ಸಾರಾಂಶ
(ರಾಜಾ ಶ್ರೀರಂಗದೇವರಾಯಲು ವೇದಿಕೆ)
ಕನ್ನಡಪ್ರಭ ವಾರ್ತೆ ಗಂಗಾವತಿ/ಕನಕಗಿರಿಆನೆಗೊಂದಿ ಉತ್ಸವವನ್ನು ಜಿಲ್ಲಾಡಳಿತವು ಊರ ಹಬ್ಬದಂತೆ ಆಚರಿಸಲಾಗುತ್ತಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡಿ, ಉತ್ಸವವನ್ನು ಯಶಸ್ವಿಗೊಳಿಸಿದ್ದೇವೆ ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ತಿಳಿಸಿದರು.
ಗಂಗಾವತಿ ತಾಲೂಕಿನ ಆನೆಗೊಂದಿಯ ಉತ್ಸವ ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ನಡೆದ ಐತಿಹಾಸಿಕ ಆನೆಗೊಂದಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಾಸ್ತಾವಿಕ ಮಾತನಾಡಿದರು.ಆನೆಗೊಂದಿ ಸುಂದರವಾದ ಗ್ರಾಮ, ನದಿ, ಸರೋವರ, ಭತ್ತದ ಗದ್ದೆಗಳು, ಕಬ್ಬು, ಬಾಳೆ, ತೆಂಗು, ಮಾವು ಬೆಳೆಗಳಿಂದ ಎಲ್ಲಾ ಕಡೆಗೆ ಯಾವಾಗಲು ಹಚ್ಚ ಹಸಿರು ಕಾಣುತ್ತದೆ. ಈ ಆನೆಗೊಂದಿ ಗ್ರಾಮವು ಪಕ್ಕದ ವಿಜಯನಗರ ಅರಸರ ಕಾಲದಲ್ಲಿ ಪ್ರಥಮ ರಾಜಧಾನಿಯಾಗಿ ಮೆರೆದ ಪ್ರದೇಶ ಎಂಬುದು ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. ವಿಶ್ವದ ಚರಿತ್ರೆಯಲ್ಲಿ ಐತಿಹಾಸಿಕವಾಗಿ ಹೆಸರಾಗಿರುವ ಹಂಪಿಯು ವಿಶ್ವ ಪರಂಪರೆಯ ಸ್ಥಳಗಳಲ್ಲಿ ಒಂದಾಗಿದೆ. ಈ ಹಂಪಿಯ ಬಳಿಯ ತುಂಗಭದ್ರಾ ನದಿಯ ದಡದ ಮೇಲಿರುವ ಆನೆಗೊಂದಿಯು ಹಂಪಿಯಷ್ಟೇ ಎಲ್ಲರ ಗಮನ ಸೆಳೆಯುವ ಪ್ರದೇಶವಾಗಿದೆ. ನಮ್ಮೆದುರಿಗೆ ಇಲ್ಲಿ ಕಾಣುವ ನದಿ, ಸರೋವರ, ಬೆಟ್ಟ, ಗುಡ್ಡಗಳೇ ಇದಕ್ಕೆ ಸಾಕ್ಷಿಯಾಗಿದೆ. ಈ ಆನೆಗೊಂದಿಯಲ್ಲಿ ಈ ಹಿಂದೆ ಶಾತವಾಹನರು ಸೇರಿದಂತೆ ಅನೇಕ ರಾಜರು ಆಡಳಿತ ನಡೆಸುವಾಗ ಈ ಪ್ರದೇಶವು ರಾಜಧಾನಿಯಾಗಿತ್ತು. ಬೇರೆ-ಬೇರೆ ಧರ್ಮದ ದೇವಾಲಯಗಳು, ಗಮನ ಸೆಳೆಯುವ ಶಿಲ್ಪ ಕಲೆಗಳು, ಕೋಟೆ ಸೇರಿದಂತೆ ಅನೇಕ ವಿಶೇಷತೆಯನ್ನು ಈ ಪ್ರದೇಶ ಹೊಂದಿದೆ ಎಂದರು.
ಆನೆಗೊಂದಿಯ ಪ್ರವೇಶ ದ್ವಾರ, ಗ್ರಾಮ, ಗಗನ ಮಹಲ್, ಆಶ್ರಮಗಳು, ಜೈನ ಮಂದಿರ, ಸೆರೆ ಮನೆ, ರಂಗನಾಥ ದೇವಾಲಯ, ಪಂಪಾ ಸರೋವರ, ಕೋಟೆ, 64 ಕಂಬಗಳ ಮಂಟಪ, ಅಂಜನಾದ್ರಿ ಬೆಟ್ಟ, ಹನುಮಾನ ಸೇತುವೆ ಎಲ್ಲವನ್ನು ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಆನೆಗೊಂದಿಯ ರಾಜಕೀಯ, ಪಾರಂಪರಿಕ ವಿಷಯಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಆನೆಗೊಂದಿ ಉತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಈ ಆನೆಗೊಂದಿ ಉತ್ಸವವನ್ನು ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ 1998ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮ ಅವಧಿಯಲ್ಲಿ ಇಂತಹ ಐತಿಹಾಸಿಕ ಉತ್ಸವ ಆಚರಣೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಎಂದರು.ಜಿಪಂ ಸಿಇಒ ರಾಹುಲ್ಪಾಂ ರತ್ನಂ ಪಾಂಡೆ, ಎಸ್ಪಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಉಪವಿಭಾಗಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ತಹಸೀಲ್ದಾರರಾದ ಯು.ನಾಗಾರಜ, ವಿಶ್ವನಾಥ ಮುರುಡಿ ಸೇರಿದಂತೆ ಇತರರು ಇದ್ದರು.