ಸ್ಥಳೀಯ ಬಸವೇಶ್ವರ ನಗರ ಸಿ ಬ್ಲಾಕ್‌ನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಚೌಡೇಶ್ವರಿ ದೇವಸ್ಥಾನದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮೊದಲ ದಿನವಾದ ಮಂಗಳವಾರ ಸಂಜೆ ಚೌಡೇಶ್ವರಿ ದೇವಿಯ ಶಿಲಾಮೂರ್ತಿ ಹಾಗೂ ಕುಂಭ ಮೆರವಣಿಗೆ ಭಕ್ತಿಭಾವದಿಂದ ನಡೆಯಿತು.

ಹಾವೇರಿ: ಸ್ಥಳೀಯ ಬಸವೇಶ್ವರ ನಗರ ಸಿ ಬ್ಲಾಕ್‌ನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಚೌಡೇಶ್ವರಿ ದೇವಸ್ಥಾನದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮೊದಲ ದಿನವಾದ ಮಂಗಳವಾರ ಸಂಜೆ ಚೌಡೇಶ್ವರಿ ದೇವಿಯ ಶಿಲಾಮೂರ್ತಿ ಹಾಗೂ ಕುಂಭ ಮೆರವಣಿಗೆ ಭಕ್ತಿಭಾವದಿಂದ ನಡೆಯಿತು.

ಹಾವೇರಿಯ ಬಸವೇಶ್ವರ ನಗರ ಎ ಬ್ಲಾಕ್‌ನಿಂದ ಆರಂಭಗೊಂಡ ಮೆರವಣಿಗೆಗೆ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಶಿಲಾಮೂರ್ತಿಯನ್ನು ಅಲಂಕರಿಸಿದ ವಾಹನದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ತಲೆಯ ಮೇಲೆ ಕುಂಭ ಹೊತ್ತು ಭಕ್ತಿಭಾವದಿಂದ ಹೆಜ್ಜೆ ಹಾಕಿದರು.

ಪುರವಂತಿಕೆ, ಡೊಳ್ಳು ಸೇರಿದಂತೆ ಸಕಲ ವಾದ್ಯ ವೈಭವ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ನಗರದ ವಿವಿಧೆಡೆ ಸಂಚರಿಸಿದ ಮೆರವಣಿಗೆಯಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಚೌಡೇಶ್ವರಿ ದೇವಸ್ಥಾನವನ್ನು ತಲುಪಿದ ಶಿಲಾಮೂರ್ತಿಗೆ ಪೂಜಾ ಕೈಂಕರ್ಯಗಳು ಜರುಗಿದವು. ವಿಗ್ರಹಕ್ಕೆ ಜಲಾವಾಸ ಸಂಸ್ಕಾರವನ್ನು ನೀಡಲಾಯಿತು.

ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿರದೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಗಳಾಗಬೇಕು. ಚೌಡೇಶ್ವರಿ ದೇವಿಯ ಆರಾಧನೆಯ ಮೂಲಕ ಸಮಾಜದಲ್ಲಿ ಭಕ್ತಿ, ಶಾಂತಿ, ಸೌಹಾರ್ದತೆ ಹಾಗೂ ಒಗ್ಗಟ್ಟಿನ ಭಾವನೆ ಮತ್ತಷ್ಟು ಬಲಗೊಳ್ಳಲಿ. ಯುವಜನರು ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.

ಮೆರವಣಿಗೆಯಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಗೌರವಾಧ್ಯಕ್ಷ ಸಂಜೀವಕುಮಾರ ನೀರಲಗಿ, ಸಮಿತಿ ಅಧ್ಯಕ್ಷ ಕೋಟ್ರೇಶಪ್ಪ ಬಿಜಾಪೂರ, ಉಪಾಧ್ಯಕ್ಷ ಎಂ.ಬಿ. ಚಿಮ್ಮನಕಟ್ಟಿ, ಪರಮೇಶಪ್ಪ ಶಿವಣ್ಣನವರ, ಕೆ.ಸಿ.ಪಾವಲಿ, ಡಾ. ಮಹದೇವಿ ಕಣವಿ, ಆರ್.ಬಿ. ದಿಡಗೂರ, ಮಲ್ಲಿಕಾರ್ಜುನ ತಿಮ್ಮೇನಹಳ್ಳಿ, ಶಿವಕುಮಾರ ಹಡಪದ, ಬಸವರಾಜ ಕೋರಿ, ಕುಮಾರ್ ಹಡಪದ, ಈ.ಸಿ. ಅಗಸಿಬಾಗಲ, ಡಾ.ವಿ.ಎಚ್. ಪ್ರಭು, ಡಾ. ಬಸವರಾಜ ವೀರಾಪುರ, ಡಿ.ಎನ್. ಪೂಜಾರ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಭಕ್ತರು ಹಾಗೂ ನಗರದ ವಿವಿಧ ಬಡಾವಣೆಗಳ ಸಾರ್ವಜನಿಕರು ಭಾಗವಹಿಸಿದ್ದರು.

ಭಕ್ತರ ಶ್ರದ್ಧೆ ಮತ್ತು ಸೇವಾಭಾವದಿಂದ ನಿರ್ಮಾಣಗೊಂಡಿರುವ ದೇವಸ್ಥಾನವು ಸಮಾಜದ ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾಗಲಿ. ದೇವಿಯ ಕೃಪೆಯಿಂದ ಎಲ್ಲರ ಬದುಕಿನಲ್ಲಿ ನೆಮ್ಮದಿ, ಆರೋಗ್ಯ ಹಾಗೂ ಸಮೃದ್ಧಿ ನೆಲೆಸಲಿ. ಧರ್ಮದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.