ಮನೆ, ಮನೆಗಳಲ್ಲಿ ರಂಗೋಲಿ, ತಳಿರು, ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ದೇವಿಯರ ದರ್ಶನ ಹಾಗೂ ಪೂಜಾ ಕೈಂಕರ್ಯಗಳಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಗದಗ: ನಗರದ ಒಕ್ಕಲಗೇರಿ ಓಣಿಯಲ್ಲಿ 12 ವರ್ಷಗಳಿಗೊಮ್ಮೆ ನಡೆಯಬೇಕಿದ್ದ ಗ್ರಾಮದೇವತೆಗಳ ಹರಿ ಜಾತ್ರೋತ್ಸವ ಕೊರೋನಾ ಹಿನ್ನೆಲೆ 6 ವರ್ಷ ತಡವಾಗಿ, 18 ವರ್ಷಗಳ ನಂತರ ಮಂಗಳವಾರ ಅಪಾರ ಜನರ ಭಕ್ತಿಭಾವದ ನಡುವೆ ಜಾತ್ರೆಗೆ ಚಾಲನೆ ದೊರೆಯಿತು.

ಹರಿ ಜಾತ್ರೋತ್ಸವದ ಅಂಗವಾಗಿ ಒಕ್ಕಲಗೇರಿ ಓಣಿಯ ದ್ಯಾಮವ್ವನ ಕಟ್ಟೆಯಲ್ಲಿ ದ್ಯಾಮಮ್ಮ ಹಾಗೂ ದುರಗಮ್ಮ ದೇವಿಯರ ಮೂರ್ತಿಗಳನ್ನು ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಬೆಳಗ್ಗೆಯಿಂದಲೇ ಒಕ್ಕಲಗೇರಿ ಓಣಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಮನೆ, ಮನೆಗಳಲ್ಲಿ ರಂಗೋಲಿ, ತಳಿರು, ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ದೇವಿಯರ ದರ್ಶನ ಹಾಗೂ ಪೂಜಾ ಕೈಂಕರ್ಯಗಳಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಗೆ ಉಡಿ ತುಂಬಿ, ಅರಿಶಿಣ, ಕುಂಕುಮ ಅರ್ಪಿಸಿ ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.

ಹರಿ ಜಾತ್ರೆಯ ಅಂಗವಾಗಿ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಜಾತಿ, ಧರ್ಮ ಹಾಗೂ ಸಮಾಜದ ಭೇದವಿಲ್ಲದೆ ವಿವಿಧ ಸಮುದಾಯಗಳ ಜನರು ಜಾತ್ರೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಗದಗದ ಸಾಂಸ್ಕೃತಿಕ ಸಾಮರಸ್ಯದ ಪ್ರತೀಕವಾಗಿ ಕಂಡುಬಂದಿತು.

ಗದಗ- ಬೆಟಗೇರಿ ಗ್ರಾಮದೇವತೆಗಳಾದ ದ್ಯಾಮವ್ವ ಹಾಗೂ ದುರಗಮ್ಮ ದೇವಿಯರ ಹರಿಜಾತ್ರೆ 12 ವರ್ಷಗಳಿಗೊಮ್ಮೆ ನಡೆಯುವ ವಿಶಿಷ್ಟ ಆಚರಣೆಯಾಗಿದೆ. ಈ ಬಾರಿಯ ಹರಿಜಾತ್ರೆ ಆ. 18ರಿಂದ 28ರ ವರೆಗೆ ಒಕ್ಕಲಗೇರಿ ಓಣಿಯ ದ್ಯಾಮವ್ವನ ಕಟ್ಟೆ ಹಾಗೂ ಜೋಡ ಮಾರುತಿ ದೇವಸ್ಥಾನದ ಎದುರಿನ ದ್ಯಾಮಮ್ಮ- ದುರಗಮ್ಮ ದೇವಸ್ಥಾನದಲ್ಲಿ ನಡೆಯಲಿದೆ. ಜಾತ್ರೆಯ ಅಂಗವಾಗಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಆರಾಧನೆ: ಉತ್ತರ ಕರ್ನಾಟಕದ ಗ್ರಾಮೀಣ ಹಾಗೂ ನಗರ ಸಂಸ್ಕೃತಿಯಲ್ಲಿ ದ್ಯಾಮವ್ವ, ದುರ್ಗಮ್ಮ ಸೇರಿದಂತೆ ಗ್ರಾಮದೇವತೆಗಳ ಆರಾಧನೆಗೆ ವಿಶಿಷ್ಟ ಸ್ಥಾನವಿದೆ. ಗ್ರಾಮಕ್ಕೆ ರೋಗ, ರುಜಿನಗಳು ಬಾರದಿರಲಿ, ಜನರಿಗೆ ಸುಖ, ಸಮೃದ್ಧಿ ದೊರೆಯಲಿ, ಕೃಷಿ ಹಾಗೂ ಜೀವನೋಪಾಯದಲ್ಲಿ ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಗ್ರಾಮದೇವತೆಗಳನ್ನು ಆರಾಧಿಸುವ ಜನಪದ ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಯುವ ಮುಖಂಡ ವಸಂತ ಪಡಗದ ತಿಳಿಸಿದರು.