ಮದ್ದೂರು ಪಟ್ಟಣದ ಉದ್ಯಾನವನ ಅಭಿವೃದ್ಧಿಗೆ ಪುರಸಭೆ ವಿಶೇಷ ಸಭೆಯಲ್ಲಿ ಸರ್ವಾನುಮತದ ನಿರ್ಣಯ

| Published : Dec 03 2024, 12:31 AM IST

ಮದ್ದೂರು ಪಟ್ಟಣದ ಉದ್ಯಾನವನ ಅಭಿವೃದ್ಧಿಗೆ ಪುರಸಭೆ ವಿಶೇಷ ಸಭೆಯಲ್ಲಿ ಸರ್ವಾನುಮತದ ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಮಂಜೂರಾಗಿರುವ ಜಲಮೂಲಗಳ ಪುನಶ್ಚೇತನ ಹಾಗೂ ಹಸಿರು ಜಾಗ ಮತ್ತು ಉದ್ಯಾನವನಗಳ ಅಭಿವೃದ್ಧಿಗೆ ಮಂಜೂರಾಗಿರುವ ಒಂದು ಕೋಟಿ ರು. ಅನುದಾನದಲ್ಲಿ ಉದ್ಯಾನವನಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ಶಾಸಕ ಕೆ.ಎಂ. ಉದಯ್ ಸಮ್ಮುಖದಲ್ಲಿ ಸದಸ್ಯರ ಸಲಹೆ ಪಡೆಯಲಾಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಕೇಂದ್ರ ಸರ್ಕಾರದ ಪುರಸ್ಕೃತ ಅಮೃತ್ ಯೋಜನೆಯಡಿ ಪಟ್ಟಣದ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲು ಸೋಮವಾರ ನಡೆದ ಪುರಸಭೆ ವಿಶೇಷ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಅಧ್ಯಕ್ಷೆ ಕೋಕಿಲ ಅರುಣ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಉದ್ಯಾನವನಗಳ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಯಿತು.

ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಮಂಜೂರಾಗಿರುವ ಜಲಮೂಲಗಳ ಪುನಶ್ಚೇತನ ಹಾಗೂ ಹಸಿರು ಜಾಗ ಮತ್ತು ಉದ್ಯಾನವನಗಳ ಅಭಿವೃದ್ಧಿಗೆ ಮಂಜೂರಾಗಿರುವ ಒಂದು ಕೋಟಿ ರು. ಅನುದಾನದಲ್ಲಿ ಉದ್ಯಾನವನಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಹಾಜರಿದ್ದ ಶಾಸಕ ಕೆ.ಎಂ. ಉದಯ್ ಸಮ್ಮುಖದಲ್ಲಿ ಸದಸ್ಯರ ಸಲಹೆ ಪಡೆಯಲಾಯಿತು.

ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಮಾತನಾಡಿ, ಪಟ್ಟಣದ ಸಿದ್ದಾರ್ಥನಗರದ ಅಂಬೇಡ್ಕರ್ ಭವನದ ಪಾರ್ಕ್, ಮದ್ದೂರಮ್ಮ ದೇವಸ್ಥಾನದ ಪಕ್ಕದ ಪಾರ್ಕ್ ಹಾಗೂ ಕೆಂಪಮ್ಮ ಪಾರ್ಕ್ ಅಭಿವೃದ್ಧಿಗೆ ಈ ಹಿಂದೆ ಒಂದು ಕೋಟಿ ರು. ಅನುದಾನ ಮಂಜೂರಾಗಿದೆ. ಆದರೆ, ಕೇವಲ ಪಾರ್ಕುಗಳನ್ನು ಅಭಿವೃದ್ಧಿ ಮಾಡಿದರೆ ಮಾತ್ರ ಸಾಲದು ಅವುಗಳನ್ನು ಸಮರ್ಪಕವಾಗಿ ಕಾಲ ಕಾಲಕ್ಕೆ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.

ಕಳೆದ 2022, 23ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆ ಅಡಿ ಸಾಮಾನ್ಯ ಮೂಲ ಅನುದಾನದಡಿ ಅನುಮೋದಿತ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಿದ ನಂತರ ಉಳಿದಿರುವ 9.49 ಲಕ್ಷ ರು. ಗಳ ಅನುದಾನವನ್ನು ಹೊಸಕೊಪ್ಪ ರಸ್ತೆಯಲ್ಲಿ ಒಳಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿ ಬಗ್ಗೆ ಚರ್ಚೆ ನಡೆಯಿತು.

ನಂತರ ಪುರಸಭೆ ಕೊಪ್ಪ ರಸ್ತೆಯ ಸಮಸ್ಯೆ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ ನಂತರ ನ್ಯಾಯಾಲಯ ಕಾಮಗಾರಿಗೆ ಅನುಮತಿ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೊಪ್ಪರಸ್ತೆಯ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯ ಅಧಿಕಾರಿ ಮೀನಾಕ್ಷಿ ಸಭೆಗೆ ವಿವರಣೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಜು, ಸದಸ್ಯರಾದ ಮಹೇಶ್. ಸುಮಿತ್ರ ರಮೇಶ್, ವನಿತಾ, ಸರ್ವ ಮಂಗಳ, ಲತಾರಾಮ, ಸಚಿನ್, ರತ್ನತಿಮಯ್ಯ, ಸೇರಿದಂತೆ ಹಲವು ಸದಸ್ಯರು ಇದ್ದರು.