ಶೈಕ್ಷಣಿಕ ಸಾಧನೆಗೆ ಶಿಕ್ಷಕಿಯರ ಕೊಡುಗೆ ದೊಡ್ಡದು: ಪಿ. ಬಸವರಾಜ

| Published : Jan 05 2025, 01:31 AM IST

ಶೈಕ್ಷಣಿಕ ಸಾಧನೆಗೆ ಶಿಕ್ಷಕಿಯರ ಕೊಡುಗೆ ದೊಡ್ಡದು: ಪಿ. ಬಸವರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಾಪುರ ಪಟ್ಟಣದ ಶಂಕರಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡುವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಯನ್ನು ಹದಿನೆಂಟು ಶಿಕ್ಷಕಿಯರಿಗೆ ಉಪನಿರ್ದೇಶಕ ಪಿ.ಬಸವರಾಜ ಅವರು ಪ್ರದಾನ ಮಾಡಿದರು.

ಸಿದ್ದಾಪುರ: ತಾಲೂಕಿನ ಶೈಕ್ಷಣಿಕ ವ್ಯವಸ್ಥೆ ಉತ್ತಮವಾಗಿದ್ದು, ಇಲ್ಲಿನ ಶಿಕ್ಷಕರ ಕ್ರಿಯಾಶೀಲತೆಯಿಂದ ಇದು ಸಾಧ್ಯವಾಗಿದೆ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಪಿ. ಬಸವರಾಜ ಹೇಳಿದರು.

ಪಟ್ಟಣದ ಶಂಕರಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೀಡುವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ತಾಲೂಕಿನಲ್ಲಿ ಶೇ. 70ರಷ್ಟು ಮಹಿಳಾ ಶಿಕ್ಷಕರಿದ್ದು, ಅವರು ಮಾತೃ ಹೃದಯದಿಂದ ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಶೈಕ್ಷಣಿಕ ಸಾಧನೆಗೆ ಮಹಿಳಾ ಶಿಕ್ಷಕರ ಕೊಡುಗೆ ಸಾಕಷ್ಟಿದೆ ಎಂದು ಹೇಳಿದರು.

ತಾಲೂಕಿನ ಹದಿನೆಂಟು ಕ್ಲಸ್ಟರ್‌ಗಳ ಹದಿನೆಂಟು ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘ ಹಾಗೂ ಇಲಾಖೆಯ ಶೈಕ್ಷಣಿಕ ಚಟುವಟಿಕೆಗೆ ಸದಾ ಅವಕಾಶ ಹಾಗೂ ಪ್ರೋತ್ಸಾಹ ನೀಡುತ್ತಿರುವ ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ಅವರನ್ನು ಇಲಾಖೆ ಹಾಗೂ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಂಕರ ಮಠದ ಧರ್ಮದರ್ಶಿ ವಿಜಯ ಹೆಗಡೆ ದೊಡ್ಮನೆ, ಎಂ.ಕೆ. ಮೊಗೇರ, ಚೈತನ್ಯಕುಮಾರ ಕೆ.ಎಂ., ಬಾಲಚಂದ್ರ ಪಟಗಾರ, ಎಂ.ವಿ. ನಾಯ್ಕ ಸತೀಶ ಹೆಗಡೆ, ನಾಗರಾಜ ಮಡಿವಾಳ, ವಿಜಯಲಕ್ಷ್ಮಿ ಬಿ., ನಮೃತಾ ವಿ., ಬಸವರಾಜ ಕಡಪಟ್ಟಿ, ಮೇಧಾ ಹೆಗಡೆ, ಸುಜಾತಾ ಎಚ್., ಸಹನಾ ಬಿ.ಎಲ್., ವಂದನಾ ಕಲಭಾಗ, ಯಶೋದಾ ಭಟ್, ಅನ್ನಪೂರ್ಣಾ ಅಡಕೆಪಾಲ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸತೀಶ ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಗುರುರಾಜ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ವಿಜಯಲಕ್ಷ್ಮಿ ಬಿ. ವಂದಿಸಿದರು.