೨೦೨೬-೨೭ನೇ ಸಾಲಿ ಮುಂಗಾರು ಹಂಗಾಮಿನಿಂದ ಈ ನಿಯಮ ಕೇಂದ್ರ ಸರ್ಕಾರ ಜಾರಿಗೆ ಮಾಡಿದ್ದು, ರಾಜ್ಯದ ಎಲ್ಲ ರೈತರು ಫಾರ್ಮರ್‌ ಐಡಿ ಹೊಂದುವುದು ಕಡ್ಡಾಯವಾಗಿದೆ

ಕಾರಟಗಿ: ಮುಂಗಾರು ಹಂಗಾಮಿಗೆ ರೈತರ ಎಫ್‌ಐಡಿ ಸಂಖ್ಯೆ ಮತ್ತು ಕೆ.ಕಿಸಾನ್ ತಂತ್ರಾಂಶದ ಮೂಲಕವೇ ಯೂರಿಯಾ ಗೊಬ್ಬರ ವಿತರಣೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಸಿ.ಆರ್. ಅಭಿಲಾಷಾ ಹೇಳಿದರು.

ಇಲ್ಲಿನ ರಸಗೊಬ್ಬರ ಮಾರಾಟಗಾರರ ಸಂಘದಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ೨೦೨೬-೨೭ನೇ ಸಾಲಿ ಮುಂಗಾರು ಹಂಗಾಮಿನಿಂದ ಈ ನಿಯಮ ಕೇಂದ್ರ ಸರ್ಕಾರ ಜಾರಿಗೆ ಮಾಡಿದ್ದು, ರಾಜ್ಯದ ಎಲ್ಲ ರೈತರು ಫಾರ್ಮರ್‌ ಐಡಿ ಹೊಂದುವುದು ಕಡ್ಡಾಯವಾಗಿದೆ. ಐಡಿ ಹೊಂದಿದ ರೈತರಿಗೆ ಮಾತ್ರ ಇನ್ಮುಂದೆ ರಸಗೊಬ್ಬರ ಪೂರೈಕೆ ಮಾಡಬೇಕಾಗುತ್ತದೆ. ಅಕ್ರಮ ಮಾರಾಟ ಮತ್ತು ಕಾಳಸಂತೆಯಲ್ಲಿ ಮಾರಾಟದ ದಂಧೆ ತಪ್ಪಿಸಲು ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.ಈ ಹೊಸ ನಿಯಮ ರೈತರಿಗೆ ಅವರ ಜಮೀನಿನ ವಿಸ್ತರಣೆ ಹಾಗೂ ಬೆಳೆದಿರುವ ಬೆಳೆಗಳಿಗೆ ಅನುಗುಣವಾಗಿ ಅವಶ್ಯಕ ಇರುವಷ್ಟು ಗೊಬ್ಬರ ವಿತರಿಸಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣ ಕೆ.ಕಿಸಾನ್ ತಂತ್ರಾಂಶದ ಮೂಲಕ ನಡೆಯಲಿದೆ.ರೈತರ ಜಮೀನು ವಿವರ, ಬೆಳೆ ಮಾಹಿತಿ ಹಾಗೂ ಅಗತ್ಯ ಗೊಬ್ಬರ ಪ್ರಮಾಣ ಈ ತಂತ್ರಾಂಶದಲ್ಲಿ ದಾಖಲಿಸಿ,ಅದಕ್ಕೆ ಅನುಗುಣವಾಗಿ ಗೊಬ್ಬರ ವಿತರಿಸಬೇಕು. ಇದರಿಂದ ಗೊಬ್ಬರ ದುರುಪಯೋಗ,ಅಕ್ರಮ ದಾಸ್ತಾನು ಮಾಡುವುದು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ ಎಂದರು.

ಇಲ್ಲಿಯವರೆಗೆ ಫಾರ್ಮರ್ ಐಡಿ ನೋಂದಣಿ ಮಾಡಿಸದ ರೈತರು ತಕ್ಷಣವೇ ನೋಂದಣೆ ಮಾಡಿಸಿಕೊಳ್ಳಬೇಕು. ನೋಂದಣಿಗೆ ಪಹಣೆ ಪತ್ರ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್ ದಾಖಲೆಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಫಾರ್ಮರ್ ಐಡಿ ಪಡೆದುಕೊಳ್ಳಬೇಕು. ಸರ್ವರ್ ನಂಬರ್ ಜೋಡಿಸಿದ ಬಳಿಕ ಮಾತ್ರ ರೈತರಿಗೆ ಸಂಪೂರ್ಣ ಪ್ರಮಾಣದ ರಸಗೊಬ್ಬರ ದೊರೆಯಲಿದೆ. ಈ ಕ್ರಮದಿಂದ ಒಂದೇ ರೈತರು ಬೇರೆ ಬೇರೆ ಹೆಸರಿನಿಂದ ಗೊಬ್ಬರ ಪಡೆಯುವಂಥ ಕೃತ್ಯಗಳು ಅಕ್ರಮ ಸಂಪೂರ್ಣ ತಡೆದಂತಾಗುತ್ತದೆ.

ತಾಲೂಕು ರಸಗೊಬ್ಬರ ಸಂಘದ ಅಧ್ಯಕ್ಷ ಸಂಗಮೇಶಗೌಡ ಮಾತನಾಡಿ,ಯೂರಿಯಾ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗದಂತೆ ಎಫ್‌ಐಡಿ ಹಾಗೂ ಕೆ.ಕಿಸಾನ್ ಆ್ಯಪ್ ಮೂಲಕ ಮಾರಾಟ ಮಾಡುವುದು ಉತ್ತಮ.ಆದರೆ ಮುಂಗಾರು ಹಂಗಾಮು ಬರುವವರೆಗೆ ಕೃಷಿ ಚಟುವಟಿಕೆಗಳು ಪ್ರಾರಂಭವಾಗುವುದಿಲ್ಲ. ಈಗ ಯೂರಿಯಾ ಗೊಬ್ಬರ ಮಾರಾಟಕ್ಕೆ ನಿರ್ಬಂದ ಹೇರುವುದ ಯಾವ ಉದ್ದೇಶಕ್ಕೆ ಎನ್ನುವುದ ಸರ್ಕಾರದ ಬಳಿ ಸೂಕ್ತ ನಿರ್ದೇಶನವಿಲ್ಲ ಎಂದು ಸಭೆಯಲ್ಲಿ ಪ್ರಶ್ನೆ ಮಾಡಿದರು.

ಸಭೆಯಲ್ಲಿ ರಸಗೊಬ್ಬರ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಸಂಕನೂರು, ಅಮರೇಶಪ್ಪ ಸಾಲಗುಂದಿ, ಎ.ಪಿ. ರೌಡಕುಂದಿ, ಶ್ರೀನಿವಾಸ ಗುಂಡೂರುಕ್ಯಾಂಪ್, ಸತೀಶ ಮುಷ್ಟುರಕ್ಯಾಂಪ್, ರುದ್ರಗೌಡ ಪನ್ನಾಪುರ, ಲಿಂಗರಾಜ ಮೇಲಿನಮನಿ, ಬಸನಗೌಡ ಯರಡೋಣಿ, ಗವಿಸಿದ್ದಪ್ಪ ಉಳೇನೂರು, ವೆಂಕಟರೆಡ್ಡಿ ಬೆನ್ನೂರು, ಬಸಣ್ಣ ಬಸವಣ್ಣ ಕ್ಯಾಂಪ್, ಮಲ್ಲಿಕಾರ್ಜುನ ಮೇಲ್ಮಾಳಗಿ, ವೀರನಗೌಡ, ಕೃಷಿ ಇಲಾಖೆಯ ನಾಗರಾಜ ರ‍್ಯಾವಳದ, ಸುಧಾಕರ್ ಸೇರಿದಂತೆ ಇತರರು ಇದ್ದರು.