ಮುಸ್ಲಿಂರ ಈದ್ ಉಲ್ ಫಿತರ್ ರಂಜಾನ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ರಂಜಾನ್ ಪ್ರಯುಕ್ತ ಮಸೀದಿಗಳು, ದರ್ಗಾಗಳನ್ನು ವಿದ್ಯುತ್ ದೀಪಾಲಂಕಾರದಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ತುಮಕೂರುಮುಸ್ಲಿಂರ ಈದ್ ಉಲ್ ಫಿತರ್ ರಂಜಾನ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ರಂಜಾನ್ ಪ್ರಯುಕ್ತ ಮಸೀದಿಗಳು, ದರ್ಗಾಗಳನ್ನು ವಿದ್ಯುತ್ ದೀಪಾಲಂಕಾರದಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಸಹ ಮುಸ್ಲಿಂರು ರಂಜಾನ್ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ನಗರದ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಂರು ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಬೆಳಿಗ್ಗೆ 10ಗಂಟೆಗೂ ಮೊದಲೇ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ರಂಜಾನ್ ಹಬ್ಬದ ಸಂಭ್ರಮ ಹಿಂದೂ ಮತ್ತು ಮುಸ್ಲಿಂ ಬಾಂಧವರ ಭಾವೈಕ್ಯತೆಯ ಸಂಕೇತವಾಗಿ ಮಾರ್ಪಟ್ಟಿದ್ದು, ಮುಸ್ಲಿಂರಿಗೆ ಹಿಂದೂ ಸಮುದಾಯದವರು ಸಹ ಹಬ್ಬದ ಶುಭಾಶಯ ಕೋರುವ ಮೂಲಕ ಭಾವೈಕ್ಯತೆಯನ್ನು ಸಾರಿದರು. ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಶುಭಾಶಯ ಕೋರಿ ಮಾತನಾಡಿದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ಪ್ರಪಂಚದಾದ್ಯಂತ ರಂಜಾನ್ ಹಬ್ಬದಲ್ಲಿ 30 ವ್ರತಗಳನ್ನು ಆಚರಿಸಿ, ನಾವೆಲ್ಲರೂ ಅನ್ನ, ಆಹಾರ ಬಿಟ್ಟು, ಕೆಡಕನ್ನು ಬಿಟ್ಟು ಸಹೋದರತ್ವ, ಸಹಬಾಳ್ವೆಯಿಂದ 30 ದಿನಗಳನ್ನು ಕಳೆದಿದ್ದೇವೆ. ನಾವೆಲ್ಲರೂ 30 ದಿನಗಳ ಉಪವಾಸ ಇದ್ದು, ಜಕಾತ್‌ನ್ನು ಕೂಡ ಆಚರಿಸಿದ್ದೇವೆ. ಜಕಾತ್ ಎಂದರೆ ಪ್ರಪಂಚದ ಮಾನವರಲ್ಲಿ ಅಸಮತೋಲನ ಇದೆ, ಬಡವರು, ವಿಧವೆಯವರು, ಸಂಪತ್ತು ಉಳ್ಳವರು. ಉಳ್ಳವರು ಬಡವರಿಗೆ ತಮ್ಮ ದುಡಿಮೆಯ ಒಂದಷ್ಟು ಭಾಗವನ್ನು ಜಕಾತ್ ನೀಡಿ ಅವರಿಗೂ ಕೂಡ ನಮ್ಮ ಜತೆ ಸಮಪಾಲು-ಸಮಬಾಳು ಒದಗಿಸಿಕೊಡುವುದು ರಂಜಾನ್ ಧ್ಯೇಯ. ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧಗಳು ನಿಲ್ಲಲಿ, ಮಾನವೀಯತೆಯ ಸಂದೇಶ ಎಲ್ಲರಿಗೂ ಹೋಗಲಿ. ಶಾಂತಿ ನೆಲೆಸಲಿ, ಮಳೆ-ಬೆಳೆಯಾಗಲಿ. ಯಾರು ಮೇಲಲ್ಲ, ಯಾರೂ ಕೀಳಲ್ಲ, ನಾವೆಲ್ಲರೂ ಒಂದೇ ಎಂಬುದು ರಂಜಾನ್ ಸಂದೇಶವಾಗಿದೆ ಎಂದು ಅವರು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಅಸ್ಲಾಂಪಾಷಾ ಮಾತನಾಡಿ, ನಾವೆಲ್ಲಾ ೩೦ ದಿನಗಳ ಕಾಲ ಉಪವಾಸ ವ್ರತ ಮಾಡಿ ರಂಜಾನ್ ಹಬ್ಬವನ್ನು ಆಚರಿಸಿದ್ದೇವೆ. ಹಿಂದೂ-ಮುಸ್ಲಿಂರು ಎಲ್ಲರೂ ಒಂದೇ ಎಂಬ ಭಾವೈಕ್ಯತೆಯನ್ನು ಸಾರಿದ್ದೇವೆ ಎಂದು ಹೇಳಿ, ರಂಜಾನ್ ಹಬ್ಬದ ಶುಭಾಶಯ ಕೋರಿದರು.ಹಬ್ಬದ ಪ್ರಯುಕ್ತ ಕುಣಿಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಈದ್ಗಾ ಮೈದಾನಕ್ಕೆ ಮಾಜಿ ಶಾಸಕರಾದ ಡಾ. ರಫೀಕ್ ಅಹಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಡಿವೈಎಸ್ಪಿ ಚಂದ್ರಶೇಖರ್, ಸರ್ಕಲ್ ಇನ್ಸಪೆಕ್ಟರ್ ರಾಘವೇಂದ್ರ, ಮುಖಂಡರಾದ ಇಕ್ಬಾಲ್ ಅಹಮದ್, ನಯಾಜ್ ಅಹಮದ್, ರೇವಣಸಿದ್ದಯ್ಯ, ನಯಾಜ್, ಸೇವಾ ದಳದ ಶಿವಪ್ರಸಾದ್, ಗುರುಪ್ರಸಾದ್, ನಟರಾಜಶೆಟ್ಟಿ, ಮಹಮದ್ ಸೈಫ್, ತೋಸಿಫ್, ಫಯಾಜ್ ಅಹಮದ್, ಇರ್ಫಾನ್ ಮತ್ತಿತರರು ಭೇಟಿ ನೀಡಿ ಮುಸ್ಲಿಂರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದರು.