ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕೇಂದ್ರಿಯ ವಿವಿ ಕಲಬುರಗಿಗೆ ಬರಲು ಖರ್ಗೆ ಸಾಹೇಬರ ಪರಿಶ್ರಮವಿದೆ. ಆದರೀಗ ಇಲ್ಲಿನ ಪರಿಸ್ಥಿತಿ ಗಮನಿಸಿದರೆ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದಿಲ್ಲವೆಂದು ಗ್ರಾಮಿಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿಷಾದಿಸಿದರು.ಆಳಂದ ತಾಲೂಕಿನ ಕಡಗಂಚಿ ಕೇಂದ್ರಿಯ ವಿವಿ ಸಭಾಂಗಣದಲ್ಲಿ ಎಸ್ಸಿ, ಎಸ್ಟಿ ನೌಕರರ ಕಲ್ಯಾಣ ಸಂಘ ಏರ್ಪಡಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನದ ತತ್ವಗಳು ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ವಿಚಾರ ಸಂಕಿರಣ ಏರ್ಪಡಿಸಲು ವಿವಿಯ ರಿಜಿಸ್ಟ್ರಾರ್ ಅವರ ಹಾಕಿರುವ ಷರತ್ತುಗಳ ಪತ್ರ ಪ್ರದರ್ಶಿಸಿ ಕಟುವಾಗಿ ಟೀಕಿಸಿದ ಸಚಿವರು, ಶೈಕ್ಷಣಿಕ ಸಮಗ್ರತೆಗೆ ಧಕ್ಕೆ ತರದಂತೆ ಕಾರ್ಯಕ್ರಮ ನಡೆಸಬೇಕೆನ್ನುವ ಷರತ್ತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಜನರಿಂದ ಆಯ್ಕೆಯಾದ ಈ ಕ್ಷೇತ್ರದ ಶಾಸಕರು ಹಾಗೂ ಸರ್ಕಾರದ ಭಾಗವಾಗಿರುವ ನಾನು ಭಾಗವಹಿಸುವ ಕಾರ್ಯಕ್ರಮಕ್ಕೆ ಇಷ್ಟೊಂದು ಷರತ್ತು ಹಾಗೂ ಪೊಲೀಸ್ ಭದ್ರತೆ ಹಾಕುವ ಅವಶ್ಯಕತೆ ಏನಿತ್ತು? ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ವಿವಿಯ ಕುಲಪತಿಗೆ ಅಥವಾ ರಿಜಿಸ್ಟ್ರಾರ್ ಗೆ ಪತ್ರ ಬರೆಯಲು ಕೋರುತ್ತೇನೆ ಎಂದರು.
ವಿವಿಯಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳು ನಡೆದರೆ ಅದನ್ನು ಕಾನೂನಿನ ಅಡಿಯಲ್ಲಿ ಪ್ರಶ್ನಿಸಿ ನಾನು ನಿಮ್ಮೊಂದಿಗೆ ಇದ್ದೇನೆ. ವಿವಿಗೆ ಬರದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಪದೇ ಪದೇ ಬರುತ್ತೇನೆ. ಒಟ್ಟಿನಲ್ಲಿ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗದಂತೆ ತಡೆಯಬೇಕು ಎಂದರು.ವಿದ್ಯಾರ್ಥಿಗಳ ವಿರುದ್ಧ 25 ಕೇಸ್: ವಿವಿಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಒಟ್ಟು 25 ಕೇಸುಗಳು ದಾಖಲಾಗಿರುವ ಬಗ್ಗೆ ಪೊಲೀಸರೊಂದಿಗೆ ವೇದಿಕೆಯಿಂದಲೇ ಮಾತನಾಡಿದ ಸಚಿವರು, ಕೇಸುಗಳ ವಿವರವನ್ನು ನಾಳೆ ನನಗೆ ತಿಳಿಸಬೇಕು ಎಂದು ಸ್ಥಳದಲ್ಲಿ ಇದ್ದ ಡಿಎಸ್ಪಿಗೆ ಸೂಚಿಸಿದರು.
ಭಾರತ ಪ್ರಪಂಚದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿ ಉಳಿದಿರುವುದಕ್ಕೆ ಕಾರಣವೇ ಸಂವಿಧಾನವಾಗಿದೆ. ಸಂವಿಧಾನ ಎಂದರೆ ಕೆಲವರಿಗೆ ಸರಿ ಹೊಂದುತ್ತಿಲ್ಲ. 400 ಸೀಟು ಗೆದ್ದರೆ ಸಂವಿಧಾನ ಬದಲಾಯಿಸುವ ಮಾತನಾಡುವ ರಾಜ್ಯದ ಸಂಸದರೊಬ್ಬರು ಜನರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲಿಲ್ಲ ಎಂದು ಟೀಕಿಸಿದರು.ಬಿಜೆಪಿಯ ಅದೆಷ್ಟು ಮುಖಂಡರು ಗೋಮೂತ್ರ ಕುಡಿತಾರೆ: ಮನುವಾದಿಗಳು ಮೊದಲು ಮನುಸ್ಮೃತಿಯನ್ನು ತಮ್ಮ ಮನೆಯಲ್ಲಿ ಅಳವಡಿಸಿಕೊಳ್ಳಲಿ. ಆಗ ಅವರ ಮನೆಯವರ ಪ್ರತಿಕ್ರಿಯೆ ಹೇಗಿರುತ್ತದೆ ಗೊತ್ತಾಗುತ್ತದೆ ಎಂದ ಖರ್ಗೆ, ಬಿಜೆಪಿಯ ಪ್ರಮುಖ ನಾಯಕರ ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ಬಡವರ ಕೆಳವರ್ಗದವರ ಮಕ್ಕಳನ್ನು ಧರ್ಮ ರಕ್ಷಣೆ ಹಾಗೂ ಗೋ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ. ಎಷ್ಟು ಬಿಜೆಪಿ ನಾಯಕರು ಗೋಮೂತ್ರ ಕುಡಿಯುತ್ತಿದ್ದಾರೆ? ಎಷ್ಟು ಗೋಶಾಲೆ ನಡೆಸುತ್ತಿದ್ದಾರೆ ? ಎಂದು ಪ್ರಶ್ನಿಸಿದರು.
ಭೇಟಿಗೂ ಬಾರದ ಕುಲಪತಿ: ಬಿಆರ್ ಕಿಡಿಮುಖ್ಯಮಂತ್ರಿ ಸಲಹೆಗಾರರಾದ ಬಿಆರ್ ಪಾಟೀಲ್ ಮಾತನಾಡಿ, ಇಂದಿನ ಸಂಕಿರಣಕ್ಕೆ ಒದಗಿಸಿರುವ ಪೊಲೀಸ್ ಬಂದೋಬಸ್ತ್ ನೋಡಿ ನನಗೆ ಗಾಬರಿಯಾಯಿತು. ನಾವೇನು ಭಯೋತ್ಪಾದಕರಾ? ಪಾಕಿಸ್ತಾನದವರಾ? ನಾವು ವಿವಿಗೆ ಬಂದಿರುವುದು ಬೆಂಕಿ ಹಚ್ಚುವುದಕ್ಕಲ್ಲ, ದೀಪ ಬೆಳಗಿಸಲು. ಇಲ್ಲಿಗೆ ರಾಜ್ಯ ಸರ್ಕಾರ ಮಂತ್ರಿಗಳು ಅಥವಾ ಶಾಸಕರು ವಿವಿಗೆ ಬಂದರೆ ಸೌಜನ್ಯಕ್ಕಾದರೂ ವಿವಿಯ ಅಧಿಕಾರಿಗಳು ನಮ್ಮನ್ನು ಸ್ವಾಗತಿಸಲಿಲ್ಲ. ಈ ವರ್ತನೆಯನ್ನು ನಾನು ಖಂಡಿಸುತ್ತೇನೆ. ಇದೇ ವರ್ತನೆ ಮುಂದುವರೆಸಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.