ನಮ್ಮ ತಾತ-ಮುತ್ತಾತಂದಿರ ಕಾಲದಿಂದಲೂ ಈ ಬಂದಂತಮ್ಮನ ಹಬ್ಬವನ್ನು ನಾವು ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ವಿಶೇಷವಾಗಿ ಮಕ್ಕಳಿಗೆ ಬರುವ ಸಿಡುಬು ಮತ್ತು ಇತರೆ ಸಾಂಕ್ರಾಮಿಕ ಕಾಯಿಲೆಗಳು ದೇವಿಯ ಕೃಪೆಯಿಂದ ಗುಣವಾಗಲಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ನಗರದ ಹೊಸಹಳ್ಳಿ ಮತ್ತು ರಾಮನಹಳ್ಳಿ ಗ್ರಾಮದಲ್ಲಿ ಗ್ರಾಮದ ಯಜಮಾನರು ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಬಂದಂತಮ್ಮನ ಹಬ್ಬವನ್ನು ಆಚರಿಸಲಾಯಿತು.

ತಲೆಮಾರುಗಳಿಂದ ನಡೆದುಬಂದಿರುವ ಈ ವಿಶಿಷ್ಟ ಸಂಪ್ರದಾಯವನ್ನು ಇಂದಿನ ಪೀಳಿಗೆಯೂ ಅಷ್ಟೇ ಶ್ರದ್ಧಾ ಭಕ್ತಿಯಿಂದ ಮುಂದುವರಿಸುತ್ತಿರುವುದು ಈ ಭಾಗದ ವಿಶೇಷತೆಯಾಗಿದೆ.

ಹಬ್ಬದ ಹಿನ್ನೆಲೆ ಕುರಿತು ಮಾತನಾಡಿದ ಗ್ರಾಮದ ಮುಖಂಡ ಎಚ್.ಸಿ.ಶಿವಲಿಂಗೇಗೌಡ, ನಮ್ಮ ತಾತ-ಮುತ್ತಾತಂದಿರ ಕಾಲದಿಂದಲೂ ಈ ಬಂದಂತಮ್ಮನ ಹಬ್ಬವನ್ನು ನಾವು ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ವಿಶೇಷವಾಗಿ ಮಕ್ಕಳಿಗೆ ಬರುವ ಸಿಡುಬು ಮತ್ತು ಇತರೆ ಸಾಂಕ್ರಾಮಿಕ ಕಾಯಿಲೆಗಳು ದೇವಿಯ ಕೃಪೆಯಿಂದ ಗುಣವಾಗಲಿ ಹಾಗೂ ಇಡೀ ಗ್ರಾಮಕ್ಕೆ ಒಳಿತಾಗಲಿ ಎಂಬುದು ನಮ್ಮ ನಂಬಿಕೆಯಾಗಿದೆ ಎಂದು ತಿಳಿಸಿದರು. ಅಲ್ಲದೇ, ಕೃಷಿ ಚಟುವಟಿಕೆಗಳು ಸುಗಮವಾಗಿ ಸಾಗಲು ಈ ಬಾರಿ ಉತ್ತಮ ಮಳೆಯಾಗಲಿ ಎಂದು ನಾವೆಲ್ಲರೂ ಒಗ್ಗೂಡಿ ದೇವಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

ಹೊಸಹಳ್ಳಿ ಎಲ್ಲೆ ಬೂಟಿನಿಂದ ಅಮ್ಮನ ವಿಗ್ರಹವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಕರೆತಂದು, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು. ಹಬ್ಬದ ಪದ್ಧತಿಯಂತೆ ಸಂಜೆ ವೇಳೆ ದೇವಿಗೆ ಮಾಂಸಾಹಾರದ ಎಡೆ ಅರ್ಪಿಸಲಾಗುತ್ತದೆ. ಕಾರ್ಯಕ್ರಮದ ಅಂಗವಾಗಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗುವುದು ಎಂದರು.

ಗ್ರಾಮದ ಯಜಮಾನ್ ಸುರೇಶ್, ಪಟೇಲ್ ಬೋರಲಿಂಗಣ್ಣ, ಸ್ವಾಮಿ, ಸಿದ್ದಪ್ಪ, ರೇವಣ್ಣ, ಎಚ್.ಎಲ್.ಶಿವಲಿಂಗಯ್ಯ, ರಾಮನಹಳ್ಳಿ ರಾಮಣ್ಣ, ಸ್ವಾಮಿ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಶಂಕರ ಜಯಂತಿ ಅಂಗವಾಗಿ ವಿಶೇಷ ಪೂಜೆ, ರುದ್ರಾಭಿಷೇಕಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಪಟ್ಟಣದ ಭ್ರಮರಾಮಭ ಮಲ್ಲಿಕಾರ್ಜುನ ಈಶ್ವರ ದೇವಾಲಯದಲ್ಲಿ ಶಂಕರ ಜಯಂತಿಯ ಪ್ರಯುಕ್ತ ವಿಶೇಷ ಪೂಜೆ ಮತ್ತು ರುದ್ರಾಭಿಷಕ ನಡೆದವು. ಜಗದ್ಗುರು ಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆ ದೇವಸ್ಥಾನದ ರಾಜಬೀದಿಯಲ್ಲಿ ನಡೆಯಿತು. ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಬ್ರಾಹ್ಮಣ ಸಮಾಜದ ನೂರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿ ಶಂಕರರ ಗೀತೆ ಮತ್ತು ಸ್ತೋತ್ರಗಳನ್ನು ಪಠಣ ಮಾಡಿದರು.

ಈ ವೇಳೆ ಧಾರ್ಮಿಕ ಚಿಂತಕ ಗೋಪಾಲಕೃಷ್ಣ ಅವದಾನಿ ಮಾತನಾಡಿ, ಶಂಕರರು ಜನಿಸಿದ್ದ ಸಮಯದಲ್ಲಿ ಸನಾತನ ಧರ್ಮಕ್ಕೆ ತಲೆದೋರಿದ್ದ ಅಪಾಯಗಳು ಮತ್ತೆ ತಲೆಎತ್ತಿವೆ. ನಮ್ಮ ಸಂಸ್ಕೃತಿ ಮತ್ತು ಚಿಂತನೆಗಳನ್ನು ಉಳಿಸಿಕೊಂಡು ಭಾರತವನ್ನು ವಿಶ್ವ ಗುರುವಾಗಿಸುವ ನಿಟ್ಟಿನಲ್ಲಿ ಸನಾತನ ಧರ್ಮದ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕಿದೆ ಎಂದರು.ವೇದ, ಉಪನಿಷತ್ತು, ಪುರಾಣ ಮಹಾಕಾವ್ಯ ಮತ್ತು ಭಗವದ್ಗೀತೆಗೆ ಭಾಷ ಬರೆದು ಸಂರಕ್ಷಿಸಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲುತ್ತದೆ. ಅವರು ಅವತಾರವಾಗದಿದ್ದರೆ ಸನಾತನ ಧರ್ಮದ ಪರಂಪರೆ ಇಲ್ಲಿಯವರೆವಿಗೆ ಬರುತ್ತಿರಲಿಲ್ಲ. ಹಾಗಾಗಿ ಈ ಪರಂಪರೆಯನ್ನು ಕೊಂಡೊಯ್ಯುವ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ ಶಂಕರರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಿ ಧರ್ಮ ಮತ್ತು ಸಂಸ್ಕೃತಿ ಸಂರಕ್ಷಿಸುವ ಕಾರ್ಯರಾಗಬೇಕೆಂದರು.

ಸಮಾರಂಭದಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ರಘುರಾಮ್ ನಾಡಿಗ್, ಮುಖಂಡರಾದ ರಾಮಚಂದ್ರು, ಸುಬ್ಬು ನರಸಿಂಹ, ಅನಂತರಾಮಯ್ಯ, ಮಂಜುನಾಥ್, ಹರೀಶ್, ಶ್ರೀನಿವಾಸು, ವಾಸಣ್ಣ, ಈಶ್ವರ್, ರಾಜಾರಾಮ್, ಅರ್ಚಕರಾದ ರೋಹಿತ್ ಶರ್ಮ, ಮಾಲತೇಶ್ ಭಟ್ಟ, ಗಿರೀಶ್, ಸತೀಶ್, ವಿಠಲ್ ಹೆಗಡೆ, ಮಾತಾಂಡ ಸೇರಿದಂತೆ ಹಲವರು ಭಾಗವಹಿಸಿದ್ದರು.