ಹೆಣ್ಣು ಸಮೃದ್ಧಿ ಹಾಗೂ ಶಾಂತಿಯ ಸಂಕೇತ: ನ್ಯಾ.ಸುಧೀರ್

| Published : Nov 01 2024, 12:01 AM IST

ಸಾರಾಂಶ

ಅತಿಯಾದ ಮೊಬೈಲ್ ವ್ಯಾಮೋಹದಿಂದಾಗಿ ಯುವಜನರು ಹಾಗೂ ವಿದ್ಯಾರ್ಥಿಗಳು ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದು ಖಿನ್ನತೆಗೆ ಒಳಗಾಗುತ್ತಿದ್ದಾರೆ .

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹೆಣ್ಣು ಸಮೃದ್ಧಿ ಹಾಗೂ ಶಾಂತಿಯ ಸಂಕೇತ. ಪೋಷಕರು ಹೆಣ್ಣು- ಗಂಡು ಎಂಬ ಬೇಧ ಮಾಡದೇ ಇಬ್ಬರನ್ನೂ ಸಮಾನವಾಗಿ ಕಂಡು ಶಿಕ್ಷಣ ಕೊಡಿಸಿ ಸಾಧನೆಗೆ ಅವಕಾಶ ನೀಡಬೇಕು ಎಂದು ಪಟ್ಟಣದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಸುಧೀರ್ ಮನವಿ ಮಾಡಿದರು.

ಪಟ್ಟಣದ ಗ್ರಾಮ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನ ಹಾಗೂ ಮಾನಸಿಕ ಆರೋಗ್ಯ ದಿನ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಗುವು ಭೂಮಿ ಮೇಲೆ ಹುಟ್ಟುವ ಹಕ್ಕಿಗಾಗಿ ಇಂದು ಆಂದೋಲನಾ ನಡೆಸಬೇಕಾದ ವಾತಾವರಣ ನಿರ್ಮಾಣವಾಗಿದೆ. ತಾಯಿ, ಮಡದಿ, ಸಹೋದರಿಯಾಗಿ ಹೆಣ್ಣನ್ನು ಒಪ್ಪುವ ನಾವು ಮಗಳಾಗಿ ಏಕೆ ಸ್ವೀಕರಿಸಬಾರದು. ಸಾಮಾಜಿಕ ಪಿಡುಗಾಗಿ ನಮ್ಮನ್ನು ಕಾಡುತ್ತಿರುವ ಹೆಣ್ಣು ಭ್ರೂಣ ಹತ್ಯೆ ನಾಗರಿಕ ಸಮಾಜಕ್ಕೆ ಅಂಟಿರುವ ಶಾಪ ಎಂದರು.

ನಾಗರಿಕ ಸಮಾಜದಲ್ಲಿ ಇಂದು ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ಕಾಡುತ್ತಿದ್ದಾಳೆ. ಶಿಕ್ಷಾರ್ಹ ಅಪರಾಧವಾಗಿರುವ ಭ್ರೂಣ ಹತ್ಯೆಯಿಂದ ಗಂಡು ಮತ್ತು ಹೆಣ್ಣು ಮಕ್ಕಳ ಜನನ ಪ್ರಮಾಣ ಹಾಗೂ ಲಿಂಗಾನುಪಾತದಲ್ಲಿ ಏರುಪೇರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಪರ ಸಿವಿಲ್ ನ್ಯಾಯಾಧೀಶೆ ಕೆ.ವಿ.ಅರ್ಪಿತಾ ಮಾತನಾಡಿ, ಅತಿಯಾದ ಮೊಬೈಲ್ ವ್ಯಾಮೋಹದಿಂದಾಗಿ ಯುವಜನರು ಹಾಗೂ ವಿದ್ಯಾರ್ಥಿಗಳು ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದು ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದರು.

ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ಆರ್.ದೇವರಾಜು, ಅಪರ ಸಿವಿಲ್ ನ್ಯಾಯಾಧೀಶೆ ಆರ್.ಶಕುಂತಲಾ ಮಾತನಾಡಿ, ಹೆಣ್ಣು ಮಕ್ಕಳ ಅಭಿವೃದ್ಧಿಗೆ ತೊಂದರೆಯಾಗುವ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಹೋರಾಟ ನಡೆಸಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಸುರೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್, ಸಮುದಾಯ ಆರೋಗ್ಯ ಅಧಿಕಾರಿ ಡಾ.ಹೇಮಂತ್, ಸಂಪನ್ಮೂಲ ಭಾಷಣಕಾರ ಬಿ.ಸಿ.ದಿನೇಶ್, ಗ್ರಾಮಭಾರತಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಚ್.ಎಸ್.ಕೃಷ್ಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭುಕುಮಾರ್, ಶಿಕ್ಷಕ ವಜ್ರಪ್ರಸಾದ್ ಭಾಗವಹಿಸಿದ್ದರು. ನಂತರ ಸಂವಾದದಲ್ಲಿ ವಿಜೇತರಾದ ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.