Felicitation for 50 families representing 21 traditional occupations tomorrow

* ಮಾದರಿ ಕಾರ್ಯಕ್ರಮ

- ಪಾರಂಪರಿಕ ವೃತ್ತಿ ಸಂರಕ್ಷಣೆಗೆ ‘ಶರಣ ಸಂಕುಲ’ ವಿನೂತನ ಉಪಕ್ರಮ: ವೀರಣ್ಣ ಬ್ಯಾಗೋಟಿ ಮಾಹಿತಿಕನ್ನಡಪ್ರಭ ವಾರ್ತೆ ಬೀದರ್

ಪೀಳಿಗೆಯಿಂದ ಪೀಳಿಗೆಗೆ ಪಾರಂಪರಿಕ ಕುಲಕಸುಬುಗಳನ್ನು ಮುಂದುವರಿಸಿಕೊಂಡು ಬಂದಿರುವ ಕುಟುಂಬಗಳನ್ನು ಗುರುತಿಸಿ ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಎಬಿವಿಪಿ ಬೀದರ್ ಜಿಲ್ಲಾ ಹಿರಿಯ ಕಾರ್ಯಕರ್ತರ ‘ಶರಣ ಸಂಕುಲ’ ಗೆಳೆಯರ ಬಳಗದಿಂದ ನ.29ರಂದು 21 ಬಗೆಯ ಕುಲಕಸುಬುಗಳಲ್ಲಿ ತೊಡಗಿಸಿಕೊಂಡಿರುವ 50 ಕುಟುಂಬಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸಂಚಾಲಕರಾದ ವೀರಣ್ಣ ಬ್ಯಾಗೋಟಿ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ವಿವಿಧೆಡೆ ನೆಲೆಸಿರುವ ವಿದ್ಯಾರ್ಥಿ ಪರಿಷತ್‌ನ ಮಾಜಿ ಕಾರ್ಯಕರ್ತರು ಒಂದೆಡೆ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕುವುದರ ಜತೆಗೆ ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಧರಿಸಿದ್ದರು. ಅದರ ಫಲಶೃತಿಯಾಗಿ ಈ ಕಾರ್ಯಕ್ರಮ ರೂಪುಗೊಂಡಿದೆ ಎಂದು ತಿಳಿಸಿದರು.

120 ಕುಟುಂಬಗಳಿಗೆ ಖುದ್ದು ಭೇಟಿ:

ಕಳೆದ ಮೂರು ತಿಂಗಳಿಂದ ಬಳಗದ ಸದಸ್ಯರು ನಿರಂತರವಾಗಿ ಶ್ರಮಿಸಿ, ಬೀದರ್ ತಾಲ್ಲೂಕಿನ ವ್ಯಾಪ್ತಿಯ ಸುಮಾರು 120 ಕುಟುಂಬಗಳಿಗೆ ಖುದ್ದಾಗಿ ಭೇಟಿ ನೀಡಿದ್ದೇವೆ. ಕುಟುಂಬಗಳ ಪೂರ್ವಜರ ವೃತ್ತಿ, ಪಾರಂಪರಿಕ ಹಿನ್ನೆಲೆ ಹಾಗೂ ಪ್ರಸ್ತುತ ವೃತ್ತಿಯ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಿ, ಅಂತಿಮವಾಗಿ 21 ಬಗೆಯ ಕುಲಕಸುಬುಗಳಲ್ಲಿ ತೊಡಗಿಸಿಕೊಂಡಿರುವ 50 ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಕನಿಷ್ಠ ಮೂರು ತಲೆಮಾರುಗಳಿಂದ ಒಂದೇ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುವ ಹಾಗೂ ಈವರೆಗೆ ಯಾವುದೇ ಮನ್ನಣೆ ಪಡೆಯದೆ ಎಲೆಮರೆಯ ಕಾಯಿಯಂತೆ ಶ್ರಮಿಸುತ್ತಿರುವ ವೃತ್ತಿದಾರರಿಗೆ ಆದ್ಯತೆ ನೀಡಲಾಗಿದೆ. ಪ್ರತಿ ಕುಲಕಸುಬಿನಿಂದ ಗರಿಷ್ಠ ಮೂರು ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ. ಸಮಾರಂಭದಲ್ಲಿ ಕುಟುಂಬದ ಸದಸ್ಯರು ಸೇರಿದಂತೆ ಸುಮಾರು 150 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ದೀಪಾವಳಿಯಲ್ಲಿ ಬಳಸುವ ಮಣ್ಣಿನ ಹಣತೆ, ಹಬ್ಬ ಹರಿದಿನಗಳಲ್ಲಿ ಬಳಸುವ ಮಡಿಕೆ ಸೇರಿದಂತೆ ಅನೇಕ ಪಾರಂಪರಿಕ ವಸ್ತುಗಳು ಕುಲಕಸುಬುದಾರರ ಶ್ರಮದ ಫಲವಾಗಿವೆ. ಕುಂಬಾರಿಕೆ, ಕಮ್ಮಾರಿಕೆ, ಬಡಗಿತನ, ಚಮ್ಮಾರಿಕೆ ಸೇರಿದಂತೆ ಹಲವು ವೃತ್ತಿಗಳು ಕಣ್ಮರೆಯಾಗದಂತೆ ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದರು.

ನ.29ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಕೆ.ಇ.ಬಿ. ಎದುರು ಇರುವ ಪೂಜ್ಯ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕರ್ನಾಟಕ ಪ್ರಾಂತದ ಮಾಜಿ ಅಧ್ಯಕ್ಷ ಪ್ರೊ.ಎಸ್.ಬಿ. ಸಜ್ಜನಶೆಟ್ಟಿ ತಿಳಿಸಿದರು.

ಬೆಂಗಳೂರಿನ ಶಿಕ್ಷಣ ತಜ್ಞ ಹಾಗೂ ಹೆಸರಾಂತ ವಾಗ್ಮಿ ಡಾ.ಗುರುರಾಜ ಕರಜಗಿ ಮುಖ್ಯ ವಕ್ತಾರರಾಗಿ ಭಾಗವಹಿಸಲಿದ್ದಾರೆ. ನಬಾರ್ಡನ ಬೀದರ್ ಸಹಾಯಕ ಮಹಾ ಪ್ರಬಂಧಕ ಎಸ್. ಮಂಜುನಾಥ ರೆಡ್ಡಿ, ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಹಾಗೂ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಡೀನ್ ಬಸವರಾಜ ಕುಬಕಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಜ್ಜನಶೆಟ್ಟಿ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಕ್ಷೇತ್ರದ ಧುರಿಣರಾದ ಗುರುನಾಥ ಜ್ಯಾಂತೀಕರ್, ವಿದ್ಯಾರ್ಥಿ ಪರಿಷತ್ತಿನಿಂದ ಗುರುತಿಸಿಕೊಂಡಿರುವ ಗುರುನಾಥ ರಾಜಗೀರಾ, ಸುಭಾಷ ಬಿರಾದಾರ, ರಾಜಕುಮಾರ ನೇಮತಾಬಾದೆ, ಅಮೃತರಾವ ಹೊಸಮನಿ ಉಪಸ್ಥಿತರಿದ್ದರು.

----

ಚಿತ್ರ 27ಬಿಡಿಆರ್53:

ಬೀದರಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಳಗದ ಸಂಚಾಲಕರಾದ ವೀರಣ್ಣ ಬ್ಯಾಗೋಟಿ ಮಾತನಾಡಿದರು.