ಹಬ್ಬಗಳು ಭಾಷೆಗಳ ನಡುವಣ ಸೌಹಾರ್ದ ಸೇತುವೆಗಳು

| Published : Sep 02 2025, 01:01 AM IST

ಹಬ್ಬಗಳು ಭಾಷೆಗಳ ನಡುವಣ ಸೌಹಾರ್ದ ಸೇತುವೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಹಬ್ಬಗಳು ನಾಡಿನ ಸಂಸ್ಕೃತಿಯ ಅಸ್ಮಿತೆಯ ಪ್ರತೀಕವಾಗಿದ್ದು, ಓಣಂ ಕೇರಳದ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ. ಅನ್ಯರಾಜ್ಯದ ಹಬ್ಬವನ್ನು ಕನ್ನಡದ ನೆಲದಲ್ಲಿ ಆಚರಿಸುತ್ತಿರುವ ಸಂದರ್ಭದಲ್ಲಿ ಹಬ್ಬಗಳು ಭಾಷೆಗಳ ನಡುವಣ ಸೌಹಾರ್ದ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಬ್ಬಗಳು ನಾಡಿನ ಸಂಸ್ಕೃತಿಯ ಅಸ್ಮಿತೆಯ ಪ್ರತೀಕವಾಗಿದ್ದು, ಓಣಂ ಕೇರಳದ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ. ಅನ್ಯರಾಜ್ಯದ ಹಬ್ಬವನ್ನು ಕನ್ನಡದ ನೆಲದಲ್ಲಿ ಆಚರಿಸುತ್ತಿರುವ ಸಂದರ್ಭದಲ್ಲಿ ಹಬ್ಬಗಳು ಭಾಷೆಗಳ ನಡುವಣ ಸೌಹಾರ್ದ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿ.ವಿ.ವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶಿವಾಲಯ ಆವರಣದಲ್ಲಿ ಸೋಮವಾರ ಕೇರಳದ ಸಾಂಪ್ರದಾಯಿಕ ಓಣಂ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಓಣಂ ಹಬ್ಬ ವಿಶೇಷವಾಗಿ ಕೇರಳದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ. ಬಿವಿವಿ ಸಂಘದ ನರ್ಸಿಂಗ್ ಕಾಲೇಜುಗಳಲ್ಲಿ ಕೇರಳದ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಓಣಂ ಹಬ್ಬದ ಆಚರಣೆಗೆ ಸಮಯದ ಅಭಾವದಿಂದ ಈ ವಿದ್ಯಾರ್ಥಿಗಳಿಗೆ ಕೇರಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಬಾಗಲಕೋಟೆಯಲ್ಲೇ ಓಣಂ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೇರಳದ ಚಂಡಮದ್ದಳೆ ತಂಡ, ಬಾಣಸಿಗರ ತಂಡ ಮತ್ತು ಸ್ತಬ್ಧ ಚಿತ್ರಗಳು ನಮ್ಮ ಮೆಡಿಕಲ್ ಕಾಲೇಜಿಗೆ ಆಗಮಿಸಿ ಓಣಂ ಹಬ್ಬದ ಸಂಭ್ರವನ್ನು ಹೆಚ್ಚಿಸಿರುವರು. ಇಂಥ ಆಚರಣೆಗಳ ಮೂಲಕ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯರಾಜ್ಯದ ಸಂಪ್ರದಾಯ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸಿದಂತಾಗುತ್ತದೆ. ಅದೇ ರೀತಿ ಈ ನೆಲದ ಹಬ್ಬಗಳು ಮತ್ತು ರಾಜ್ಯೋತ್ಸವದ ಆಚರಣೆಯ ಮೂಲಕ ಅನ್ಯಭಾಷಿಕರಿಗೆ ಕನ್ನಡದ ವಿಶಿಷ್ಠತೆ ಪರಿಚಯಿಸಲಾಗುತ್ತಿದೆ ಎಂದರು.ಗಮನ ಸೆಳೆದ ಚಂಡಮದ್ದಳೆ ಹಾಗೂ ಕೇರಳದ ವಿಶೇಷ ಖಾದ್ಯ:

ಓಣಂ ಆಚರಣೆಯ ಉದ್ಘಾಟನೆಗೆ ಆಗಮಿಸಿದ ಡಾ.ವೀರಣ್ಣ ಚರಂತಿಮಠ ಅವರನ್ನು ಕೇರಳದ ಪಾರಂಪರಿಕ ವಾದ್ಯ ಚಂಡಮದ್ದಳೆ ನುಡಿಸುವುದರ ಮೂಲಕ ಸ್ವಾಗತಿಸಲಾಯಿತು. ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಓಣಂ ನೃತ್ಯ ಪ್ರದರ್ಶಿಸಿದರು.ಮಹಾಬಲಿ ಮತ್ತು ಇನಸ್ಟಾಗ್ರಾಂ ನಲ್ಲಿ ಅತೀ ಹೆಚ್ಚು ವೀಕ್ಷಣೆಗಾಗಿ ಗಿನ್ನಿಸ್ ವರ್ಡ್‌ ರೆಕಾರ್ಡ ಹೊಂದಿರುವ ಕಾವಾಡಿ ದ್ರುವಂ ಕಲಸ್ಮತಿ ಕಲಾವಿದರ ತಂಡದವರಿಂದ ಹಾಗೂ 500 ಜನ ವಿದ್ಯಾರ್ಥಿನಿಯರು ಒಳಗೊಂಡ ಅದ್ಧೂರಿ ಮೆರವಣಿಗೆ ಶಿವಾಲಯದಿಂದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದವರೆಗೆ ಜರುಗಿತು. ಕಾಲೇಜಿನ ಆವರಣದಲ್ಲಿ ಸ್ತಬ್ಧ ಚಿತ್ರಗಳು ಮತ್ತು ಚಂಡಮದ್ದಳೆ ಜೊತೆಗೆ ನೃತ್ಯ ಪ್ರದರ್ಶಿಸಿ, ಕೇರಳದ 24 ಪ್ರಕಾರದ ವಿವಿಧ ಓಣಂ ಖಾದ್ಯಗಳನ್ನು ಸವಿದರು.ಬಿವಿವಿ ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ ಸಜ್ಜನ (ಬೇವೂರ), ಹಾಸ್ಟೆಲ್ ಕಮಿಟಿ ಕಾರ್ಯಾಧ್ಯಕ್ಷರಾದ ಕುಮಾರಸ್ವಾಮಿ ಹಿರೇಮಠ (ಚಿತ್ತರಗಿ), ಬಿವಿವಿ ಸಂಘದ ಗೌರವಾನ್ವಿತ ಸದಸ್ಯರಾದ ಮಹೇಶ ಅಂಗಡಿ, ಅಶೋಕ ಕಲ್ಯಾಣಶೆಟ್ಟರ, ಆಡಳಿತ ಮಂಡಳಿಯ ಸದಸ್ಯರಾದ ಡಾ.ಸುಭಾಶ ಪಾಟೀಲ, ನರ್ಸಿಂಗ್ ಕಾಲೇಜುಗಳ ಪ್ರಾಚಾರ್ಯರಾದ ಡಾ.ದಿಲೀಪ್ ನಾಟೆಕರ್, ಡಾ.ಜಯಶ್ರೀ ಈಟ್ಟಿ ಮತ್ತು ಡಾ.ಪ್ರವೀಣ ಪಾಟೀಲ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ, ದಂತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶ್ರೀನಿವಾಸ ವನಕಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಫಿಜಿಯೋಥೆರಪಿ ಕಾಲೇಜಿನ ಮಹಾಂತೇಶ ಬಿರಡಿ ಮತ್ತು ಎಲ್ಲ ಆರೋಗ್ಯ ವಿಜ್ಞಾನ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.