ಸಾರಾಂಶ
ಕೆಜಿಎಫ್ ತಾಲೂಕಿನ ಆಡಂಪಲ್ಲಿ ನಿವಾಸಿ, ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಮುರಗೇಶ್, ಅನಿತಾ ದಂಪತಿಗೆ ಮೊದಲು ಎರಡು ಹೆಣ್ಣು ಮಗುವಿದ್ದ ಕಾರಣ ಈ ಬಾರಿ ಗರ್ಭಿಣಿಯಾದಾಗ ಸ್ಕ್ಯಾನಿಂಗ್ ಗಾಗಿ ಇಲ್ಲಿನ ಸಂಜನಾ ಆಸ್ಪತ್ರೆಗೆ ಸೋಮವಾರದಂದು ಬಂದಿದ್ದಾರೆ. ಆಗ ಅಕ್ರಮವಾಗಿ ಸ್ಕ್ಯಾನಿಂಗ್ ಮಾಡಿದ ಆಸ್ಪತ್ರೆ ವೈದ್ಯರು, ಗರ್ಭದಲ್ಲಿ ಹೆಣ್ಣು ಮಗುವಿದೆ ಎಂದು ಹೇಳಿ, ೨೫ ಸಾವಿರ ವಸೂಲಿ ಮಾಡಿದ್ದಾರೆ ಎಂದು ದಂಪತಿ ಪೋಷಕರು ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಾಲೂರು
ಗರ್ಭಿಣಿಯೊಬ್ಬರಿಗೆ ಸ್ಕ್ಯಾನಿಂಗ್ ಮೂಲಕ ಹೆಣ್ಣು ಮಗು ಎಂದು ತಿಳಿಸಿ, ನಾವು ಕೊಡುವ ಚಿಕಿತ್ಸೆ ಪಡೆದರೆ ನಿಮಗೆ ಗಂಡಾಗುವುದು ಎಂದು ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ್ದರು. ಅವರ ಮಾತು ನಂಬಿ ಮಾತ್ರೆಗಳನ್ನು ನುಂಗಿದ ಗರ್ಭಿಣಿ ಮಹಿಳೆಗೆ ಗರ್ಭಪಾತವಾದ ಘಟನೆ ಇಲ್ಲಿನ ಮಾರುತಿ ಬಡಾವಣೆಯಲ್ಲಿರುವ ಸಂಜನಾ ಖಾಸಗಿ ಆಸ್ಪತ್ರೆಯಲ್ಲಿ ಜರುಗಿದೆ.ಮೃತ ಮಗುವಿನ ಪೋಷಕರು ನೀಡಿರುವ ದೂರಿನ ಅನ್ವಯ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾ ವೈದ್ಯಾಧಿಕಾರಿಗಳ ತಂಡವು ಭ್ರೂಣ ಪತ್ತೆ ಹಾಗೂ ಗರ್ಭಪಾತ ನಡೆದಿದ್ದ ಹಿನ್ನೆಲೆಯಲ್ಲಿ ಆಸ್ವತ್ರೆಯ ಸ್ಕ್ಯಾನಿಂಗ್ ಯೂನಿಟ್ ಅನ್ನು ಸೀಜ್ ಮಾಡಿದೆ.ಘಟನೆ ವಿವರ:
ಕೆಜಿಎಫ್ ತಾಲೂಕಿನ ಆಡಂಪಲ್ಲಿ ನಿವಾಸಿ, ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಮುರಗೇಶ್, ಅನಿತಾ ದಂಪತಿಗೆ ಮೊದಲು ಎರಡು ಹೆಣ್ಣು ಮಗುವಿದ್ದ ಕಾರಣ ಈ ಬಾರಿ ಗರ್ಭಿಣಿಯಾದಾಗ ಸ್ಕ್ಯಾನಿಂಗ್ ಗಾಗಿ ಇಲ್ಲಿನ ಸಂಜನಾ ಆಸ್ಪತ್ರೆಗೆ ಸೋಮವಾರದಂದು ಬಂದಿದ್ದಾರೆ. ಆಗ ಅಕ್ರಮವಾಗಿ ಸ್ಕ್ಯಾನಿಂಗ್ ಮಾಡಿದ ಆಸ್ಪತ್ರೆ ವೈದ್ಯರು, ಗರ್ಭದಲ್ಲಿ ಹೆಣ್ಣು ಮಗುವಿದೆ ಎಂದು ಹೇಳಿ, ೨೫ ಸಾವಿರ ವಸೂಲಿ ಮಾಡಿದ್ದಾರೆ ಎಂದು ದಂಪತಿ ಪೋಷಕರು ಆರೋಪಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಗರ್ಭದಲ್ಲಿರುವ ಹೆಣ್ಣು ಮಗುವನ್ನು ನಮ್ಮಲ್ಲಿ ನೀಡುವ ಚಿಕಿತ್ಸೆಯಿಂದ ಗಂಡುಮಗುವನ್ನಾಗಿ ಮಾಡುತ್ತೇವೆ. ಅದಕ್ಕಾಗಿ 1 ಲಕ್ಷ ರು.ವೆಚ್ಚವಾಗಲಿದೆ ಎಂದು ತಿಳಿಸಿದ್ದರು. ಆಗ ಅವರು ನೀಡಿದ್ದ ಮಾತ್ರೆಗಳನ್ನು ನುಂಗಿದ ಪರಿಣಾಮ ಅನಿತಾಳಿಗೆ ಬುಧವಾರದಂದು ಗರ್ಭಪಾತವಾಗಿ ಮೂರು ತಿಂಗಳ ಸತ್ತ ಭ್ರೂಣ ಹೊರಬಂದಿದೆ. ಇದಕ್ಕೆ ಕಾರಣ ಈ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮೋಹನ್ ಅವರ ಹಣದ ದುರಾಸೆ ಎಂದಿರುವ ಮೃತ ಮಗುವಿನ ತಂದೆ ಮುರಗೇಶ್, ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಸ್ಕ್ಯಾನಿಂಗ್ ಕೇಂದ್ರ ಸೀಜ್:
ಘಟನೆ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅಪಾದಿಸಿದ ಮುರಗೇಶ್ ಅವರು, ಸ್ನೇಹಿತರ ಮೂಲಕ ಆರೋಗ್ಯ ಸಚಿವ ಗುಂಡೂರಾವ್ ರನ್ನು ಪೋನಿನಲ್ಲಿ ಸಂಪರ್ಕಿಸಿ ವಿಷಯ ತಿಳಿಸಿದ ಪರಿಣಾಮ, ಡಿಎಚ್.ಒ.ಜಗದೀಶ್ ಮಾರ್ಗದರ್ಶನದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ರಮೇಶ್ ಬಾಬು ಅವರು ಆಸ್ಪತ್ರೆಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು. ದಾಖಲೆ ಪ್ರಕಾರ ಈ ಆಸ್ಪತ್ರೆಯಲ್ಲಿ ಅಕ್ರಮವಾಗಿ ಭ್ರೂಣ ಪತ್ತೆ ನಡೆದಿರುವುದು ಸಾಭೀತಾದ ಆದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ಅನ್ನು ಸೀಜ್ ಮಾಡಿ, ಡಿಎಚ್ಒ ಜಗದೀಶ್ ರಿಗೆ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.