ರಸಗೊಬ್ಬರವನ್ನು ನಿಗದಿತ ದರದಲ್ಲಿ ಮಾರಾಟ ಮಾಡಬೇಕು

| Published : Aug 03 2025, 01:30 AM IST

ಸಾರಾಂಶ

ರಸಗೊಬ್ಬರವನ್ನು ನಿಗದಿತ ದರದಲ್ಲಿ ಮಾರಾಟ ಮಾಡಬೇಕು. ರಸಗೊಬ್ಬರಗಳ ದಾಸ್ತಾನು ಹಾಗೂ ದರ ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು. ಹೆಚ್ಚಿನ ಪ್ರಮಾಣದಲ್ಲಿ ಡಿಎಪಿ ಬಳಸುವುದರಿಂದ ಮಣ್ಣಿನಲ್ಲಿ ರಂಜಕ ಅಂಶ ಹೆಚ್ಚಾಗುತ್ತದೆ. ಅಗತ್ಯವಾದ ಲಘು ಪೋಷಕಾಂಶಗಳಾದ ಸತ್ತು(ಜಿಂಕ್) ಮತ್ತು ಕಬ್ಬಿಣದ ಕೊರತೆ ಉಂಟಾಗುತ್ತದೆ, ಬೆಳೆ ಇಳುವರಿ ಕಡಿಮೆಯಾಗುತ್ತದೆ. ಡಿಎಪಿ ಗೊಬ್ಬರದ ಬದಲಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸಂಯುಕ್ತ ಗೊಬ್ಬರಗಳನ್ನು ಬಳಸಲು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾರಾಟಗಾರರಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ರಸಗೊಬ್ಬರವನ್ನು ನಿಗದಿತ ದರದಲ್ಲಿ ಮಾರಾಟ ಮಾಡಬೇಕು. ರಸಗೊಬ್ಬರಗಳ ದಾಸ್ತಾನು ಹಾಗೂ ದರ ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದ ಅವರು, ಈಗಾಗಲೇ ಮುಂಗಾರು ಆರಂಭದ ಪೂರ್ವದಲ್ಲಿಯೇ ಉತ್ತಮ ಮಳೆಯಾಗಿದ್ದು ರೈತರು ಕೂಡ ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ರೈತರಿಗೆ ಸಕಾಲದಲ್ಲಿ ರಸಗೊಬ್ಬರವನ್ನು ತೊಂದರೆಯಾಗದಂತೆ ವಿತರಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ಕೃತಕ ಅಭಾವ ಸೃಷ್ಟಿಸಿದರೆ ಕ್ರಮ:

ರೈತರಿಗೆ ಯಾವುದೇ ರೀತಿಯಲ್ಲೂ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಕ್ರಮಕೈಗೊಳ್ಳಲಾಗುವುದು. ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಯೂರಿಯಾ ಮತ್ತು ಡಿಎಪಿ ಗೊಬ್ಬರ ಸರಬರಾಜು ಮತ್ತು ವಿತರಣೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಡಿಎಪಿ ಗೊಬ್ಬರದಲ್ಲಿ ಸಾರಜನಕ ಮತ್ತು ರಂಜಕ ಪ್ರಧಾನ ಪೋಷಕಾಂಶಗಳಾಗಿವೆ. ಬೆಳೆಗಳಿಗೆ ಬೇಕಾಗುವ ಪ್ರಮುಖ ಇನ್ನೊಂದು ಪೋಷಕಾಂಶ ಪೊಟ್ಯಾಷ್ ಇರುವುದಿಲ್ಲ. ಇದರಿಂದ ಗಿಡಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಡಿಎಪಿ ಬಳಸುವುದರಿಂದ ಮಣ್ಣಿನಲ್ಲಿ ರಂಜಕ ಅಂಶ ಹೆಚ್ಚಾಗುತ್ತದೆ. ಅಗತ್ಯವಾದ ಲಘು ಪೋಷಕಾಂಶಗಳಾದ ಸತ್ತು(ಜಿಂಕ್) ಮತ್ತು ಕಬ್ಬಿಣದ ಕೊರತೆ ಉಂಟಾಗುತ್ತದೆ, ಬೆಳೆ ಇಳುವರಿ ಕಡಿಮೆಯಾಗುತ್ತದೆ. ಡಿಎಪಿ ಗೊಬ್ಬರದ ಬದಲಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸಂಯುಕ್ತ ಗೊಬ್ಬರಗಳನ್ನು ಬಳಸಲು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾರಾಟಗಾರರಿಗೆ ಸೂಚಿಸಿದರು.612 ಮೆಟ್ರಿಕ್‌ ಟನ್ ರಸಗೊಬ್ಬರ ದಾಸ್ತಾನು:

ಈ ವರ್ಷ ಮಳೆ ಬೇಗನೆಯಾಗಿರುವುದರಿಂದ ಕಳೆದ ಬಾರಿಗಿಂತಲೂ ಈ ಬಾರಿ ಬಿತ್ತನೆ ಪ್ರಮಾಣ ಹೆಚ್ಚಾಗಿದ್ದು ರಸಗೊಬ್ಬರದ ಬೇಡಿಕೆಯೂ ಹೆಚ್ಚಾಗಿದೆ, ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗುವ ರಾಗಿ, ಕಬ್ಬು ಮೆಕ್ಕೆಜೋಳ ಮತ್ತು ಇತರೆ ಬೆಳೆಗಳಿಗೂ ಯೂರಿಯಾ ಮತ್ತು ಡಿಎಪಿ ಅವಶ್ಯಕತೆಯಿರುವ ಕಾರಣ ಬೇಡಿಕೆ ಹೆಚ್ಚಾಗಿದೆ. ತಾಲೂಕಿನಲ್ಲಿ ಪ್ರಸಕ್ತ 612 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು ಸೆಪ್ಟೆಂಬರ್‌ ವೇಳೆಗೆ 1200 ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದ್ದು ಸೆಪ್ಟೆಂಬರ್‌ ಒಳಗೆ 1200 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನುಗಳನ್ನು ನಿಯಮಿತವಾಗಿ ಮರುಪೂರಣ ಆಗುವ ನಿರೀಕ್ಷೆಯಿದ್ದು, ಇನ್ನುಳಿದ ಹೆಚ್ಚುವರಿ ಗೊಬ್ಬರಕ್ಕೆ ಜಿಲ್ಲಾಧಿಕಾರಿಯವರಿಗೆ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್‌ ಜಿ.ಎಸ್. ಶಂಕರಪ್ಪ, ಸಹಾಯಕ ಕೃಷಿ ನಿರ್ದೇಶಕ ಕೆ. ಮೋಹನ್ ಕುಮಾರ್ ಸೇರಿದಂತೆ ತಾಲೂಕಿನ ರಸಗೊಬ್ಬರ ಮಾರಾಟಗಾರರು ಭಾಗವಹಿಸಿದ್ದರು.