ಅರಣ್ಯ ನಾಶದಿಂದ ಪ್ರಕೃತಿ ಅಸಮತೋಲನ: ಪ್ರಾಂಶುಪಾಲ ರೇಣುಕರಾಧ್ಯ

| Published : Jun 06 2024, 12:30 AM IST

ಸಾರಾಂಶ

ಅರಣ್ಯ ನಾಶದಿಂದ ಪ್ರಾಕೃತಿಕ ಅಸಮತೋಲನ ಉಂಟಾಗುತ್ತಿದೆ ಎಂದು ಪ್ರಾಂಶುಪಾಲ ರೇಣುಕರಾಧ್ಯ ತಿಳಿಸಿದರು. ಅರಸೀಕೆರೆಯಲ್ಲಿ ಪರಿಸರ ದಿನ ಕಾರ್ಯಕ್ರಮದ ಉದ್ಭಾಟನೆ ನೆರವೇರಿಸಿ ಮಾತನಾಡಿದರು.

ಪರಿಸರ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಅರಸೀಕೆರೆ

ವೈಜ್ಞಾನಿಕ ಚಿಂತನೆಗಳು ಪ್ರಕತಿಗೆ ಪೂರಕವಾಗಿ ಬೆಳೆಯುವ ಬದಲು ಮಾರಕವಾಗಿ ಬೆಳೆಯುತ್ತಿರುವ ಕಾರಣ ಪರಿಸರ ಮಾಲಿನ್ಯಕ್ಕೆ ಎಲ್ಲರೂ ಕಾರಣರಾಗಿದ್ದಾರೆ. ಅರಣ್ಯ ನಾಶದಿಂದ ಪ್ರಾಕೃತಿಕ ಅಸಮತೋಲನ ಉಂಟಾಗುತ್ತಿದೆ ಎಂದು ಪ್ರಾಂಶುಪಾಲ ರೇಣುಕರಾಧ್ಯ ತಿಳಿಸಿದರು.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನ ಕಾರ್ಯಕ್ರಮದ ಉದ್ಭಾಟನೆ ನೆರವೇರಿಸಿ ಮಾತನಾಡಿ, ‘ಸನಾತನ ಸಂಸ್ಕೃತಿಯಲ್ಲಿ ಭೂಮಿಗೆ ಮಾತೆಯ ಮಹತ್ವದ ಸ್ಥಾನವನ್ನು ನೀಡಲಾಗಿದೆ, ಪ್ರಕತಿಯಲ್ಲಿನ ಮರಗಿಡಗಳನ್ನು ಕಣ್ಣಿಗೆ ಕಾಣುವ ದೇವರೆಂದು ಪೂಜಿಸಿ ಆರಾಧಿಸುವ ಮನೋಭಾವನೆ ಎಲ್ಲರಲ್ಲೂ ಬೆಳೆಸಲಾಗಿತ್ತು. ಆದ್ದರಿಂದ ಎಲ್ಲೆಡೆ ಮರಗಿಡಗಳು ಸಮದ್ದವಾಗಿ ಬೆಳೆಯಲು ಸಾಧ್ಯವಾಗಿತ್ತು, ಆದರೆ ಇತ್ತೀಚಿನ ವೈಜ್ಞಾನಿಕ ಚಿಂತನೆ ಫಲವಾಗಿ ಮನುಷ್ಯ ತೀವ್ರ ಸ್ವಾರ್ಥಿಯಾಗಿ ಜೀವಸಂಕುಲದ ಉಸಿರಾಗಿರುವ ನೈಸರ್ಗಿಕ ಅರಣ್ಯ ಸಂಪತ್ತನ್ನು ಸಂಪೂರ್ಣ ನಾಶ ಮಾಡುತ್ತಿರುವ ಕಾರಣ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿ ಕಾಲ, ಕಾಲಕ್ಕೆ ಮಳೆ, ಬೆಳೆಯಾಗದ ಕುಡಿಯುವ ಶುದ್ದ ನೀರಿಗಾಗಿ ಪರಿಶುದ್ದ ಗಾಳಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪ್ರತಿಯೊಂದು ಜೀವರಾಶಿಗಳು ಬದುಕಲು ಬೇಕಾದ ಆಮ್ಲಜನಕದ ಕೊರತೆ ಕಾಡುತ್ತಿದೆ. ನೈಸರ್ಗಿಕ ಸಂಪನ್ಮೂಲವು ಪ್ರಕೃತಿಯಲ್ಲಿದ್ದು ಅವುಗಳನ್ನು ನಮ್ಮ ಬದುಕಿಗೆ ಪೂರಕವಾಗಿ ಬಳಕೆ ಮಾಡಿಕೊಳ್ಳದೆ ವೈಯುಕ್ತಿಕ ಹಿತಾಶಕ್ತಿಗಾಗಿ ಹಾಳು ಮಾಡುತ್ತಿರುವ ಪರಿಣಾಮ ಅನೇಕ ಸಮಸ್ಯೆಗಳನ್ನು ಎಲ್ಲರೂ ಸೇರಿ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಣಿಗಾರಿಕೆಯಿಂದ ಅರಣ್ಯ ಸಂಪತ್ತು ನಾಶವಾಗುವ ಜೊತೆಗೆ ಪರಿಸರವು ಸಂಪೂರ್ಣ ನಾಶವಾಗುತ್ತಿದೆ. ಪ್ರಕತಿಯಲ್ಲಿ ಮರಗಿಡಗಳಿಲ್ಲದೆ ಪರಿಶುದ್ಧ ಗಾಳಿಯಿಲ್ಲ, ಗಾಳಿಯಿಲ್ಲದೆ ಮಳೆಯಿಲ್ಲದೆ ಪ್ರತಿ ಗ್ರಾಮಗಳಲ್ಲೂ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಮನುಷ್ಯ ಇದೇ ದಾರಿಯಲ್ಲಿ ಮುಂದೆ ಸಾಗಿದರೆ ಭವಿಷ್ಯದಲ್ಲಿ ಭೂಮಿಯ ಮೇಲೆ ಬಾರಿ ಪ್ರಮಾಣದ ದುಷ್ಪರಿಣಾಮಗಳು ಉಂಟಾಗುವುದರಲ್ಲಿ ಆಶ್ಚರ್ಯವಿಲ್ಲ, ಆದ್ದರಿಂದ ಪ್ರಕತಿಯ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ’ ಎಂದು ಹೇಳಿದರು.

ಎನ್‌ಎಸ್‌ಎಸ್ ಅಧಿಕಾರಿ ಗೋವಿಂದರಾಜ್, ಉಪನ್ಯಾಸಕರಾದ ಗಂಗಾಧರಪ್ಪ ನಾಗರಾಜ್ ಡಿ.ಬಿ., ಮೋಹನ್ ಕುಮಾರ್, ತಿಮ್ಮೇಗೌಡ ಮತ್ತು ವಿಜಯಕುಮಾರ್ ಇದ್ದರು.