದ್ದಾರೆ. ಇದರಿಂದ ಮನೆಗಳ ಬಳಿ ಬೀದಿನಾಯಿಗಳು ಹಾವಳಿ ಹೆಚ್ಚಿದೆ. ಜೊತೆಗೆ ಅನೈರ್ಮಲ್ಯ ಉಂಟಾಗುತ್ತಿದೆ. ಆಹಾರಕ್ಕೆಂದೇ ಇಡೀ ದಿನ ಕಾದುಕುಳಿತಿದ್ದು, ದಾರಿಯಲ್ಲಿ ನಡೆದು ಹೋಗುವವರ ಮೇಲೆ ದಾಳಿ ನಡೆಸುತ್ತವೆ. ಮಕ್ಕಳು ಬೀದಿಗಳಲ್ಲಿ ನಡೆದಾಡಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಹೀಗಾಗಿ, ಒಂದೇ ಕಡೆ ಆಹಾರ ಹಾಕುವ ವ್ಯವಸ್ಥೆ ಮಾಡಿದರೆ ಬೀದಿನಾಯಿಗಳ ಓಡಾಟಕ್ಕೆ ಸ್ವಲ್ಪವಾದರೂ ಕಡಿವಾಣ ಬೀಳಬಹುದು ಎಂಬ ಆಲೋಚನೆಯೊಂದಿಗೆ ಜಿಲ್ಲಾಡಳಿತ ಹಾಗೂ ನಗರಸಭೆ ಈ ಹೆಜ್ಜೆ ಇರಿಸಿವೆ.ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ೩೫ ವಾರ್ಡ್‌ಗಳಿವೆ. ಪ್ರತಿ ವಾರ್ಡ್‌ನಲ್ಲಿ ಎರಡು ಕಡೆ ಆಹಾರ ಹಾಕಲು ಫೀಡಿಂಗ್ ಜೋನ್ ವ್ಯವಸ್ಥೆ ಮಾಡಲಾಗಿದೆ. ಈ ಸ್ಥಳಕ್ಕೆ ಯಾರು ಬೇಕಾದರೂ ಆಹಾರ ತಂದು ಹಾಕಬಹುದು. ಒಟ್ಟು ೭೦ ಕಡೆ ಇಂಥ ವ್ಯವಸ್ಥೆ ನಿರ್ಮಿಸಲಾಗುತ್ತಿದೆ. ಈಗಾಗಲೇ ೨೪ ವಾರ್ಡ್‌ಗಳಲ್ಲಿ ೪೮ ಕಡೆ ಫೀಡಿಂಗ್ ಜೋನ್ ನಿರ್ಮಿಸಿದ್ದೇವೆ. ಸಾರ್ವಜನಿಕರು ಯಾವುದೇ ಕಾರಣಕ್ಕೆ ಮನೆ ಬಳಿ ಆಹಾರ ಹಾಕಬಾರದು. ಈ ಫೀಡಿಂಗ್ ಜೋನ್‌ಗೆ ತಂದು ಹಾಕಬೇಕು. ಇದರಿಂದ ಬೀದಿನಾಯಿಗಳು ಒಂದೇ ಕಡೆ ಇರುವಂತೆ ನೋಡಿಕೊಳ್ಳಬಹುದು. ಸಾರ್ವಜನಿಕರಿಗೂ ತೊಂದರೆ ಆಗುವುದು ತಪ್ಪುತ್ತದೆ’ ಎಂದು ನಗರಸಭೆ ಆಯುಕ್ತ ನವೀನ್ ಚಂದ್ರ ತಿಳಿಸಿದರು.ಬಡಾವಣೆಗಳಲ್ಲಿರುವ ಬೀದಿನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡಿ, ರೇಬಿಸ್ ನಿರೋಧಕ ಲಸಿಕೆ (ಎಆರ್‌ವಿ) ನೀಡಿ ವಾಪಸ್ ಅದೇ ಸ್ಥಳಕ್ಕೆ ಬಿಡಲಾಗುತ್ತದೆ. ಈ ಪ್ರಕ್ರಿಯೆ ಐದು ದಿನ ಹಿಡಿಯುತ್ತದೆ. ಕೋಲಾರ ತಾಲೂಕಿನ ಕೆಂದಟ್ಟಿಯಲ್ಲಿ ನಗರಸಭೆಯಿಂದ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಈ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಹಲವಾರು ಸಭೆಗಳು ನಡೆಸಿ ಸೂಚನೆ ನೀಡಿದ್ದಾರೆ. ಬೀದಿನಾಯಿಗಳ ಹಾವಳಿ ತಡೆಗಟ್ಟಲು ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.