ಫೆಂಗಲ್ ಅಬ್ಬರ: ಧಾರಾಕಾರ ಮಳೆಗೆ ಜಿಲ್ಲೆ ತತ್ತರ

| Published : Dec 03 2024, 12:31 AM IST

ಸಾರಾಂಶ

ದ್ವಿಚಕ್ರ ವಾಹನ ಸವಾರರಂತೂ ತೀರ ತೊಂದರೆಗೆ ಒಳಗಾದರು. ಮಳೆಯಿಂದಾಗಿ ಸರಿಯಾಗಿ ಕರ್ತವ್ಯಕ್ಕೆ ತೆರಳಲು ಸಾಧ್ಯವಾಗದೆ, ಮಳೆಯಿಂದ ಆಶ್ರಯಪಡೆಯಲು ಬಸ್‌ ನಿಲ್ದಾಣಗಳು, ವಾಣಿಜ್ಯ ಮಳೆಗಗಳು, ಅಂಗಡಿ, ಮುಂಗಟ್ಟಿಗೆ ತೆರಳಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಫೆಂಗಲ್‌ ಚಂಡಮಾರುತದಿಂದಾಗಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆ ತತ್ತರಗೊಂಡಿದ್ದು, ಸೋಮವಾರದಂತೆ ಮಂಗಳವಾರ (ಡಿ. 3 ರಂದು) ಕೂಡ ಶಾಲಾ, ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಆದೇಶಿಸಿದ್ದಾರೆ.

ಭಾನುವಾರ ರಾತ್ರಿಯಿಂದಲೇ ಆರಂಭವಾದ ಮಳೆ ಸೋಮವಾರ ಇಡೀ ದಿನ ಎಡಬಿಡದೆ ಸುರಿಯಿತು. ಜಿಲ್ಲಾದ್ಯಂತ ಮಳೆಯ ಅಬ್ಬರ ಜೋರಾಗಿತ್ತು. ಹುಣಸೂರು, ಪಿರಿಯಾಪಟ್ಟಣ, ಸಾಲಿಗ್ರಾಮ, ನಂಜನಗೂಡು ಮುಂತಾದ ಭಾಗದಲ್ಲಿ ಅತಿ ಹೆಚ್ಚು ಮಳೆಯಾದರೆ, ಮೈಸೂರು ನಗರದಲ್ಲಿ ಕೆಲಕಾಲ ಮಾತ್ರ ಬಿಡುವು ನೀಡಿದ್ದು ಬಿಟ್ಟರೆ, ಹನಿ ಹಾಕುತ್ತಲೇ ಇತ್ತು. ಇದರಿಂದಾಗಿ ಸಾರ್ವಜನಿಕರು, ವ್ಯಾಪಾರಿಗಳು ತೊಂದರೆಗೆ ಒಳಗಾದರು. ರಸ್ತೆ ಬದಿ ವ್ಯಾಪಾರಿಗಳಂತು ಇಡೀ ದಿನ ಸರಿಯಾಗಿ ವ್ಯಾಪಾರವಿಲ್ಲದೆ ಪರಿತಪಿಸಿದರು.

ದ್ವಿಚಕ್ರ ವಾಹನ ಸವಾರರಂತೂ ತೀರ ತೊಂದರೆಗೆ ಒಳಗಾದರು. ಮಳೆಯಿಂದಾಗಿ ಸರಿಯಾಗಿ ಕರ್ತವ್ಯಕ್ಕೆ ತೆರಳಲು ಸಾಧ್ಯವಾಗದೆ, ಮಳೆಯಿಂದ ಆಶ್ರಯಪಡೆಯಲು ಬಸ್‌ ನಿಲ್ದಾಣಗಳು, ವಾಣಿಜ್ಯ ಮಳೆಗಗಳು, ಅಂಗಡಿ, ಮುಂಗಟ್ಟಿಗೆ ತೆರಳಿದರು.

ಧಾರಾಕಾರ ಮಳೆಗೆ ಅನೇಕ ಮರಗಳು ಕೊಂಬೆ ಮುರಿದು ಬಿತ್ತು. ಮೈಸೂರು ಜಿಲ್ಲೆಗೂ ಕೂಡ ಯೆಲ್ಲೋ ಅಲರ್ಟ್‌ ಘೋಷಿಸಿದ್ದರಿಂದ ಸೋಮವಾರ ಬೆಳಗ್ಗೆ ಮಳೆಯ ಪರಿಸ್ಥಿತಿ ಅವಲೋಕಿಸಿ ಎಲ್ಲಾ ಅಂಗವಾಡಿ, ಶಾಲೆಗಳು, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು.

ಸೋಮವಾರ ಸಂಜೆಯಾದರೂ ಮಳೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಮಂಗಳವಾರ ಕೂಡ ರಜೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.