ಮಾವು, ಕಡಲೆ, ಭತ್ತಕ್ಕೆ ಕುತ್ತು ತಂದ ಫೆಂಗಲ್‌!

| Published : Dec 04 2024, 12:34 AM IST

ಸಾರಾಂಶ

ಪ್ರತಿ ಬಾರಿಯೂ ಮಾವು ಹವಾಮಾನ ವೈಪರೀತ್ಯದ ಕುತ್ತಿಗೆ ಬಲಿಯಾಗುತ್ತಿದೆ. ಹೂ ಬಿಡುವ ಆರಂಭದ ಸಮಯದಲ್ಲೇ ತೊಂದರೆ ಉಂಟಾದರೆ ಇಳುವಳಿ ಮೇಲೆ ತುಂಬ ಪರಿಣಾಮ ಬೀರಲಿದೆ.

ಬಸವರಾಜ ಹಿರೇಮಠ

ಧಾರವಾಡ:

ಫೆಂಗಲ್‌ ಚಂಡಮಾರುತದ ದುಷ್ಪರಿಣಾಮವು ಬರೀ ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಮಾತ್ರವಲ್ಲದೇ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ವ್ಯಾಪಿಸಿದೆ. ಧಾರವಾಡ ಜಿಲ್ಲೆಯ ಮಾವು, ಭತ್ತ ಹಾಗೂ ಕಡಲೆ ಬೆಳೆಯ ಫಲಕ್ಕೆ ಈ ಹವಾಮಾನ ವೈಪರೀತ್ಯ ಧಕ್ಕೆ ತಂದಿದೆ.

ಕಳೆದ ಎರಡ್ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣ ಹಾಗೂ ಮಳೆಯಿಂದಾಗಿ ಈ ಮೂರು ಬೆಳೆಗಳ ಫಸಲಿನ ಮೇಲೆ ತೀವ್ರ ಪರಿಣಾಮ ಬೀರಲಿದೆ. ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಬೆಳೆಯುವ ಮಾವು ಧಾರವಾಡದಲ್ಲಿ ಸುಮಾರು 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿದೆ. ಡಿಸೆಂಬರ್‌ ತಿಂಗಳಲ್ಲಿ ಪರಾಗ ಸ್ಪರ್ಶವಾಗಿ ಮಾವು ಹೂ ಬಿಡುವ ಸಮಯ. ಬೆಳಗ್ಗೆ ಹಾಗೂ ರಾತ್ರಿ ಹೊತ್ತು ಚಳಿ ಹಾಗೂ ಮಧ್ಯಾಹ್ನ ಕಾವು ಅಂದರೆ ಬಿಸಿಲು ಬೇಡುವ ಮಾವಿಗೆ ಮೋಡ ಮುಸುಕಿದ ವಾತಾವರಣ ಹಾಗೂ ಮಳೆಯು ಒಗ್ಗುವುದಿಲ್ಲ. ಇನ್ನೂ ಹೂ ಬಿಡದ ಗಿಡಗಳು ತಡವಾಗಿ ಹೂ ಬಿಡುವುದು ಹಾಗೂ ಹೂ ಬಿಟ್ಟ ಗಿಡಗಳಿಗೆ ರೋಗ ಬರುವ ಸಾಧ್ಯತೆ ಹೆಚ್ಚಿದೆ ಎಂದು ಮಾವು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಧಾರವಾಡ ಸಮೀಪದ ಕೆಲಗೇರಿ, ತೇಗೂರು, ಅಂಬ್ಲಿಕೊಪ್ಪ, ಕ್ಯಾರಕೊಪ್ಪ ಸೇರಿದಂತೆ ಧಾರವಾಡ ಪಶ್ಚಿಮ ಭಾಗದಲ್ಲಿ ಹೆಚ್ಚು ಮಾವು ಬೆಳೆಯುತ್ತಿದ್ದು, ಫೆಂಗಲ್‌ ಚಂಡಮಾರುತದಿಂದ ಉಂಟಾದ ಹವಾಮಾನ ವೈಪರೀತ್ಯದಿಂದ ಮಾವು ಬೆಳೆಗಾರರು ಮತ್ತೆ ಸಂಕಷ್ಟ ಅನುಭವಿಸುವಂತಾಗಿದೆ.

ಹೂ ನಿಲ್ಲುವುದಿಲ್ಲ:

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಮಾವು ಬೆಳೆಗಾರ ಸಂಗಯ್ಯ ಗುಡ್ಡದಮಠ, ಪ್ರತಿ ವರ್ಷ ಡಿಸೆಂಬರ್‌ ತಿಂಗಳಲ್ಲಿ ಹೂ ಬಿಡಬೇಕು. ಆದರೆ, ಈ ಬಾರಿ ಚಳಿಗಾಲದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಹೂ ಬಿಡುವುದು ತಡವಾಗಲಿದೆ. ಜೊತೆಗೆ ಹಲವು ರೋಗಗಳೊಂದಿಗೆ ಹೂ ಬಿಟ್ಟರೆ ಹೂ ನಿಲ್ಲುವುದಿಲ್ಲ. ಇದರ ಪರಿಣಾಮ ನಿರೀಕ್ಷಿತ ಕಾಯಿ ಹಿಡಿಯದೇ ರೈತರು ನಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದರು.

ಇನ್ನು, ಹಿಂಗಾರು ಹಂಗಾಮಿಗೆ ಶೇ. 30ರಷ್ಟು ಮುಕ್ಕಟ್ಟಿನಲ್ಲಿ ಕಡಲೆ ಬೆಳೆದವರಿಗೆ ಈ ಹವಾಮಾನ ಸಂಕಷ್ಟ ತಂದಿದೆ. ಕಡಲೆ ಸಹ ಹೂ ಬಿಡುತ್ತಿದ್ದು, ಮಳೆಯಿಂದಾಗಿ ಗಿಡದ ಮೇಲಿನ ಹುಳಿ ತೊಳೆದು ಹೋದರೆ ಕಡಲೆ ಕಾಯಿ ಬಿಡುವುದಿಲ್ಲ. ಹಲವು ರೋಗಕ್ಕೆ ತುತ್ತಾಗುತ್ತದೆ. ಜತೆಗೆ ಕಡಲೆ ಚಳಿ ವಾತಾವರಣಕ್ಕೆ ಬರುವ ಬೆಳೆ. ಮಳೆ ಬಂದರೆ ಫಸಲು ಬರುವುದಿಲ್ಲ. ಇದರೊಂದಿಗೆ ಕಸ ಹೆಚ್ಚು ಹುಟ್ಟಿಕೊಳ್ಳುತ್ತದೆ. ಪದೇ ಪದೇ ಎಡೆಕುಂಟಿ ಹೊಡೆಯಬೇಕಾದುತ್ತದೆ. ಖರ್ಚು ಹೆಚ್ಚಾಗುತ್ತದೆ ಎಂದು ಕಮಲಾಪೂರ ರೈತ ರವಿ ಅವ್ವಣ್ಣವರ ಅಳಲು ತೋಡಿಕೊಂಡರು.

ಅದೇ ರೀತಿ ಕಲಘಟಗಿ, ಧಾರವಾಡ ಭಾಗದಲ್ಲಿ ಭತ್ತ ಬೆಳೆದವರಿಗೂ ಈ ಹವಾಮಾನ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಕೊಯ್ಲು ಮಾಡಿ ಹೊಲದಲ್ಲಿ ಒಣಗಿಸಲು ಇಟ್ಟ ಭತ್ತದ ಮೇಲೆ ಮಳೆಯಾದರೆ ಅದು ಮೊಳಕೆಯೊಡುವ ಸಾಧ್ಯತೆ ಹೆಚ್ಚು. ಬಿಸಿಲಿಗೆ ಒಣಗಬೇಕಾದ ಭತ್ತಕ್ಕೆ ಮಳೆಯಿಂದ ಇಳುವರಿ ಮೇಲೆ ತುಂಬ ಹೊಡೆತ ಬೀಳುತ್ತದೆ ಎಂದು ಅಳ್ನಾವರ ಭಾಗದ ರೈತರು ತಮ್ಮ ಸ್ಥಿತಿ ಹೇಳಿಕೊಂಡರು.

ಒಟ್ಟಾರೆ, ಮಳೆಗಾಲದಲ್ಲಿ ಮಳೆ, ಬೇಸಿಗೆಯಲ್ಲಿ ಬಿಸಿಲು, ಚಳಿಗಾಲದಲ್ಲಿ ಚಳಿ ಬಿಡದೇ ಅದಲು ಬದಲಾದರೆ, ಆಯಾ ಕಾಲಕ್ಕೆ ತಕ್ಕಂತೆ ಬೆಳೆಯುವ ಬೆಳೆಗಳ ಮೇಲೆ ದುಷ್ಪರಿಣಾಮ ಆಗುವುದು ಮಾತ್ರ ನಿಶ್ಚಿತ.

ಪ್ರತಿ ಬಾರಿಯೂ ಮಾವು ಹವಾಮಾನ ವೈಪರೀತ್ಯದ ಕುತ್ತಿಗೆ ಬಲಿಯಾಗುತ್ತಿದೆ. ಹೂ ಬಿಡುವ ಆರಂಭದ ಸಮಯದಲ್ಲೇ ತೊಂದರೆ ಉಂಟಾದರೆ ಇಳುವಳಿ ಮೇಲೆ ತುಂಬ ಪರಿಣಾಮ ಬೀರಲಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ಪ್ರತಿ ಎಕರೆಗೆ ಆಗಿರುವ ಹಾನಿ ಪ್ರಮಾಣ ಸಮೀಕ್ಷೆ ಮಾಡಿ ಸರಿಯಾಗಿ ಇನ್ಸುರೆನ್ಸ್‌ ನೀಡಿದರೆ ಮಾವು ಬೆಳೆಗಾರರು ಬದುಕಬಹುದು. ಇಲ್ಲದೇ ಹೋದಲ್ಲಿ ಮಾವು ತೆಗೆದು ಬೇರೆ ಬೆಳೆ ಬರಲಿದೆ ಎಂದು ಕೆಲಗೇರಿ ಮಾವು ಬೆಳೆಗಾರ ಶಾಂತಯ್ಯ ಎಚ್‌. ಹೇಳಿದರು.ಕೆಟ್ಟ ಹವಾಮಾನದಿಂದ ಕಡಲೆ ಹೂ ಉದುರುತ್ತಿವೆ. ಗಿಡಗಳ ಚಂಡಿ ಚಿವುಟಿ ಬೀಳುತ್ತಿದೆ. ಹುಳುಗಳಾಗುತ್ತಿದ್ದು ಹೆಚ್ಚು ಕ್ರಿಮಿನಾಶಕ ಬಳಸಬೇಕಾಗುತ್ತದೆ. ಹಸಿ ಹೆಚ್ಚಾಗಿ ಕಸ ಬೆಳೆದು ಪದೇ ಪದೇ ಕಳೆ ತೆಗೆಸಬೇಕಾಗುತ್ತದೆ. ಒಂದು ಎಕರೆಗೆ ₹ 20 ಸಾವಿರ ವೆಚ್ಚ ಮಾಡುತ್ತಿದ್ದು, ಇಷ್ಟು ಆದಾಯ ವಾಪಸ್‌ ಕಷ್ಟಸಾಧ್ಯ. ಈ ಸಮಯದಲ್ಲಿ ಮೋಡ, ಮಳೆಯಿಂದ ಫಲ ಬರುವುದಿಲ್ಲ ಎಂದು ಕಮಲಾಪುರ ರೈತ ಸೋಮಪ್ಪ ಹೇಳಿದರು.