ವಸತಿ ನಿಲಯದಲ್ಲಿ ಕಡಿಮೆ ಮಕ್ಳು, ಹೆಚ್ಚು ಹಾಜರಾತಿ!

| Published : Feb 07 2024, 01:48 AM IST / Updated: Feb 07 2024, 02:26 PM IST

ಸಾರಾಂಶ

ಇಂಡಿ ತಾಲೂಕಿನ ಅನೇಕ ವಸತಿ ನಿಲಯಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಗೆ ತೋರಿಸಿ ಸರ್ಕಾರದ ಹಣ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿ

ಮಕ್ಕಳು ಕಡಿಮೆ, ಹಾಜರಾತಿ ಹೆಚ್ಚು. ಈ ನಿಯಮ ಇಂಡಿ, ಚಡಚಣ ತಾಲೂಕಿನ ವಸತಿ ನಿಲಯಗಳಲ್ಲಿ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಚಡಚಣ ಹಾಗೂ ಇಂಡಿ ತಾಲೂಕಿನ ವಸತಿ ನಿಲಯಗಳಿಗೆ ಜಿಲ್ಲೆಯ ಅಧಿಕಾರಿಗಳಾಗಲಿ, ತಾಲೂಕಿನ ಅಧಿಕಾರಿಗಳಾಗಲಿ ವರ್ಷಕ್ಕೊಮ್ಮೆ ಭೇಟಿ ನೀಡುತ್ತಾರೆ. 

ಹೀಗಾಗಿ ಚಡಚಣ, ಇಂಡಿ ತಾಲೂಕಿನ ಅನೇಕ ವಸತಿ ನಿಲಯಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಗೆ ತೋರಿಸಿ ಸರ್ಕಾರದ ಹಣ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಕೇವಲ ಹತ್ತಾರು ಜನಕ್ಕಷ್ಟೇ ಆಹಾರ ಪದಾರ್ಥವನ್ನು ತಯಾರಿಸಲಾಗುತ್ತಿದೆ. ಆದರೆ, 65 ರಿಂದ 100 ಜನ ವಿದ್ಯಾರ್ಥಿಗಳಿಗೆ ಇಷ್ಟು ಆಹಾರ ಪದಾರ್ಥ, ಸಾಂಬಾರು ಸಾಕಾಗುತ್ತಾ ಎನ್ನುವ ಪ್ರಶ್ನೆಗೆ ಅಧಿಕಾರಿಗಳೇ ಉತ್ತರ ನೀಡಬೇಕಾಗಿದೆ.

ಸಂಪೂರ್ಣ ಹಾಜರಾತಿ ತೋರಿಸಿ ಅನುದಾನ ದುರುಪಯೋಗ: ವಸತಿ ನಿಲಯದಲ್ಲಿ ನಿತ್ಯ ಇರುವ ವಿದ್ಯಾರ್ಥಿಗಳು ಬಯೋಮೆಟ್ರಿಕ್‌ ಮಾಡಬೇಕು, ಹಾಜರಾತಿ ತೋರಿಸಬೇಕೆಂಬ ನಿಯಮ ಇದೆ. ಆದರೆ, ಕೆಲವೊಂದು ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಬದಲು ಓರ್ವ ಸಿಬ್ಬಂದಿ ಬಯೋಮೆಟ್ರಿಕ್‌ ಮಾಡಿ, ಸಂಪೂರ್ಣ ಹಾಜರಾತಿ ತೋರಿಸುತ್ತಿರುವ ಆರೋಪಗಳು ಕೇಳಿ ಬಂದಿವೆ.

2 ಮಂಚದಲ್ಲಿ ಮೂವರ ನಿದ್ರೆ!:

ಕೆಲವು ವಿದ್ಯಾರ್ಥಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಮಲಗಿಕೊಳ್ಳಲು ಮಂಚ ಇಲ್ಲದ್ದಕ್ಕಾಗಿ 2 ಮಂಚದಲ್ಲಿ ಮೂವರು ವಿದ್ಯಾರ್ಥಿಗಳು ಮಲಗಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ರಾತ್ರಿ ನಿದ್ರೆಯೂ ಇಲ್ಲ, ನಸುಕಿನಲ್ಲಿ ಓದಲು ಏಳಬೇಕಾದರೆ ವಾರ್ಡನ್‌ ಭಯವೂ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಹುಣಸೆ ಬೀಜ ತೆಗೆಯುವ ವಿದ್ಯಾರ್ಥಿಗಳು!: ವಸತಿ ನಿಲಯದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಶಾಲೆಗೆ ಹೋಗಿದ್ದಾರೆಯೇ ಇಲ್ಲವೋ ಎಂಬುವುದು ಗಮನ ಹರಿಸಬೇಕಾದ ವಸತಿ ನಿಲಯದ ವಾರ್ಡನ್‌ಗಳು ಇದ್ಯಾವುದನ್ನೂ ಗಮನಹರಿಸದೇ ಇರುವುದರಿಂದ ಚಡಚಣ ಹಾಗೂ ಇಂಡಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯಗಳಲ್ಲಿನ ಕೆಲ ಮಕ್ಕಳು ಹುಣಸೆ ಹಣ್ಣು ಆರಿಸಿ, ಹುಣಸೆ ಬೀಜ ತೆಗೆಯುವ ಕೆಲಸಕ್ಕೆ ಮುಂದಾಗಿದ್ದಲ್ಲದೇ ಇನ್ಯಾವ ಕೆಲಸಗಳಿಗೆ ಹೋಗುತ್ತಿದ್ದಾರೆ ಎಂಬುವುದು ಸಂಶಯ ವ್ಯಕ್ತವಾಗಿದೆ.

ನಿಲಯದಲ್ಲಿಯೇ ಇಲ್ಲದ ವಾರ್ಡನ್‌ಗಳು!: ವಸತಿ ನಿಲಯದ ವಾರ್ಡ್‌ನ್‌ಗಳು ಸ್ಥಳೀಯವಾಗಿಯೇ ಇರಬೇಕೆಂಬ ನಿಯಮ ಇದ್ದರೂ ಸಹ ಯಾವ ವಾರ್ಡನ್‌ಗಳು ಸಹ ಸ್ಥಳೀಯವಾಗಿ ಇರದೇ, ಇಂಡಿ, ವಿಜಯಪುರ ನಗರದಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ರಾತ್ರಿ ವಿದ್ಯಾರ್ಥಿಗಳಿಗೆ ಏನಾದರೂ ಆದಲ್ಲಿ, ಅವರನ್ನು ಆಸ್ಪತ್ರೆಗೆ ಉಪಚರಿಸುವವರು ವಾಚಮನ್‌ದರವಾಗಿದ್ದಾರೆ. ಒಂದೊಂದು ವಸತಿ ನಿಲಯದಲ್ಲಿ ವಾಚಮನ್‌ ಸಹ ಇರುವುದಿಲ್ಲ. ವಾಚನ್‌ ಇದ್ದಾನೆ ಎಂದು ಅನುದಾನ ದುರುಪಯೋಗ ಪಡಿಸಿಕೊಳ್ಳುವ ವ್ಯವಸ್ಥೆ ಇದೆ ಎಂಬುವುದು ಸಾರ್ವಜನಿಕರ ಆರೋಪ.

ಕೇವಲ ಶೇ.10 ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಹೆಚ್ಚಿನ ಅಂಕ: ಚಡಚಣ ಹಾಗೂ ಇಂಡಿ ತಾಲೂಕಿನ ವಸತಿ ನಿಲಯದಲ್ಲಿ ಪ್ರವೇಶ ಪಡೆದು ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಶೇ.10 ಜನ ವಿದ್ಯಾರ್ಥಿಗಳು ಮಾತ್ರ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಏಕೆಂದರೆ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳನ್ನು ನಸುಕಿನಲ್ಲಿ ಓದಲು ಎಬ್ಬಿಸುವುದು, ಅವರನ್ನು ಕಾಳಜಿ ವಹಿಸಬೇಕಾದ ವಾರ್ಡ್‌ನಗಳು ಸ್ಥಳೀಯವಾಗಿ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. 

ವಿದ್ಯಾರ್ಥಿಗಳ ಜವಾಬ್ದಾರಿ ಹೊತ್ತುಕೊಂಡಿರುವ ವಾರ್ಡ್‌ನಗಳಲ್ಲಿ ಜವಾಬ್ದಾರಿ ಇಲ್ಲದೆ ಇರುವುದಕ್ಕೆ ಕಾರಣವಾಗಿದೆ. ಪ್ರತಿ ವಸತಿ ನಿಲಯದ ವಾರ್ಡ್‌ನ ಬಿಇಡಿ ಮುಗಿಸಿಕೊಂಡು ಬಂದಿದ್ದು, ಅವರೇ ಒಂದು ಗಂಟೆ ವಿದ್ಯಾರ್ಥಿಗಳಿಗೆ ಅಭ್ಯಾಸ ಹೇಳಿದ್ದರೇ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ, ವಾರ್ಡ್‌ನಗಳು ಸರ್ಕಾರದಿಂದ ಪ್ರತಿ ತಿಂಗಳು ಸಂಬಳ ತಪ್ಪದೇ ಬರುತ್ತದೆ. ಇದ್ಯಾಕೆ ಮೈಮೇಲೆ ಎಳೆದುಕೊಳ್ಳಬೇಕೆಂಬ ಮನಸ್ಥಿತಿಯಲ್ಲಿ ಇದ್ದಾರೆ ಎಂಬುವುದು ಪಾಲಕರ ಗಂಭೀರ ಆರೋಪ.

ಹೆಣ್ಮಕ್ಕಳಿಲ್ಲ ಭದ್ರತೆ!: ಇಂಡಿ ಹೆಣ್ಮಕ್ಕಳ ವಸತಿ ನಿಲಯಕ್ಕೆ ಭದ್ರತೆ ಇಲ್ಲ. ವಸತಿ ನಿಲಯದ ಸುತ್ತಲೂ ಖಾಸಗಿ ಡಬ್ಬಾ ಅಂಗಡಿಗಳು ಇರುವುದರಿಂದ ವಸತಿ ನಿಲಯದ ಆವರಣದಲ್ಲಿ ಹೆಣ್ಮಕ್ಕಳು ಆಟ, ಪಾಠ ಮಾಡದಂತ ವಾತಾವರಣ ನಿರ್ಮಾಣವಾಗದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎನ್ನುವ ಆರೋಪಗಳಿಗೆ ಇನ್ನೂ ಎಚ್ಚೆತ್ತಕೊಳ್ಳದ ಅಧಿಕಾರಿಗಳ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ವಸತಿ ನಿಲಯಗಳ ವಾರ್ಡನ್‌ಗಳು ಶಿಕ್ಷಣದ ಜೊತೆಗೆ ಶುಚಿತ್ವ ಮತ್ತು ಮಕ್ಕಳ ಸರ್ವಾಂಗೀಣ ಪ್ರಗತಿಗೂ ಗಮನ ಹರಿಸಬೇಕಾಗಿರುವುದು ಅತೀ ಅವಶ್ಯಕ. ವಸತಿ ನಿಲಯಗಳಲ್ಲಿ ವಾರಕ್ಕೊಮ್ಮೆ ಬುದ್ಧಿಮತ್ತೆ ಪರೀಕ್ಷೆ, ಚರ್ಚಾಸ್ಪರ್ಧೆಗಳು ನಡೆಯಬೇಕು. ಮಾಸಿಕ ಹಾಜರಾತಿ ದೃಢೀಕರಣ ಪತ್ರವನ್ನು ಶಾಲೆಗಳಿಂದ ಅಧಿಕಾರಿಗಳೇ ಪಡೆಯಬೇಕು. ಹೆಣ್ಮಕ್ಕಳ ವಸತಿ ಶಾಲೆಗಳ ವಾರ್ಡನ್‌ಗಳು ಸಂಜೆ 6 ಗಂಟೆಗೆ ಹಾಜರಾತಿ ಪಡೆಯಬೇಕು. ರಾತ್ರಿ ಹೊತ್ತು ಹೆಣ್ಣುಮಕ್ಕಳು ಒಬ್ಬೊಬ್ಬರೇ ಓಡಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಇಲಾಖೆಯ ನಿಯಮವಿದ್ದರೂ ಇವು ಯಾವುವು ಇಲ್ಲಿ ಅನ್ವಯಿಸುವುದೇ ಇಲ್ಲ ಎಂಬ ಆರೋಪ ಕೇಳಿಬಂದಿದೆ.