ಕಲ್ಲಹಳ್ಳಿ ಗೊಲ್ಲರಹಟ್ಟಿಯಲ್ಲಿ ಜ್ವರ ಪ್ರಕರಣಗಳು ಉಲ್ಬಣ

| Published : Dec 25 2024, 12:49 AM IST

ಸಾರಾಂಶ

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಲ್ಲಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಜ್ವರ ಪ್ರಕರಣಗಳು ಕಂಡು ಬಂದಿದ್ದು, ಕೀಟಗಳು ಉತ್ಪತ್ತಿಯಾಗದಂತೆ ನೈರ್ಮಲ್ಯ ಕಾಪಾಡಿ ಎಂದು ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಸುರೇಶ್ ಮನವಿ ಮಾಡಿದರು.

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಕಾಸವರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಲ್ಲಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಜ್ವರ ಪ್ರಕರಣಗಳು ಕಂಡು ಬಂದಿದ್ದು, ಕೀಟಗಳು ಉತ್ಪತ್ತಿಯಾಗದಂತೆ ನೈರ್ಮಲ್ಯ ಕಾಪಾಡಿ ಎಂದು ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಸುರೇಶ್ ಮನವಿ ಮಾಡಿದರು.ಕಲ್ಲಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಜ್ವರ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಜ್ವರ ಚಿಕಿತ್ಸಾ ಕೇಂದ್ರ ತೆರೆದು, ಗುಂಪು ಸಭೆಗಳ ಮೂಲಕ ಮಾಹಿತಿ ಶಿಕ್ಷಣ ಸಂವಹನ ಪ್ರಕ್ರಿಯೆ ಚಟುವಟಿಕೆಯಲ್ಲಿ ಅವರು ಮಾತನಾಡಿದರು. ಕೀಟಜನ್ಯ ರೋಗಗಳು ಸರಿಯಾಗಿ ನಿಯಂತ್ರಿಸದ್ದಿದ್ದಲ್ಲಿ ಮಾರಣಾಂತಿಕವಾಗುತ್ತದೆ. ಪರಿಸರ ಸ್ವಚ್ಛತೆ ನೈರ್ಮಲ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಡೆಂಘೀ, ಚಿಕನ್ ಗುನ್ಯಾ ಮಲೇರಿಯಾ ಸೊಳ್ಳೆಗಳಿಂದ ಹರಡುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೀಟಗಳು ಉತ್ಪತ್ತಿಯಾಗದಂತೆ ನೈರ್ಮಲ್ಯ ಕಾಪಾಡಬೇಕು. ವಾತಾವರಣದಲ್ಲಿ ಏರುಪೇರು ಉಂಟಾಗುತ್ತಿದ್ದು, ದೇಹಾರೋಗ್ಯ ಕಾಪಾಡಿಕೊಳ್ಳುವಲ್ಲಿ ಎಚ್ಚರ ವಹಿಸಬೇಕು ಎಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ದೇಹಾರೋಗ್ಯ ಪರಿಸ್ಥಿತಿ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ದೇವರನ್ನು ಕೇಳಿ ಚಿಕಿತ್ಸೆ ಪಡೆಯುತ್ತೇನೆ ಎಂಬ ಮೂಢನಂಬಿಕೆಯಿಂದ ದೂರ ಬನ್ನಿ. ಈ ಗ್ರಾಮದಲ್ಲಿರುವ 84 ಮನೆಗಳಲ್ಲಿ 10 ಮನೆಗಳಿಗಿಂತ ಹೆಚ್ಚಿನ ಮನೆಗಳಲ್ಲಿ ಲಾರ್ವ ಕಂಡು ಬಂದಿದೆ. ಮನೆಯ ನೀರಿನ ಸಂಗ್ರಹ ಪರಿಕರಗಳಾದ ತೊಟ್ಟಿ, ಬಕೆಟ್, ಡ್ರಮ್, ಬ್ಯಾರೆಲ್ ಇತ್ಯಾದಿಗಳನ್ನು ಸ್ವಚ್ಛವಾಗಿ ತೊಳೆದು ಒಣಗಿಸಿ ನಂತರ ನೀರನ್ನು ಸಂಗ್ರಹಿಸಬೇಕು. ಮುಚ್ಚಳವನ್ನು ಮುಚ್ಚಿ ವಾರಕ್ಕೊಮ್ಮೆಯಾದರೂ ಡ್ರೈ ಡೇ ಆಚರಿಸಿ. ಮುಂಜಾನೆ, ಮುಸ್ಸಂಜೆಯಲ್ಲಿ ಹೊಂಗೆ ಮತ್ತು ಬೇವಿನ ಸೊಪ್ಪಿನ ಹೊಗೆ ಹಾಕುವುದರಿಂದ ಸೊಳ್ಳೆಗಳ ನಿಯಂತ್ರಣವಾಗುತ್ತದೆ ಎಂದು ತಿಳಿಸಿದರು. ಮಲಗುವಾಗ ಆದಷ್ಟೂ ಸೊಳ್ಳೆ ಪರದೆ ಬಳಕೆ ಮಾಡಿ. ಡೆಂಘೀ ಜ್ವರ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ಡೆಂಘೀ ಜ್ವರ ಬಾರದ ಹಾಗೆ ಸೊಳ್ಳೆ ನಿಯಂತ್ರಿಸುವುದು ಸರಿಯಾದ ಕೆಲಸ. ಯಾವುದೇ ಜ್ವರ ಬಂದರೂ ಗಾಬರಿಯಾಗುವುದು ಬೇಡ. ಸೊಳ್ಳೆ ಕಡಿತದಿಂದ ಸೂಕ್ತ ರಕ್ಷಣೆ ಪಡೆಯಿರಿ ಎಂದರು.ಇದೇ ವೇಳೆ ಸಮುದಾಯ ಆರೋಗ್ಯ ಅಧಿಕಾರಿಗಳಾದ ರಶ್ಮಿ, ಶಾಂತಲಾ, ಜ್ವರ ತಪಾಸಣೆ, ರಕ್ತ ಲೇಪನ ಸಂಗ್ರಹಣೆ ಪರೀಕ್ಷೆ, ಚಿಕಿತ್ಸೆ ನೀಡಿದರು. ಈ ಸಂದರ್ಭದಲ್ಲಿ ಮನೆ ಮನೆ ಭೇಟಿ ನೀಡಿ, ಮಾಹಿತಿ ಶಿಕ್ಷಣ ನೀಡಲಾಯಿತು.

ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಿಕಾರ್ಜುನ್, ಗ್ರಾಮ ಪಂಚಾಯಿತಿ ಸದಸ್ಯರಾದ ನಿಜಲಿಂಗಪ್ಪ, ಶಾಲಾ ಶಿಕ್ಷಕರಾದ ಶಾಂತಲಾ, ಪರಿಮಳ, ಆರೋಗ್ಯ ನಿರೀಕ್ಷಣಾಧಿಕಾರಿ ಜ್ಯೋತಿ, ಆಶಾ ಕಾರ್ಯಕರ್ತೆ ಪಾರ್ವತಮ್ಮ, ಶೋಭಾ ಇದ್ದರು.