ಸಾರಾಂಶ
ಬೃಹತ್ ದೇವರ ಬಾವಿಯ ಬಳಿ ಶಿವ ದೇವಾಲಯದ ಅವಶೇಷಗಳು ಗೋಚರ
ಎಚ್.ಕೆ.ಬಿ. ಸ್ವಾಮಿ
ಕನ್ನಡಪ್ರಭ ವಾರ್ತೆ ಸೊರಬತಾಲೂಕಿನ ಗುಡ್ಡೆಕೊಪ್ಪ ಗ್ರಾಮದ ದೇವರ ಬಾವಿಯ ಬಳಿ ಆದಿ ಕದಂಬರ ಅವಧಿಯ ಜನವಸತಿ ಸ್ಥಳವಿದ್ದ ಪಳೆಯುಳಿಕೆ ದೊರೆತಿದೆ. ಇದನ್ನು ಇತಿಹಾಸ ಸಂಶೋಧಕ ರಮೇಶ ಬಿ. ಹಿರೇಜಂಬೂರು ಪತ್ತೆ ಮಾಡಿದ್ದಾರೆ.
ಬೃಹತ್ ದೇವರ ಬಾವಿಯ ಬಳಿ ಶಿವ ದೇವಾಲಯದ ಅವಶೇಷಗಳು, ಅಲ್ಲೇ ದ್ವಿಬಾಹು ಚಿಂತಾಮಣಿ ನರಸಿಂಹ ಶಿಲ್ಪ, ಮಹಿಷಮರ್ಧಿನಿ ಶಿಲ್ಪ, ಹಾರೀತಿ ಶಿಲ್ಪ, ಸಿಂಹಮುಖವಿರುವ ಕಟಾಂಜನ, ಕದಂಬ ಅವಧಿಯದ್ದೆನ್ನಬಹುದಾದ ಅನೇಕ ಇಟ್ಟಿಗೆ ತುಂಡುಗಳು ಗೋಚರಿಸಿವೆ.ಸೊರಬ ಪ್ರಾಚೀನ ನರಸಿಂಹ ಕ್ಷೇತ್ರವಾಗಿದ್ದು ಕುಬಟೂರು, ಕುದರೆಗಣಿ, ಬಾಸೂರು, ಯಲಸಿ, ಕುಪ್ಪಗಡ್ಡೆ ಗ್ರಾಮಗಳಲ್ಲಿ ಇಂತಹ ಶಿಲ್ಪ ಕಂಡು ಬಂದಿದ್ದು ೪ ನೇ ಶತಮಾನದಿಂದ ೬ ನೇ ಶತಮಾನದ ಶಿಲ್ಪಗಳಾಗಿವೆ ಎನ್ನಲಾಗಿದೆ. ತಾಲೂಕಿನ ತೆವರತೆಪ್ಪ ಗ್ರಾಮದಲ್ಲಿ ಈಚೆಗೆ ಇಂತಹುದೇ ನರಸಿಂಹ ಶಿಲ್ಪವನ್ನು ಪುರಾತತ್ವ ಇಲಾಖೆ ತಜ್ಞ ಶೇಜೇಶ್ವರ ನಾಯಕ್ ಶೋಧಿಸಿದ್ದಾರೆ. ಗುಡ್ಡೆಕೊಪ್ಪ ಗ್ರಾಮದಲ್ಲಿ ದೊರೆತಿರುವ ದ್ವಿಬಾಹು ನರಸಿಂಹ ಶಿಲ್ಪ ಸುಮಾರು ೧೦೩ ಸೆಂ.ಮೀ. ಎತ್ತರ ೬೪ ಸೆಂ.ಮೀ. ಅಗಲವಿದೆ. ಮುಖದ ಭಾಗ ಹಾಳಾಗಿದ್ದು ಕೊರಳಲ್ಲಿ ಕಂಠೀಹಾರವಿದೆ.
ಅಲ್ಲೆ ಇರುವ ಇನ್ನೊಂದು ಶಿಲ್ಪವು ೨೦ ಸೆಂ.ಮೀ. ಅಗಲ, ೩೪ ಸೆಂ.ಮೀ. ಉದ್ದವಿದೆ. ಈ ಶಿಲ್ಪದ ಮುಂಭಾಗವು ಹಾಳಾಗಿದ್ದು ಹಿಂಬದಿಯಲ್ಲಿ ಅಪೂರ್ವ ಚಿತ್ರಣವಿದೆ. ಹಿಟ್ಟುಗಲ್ಲು ಅಥವಾ ಬಳಪದ ಕಲ್ಲಿನ ಈ ಶಿಲ್ಪ ಹಾರತಿ ಶಿಲ್ಪದ ಲಕ್ಷಣವನ್ನು ಹೊಂದಿದೆ.ಸುಮಾರು ಒಂದುವರೆ ಅಡಿ ಎತ್ತರದ ಮಹಿಷ ಮರ್ಧಿನಿ ಶಿಲ್ಪ ಕೂಡ ಆರನೇ ಶತಮಾನದ ಲಕ್ಷಣವನ್ನು ಸೂಚಿಸುತ್ತಿದ್ದು, ಸೊರಬ ತಾಲೂಕಿನ ಜಂಬೆಹಳ್ಳಿಯಲ್ಲಿ ಇದೇ ಅವಧಿಯ ಮರ್ದಿನಿ ಶಿಲ್ಪ ಕಂಡು ಬಂದಿದೆ. ತಾಳಗುಂದದಲ್ಲಿ ದೊರೆತಿರುವ ಸಿಂಹ ಕಟಾಂಜನವನ್ನು ನೆನಪಿಸುವಂತಹ ಎರಡು ಸಿಂಹ ಕಟಾಂಜನ ಇಲ್ಲೂ ಕಾಣಿಸುತ್ತಿದ್ದು ೫-೬ ನೇ ಶತಮಾನದ್ದಾಗಿರಬಹುದಾಗಿದೆ ಎಂದು ಇತಿಹಾಸ ಸಂಶೋಧಕರು ಊಹಿಸಿದ್ದಾರೆ.
ಬಹುತೇಕ ಆದಿ ಕದಂಬ ಕಾಲದಿಂದಲೂ ಆರಾಧನೆಗೊಂಡಿರಬಹುದಾದ ಶೈವ, ವೈಷ್ಣವ ಗುಡಿಗಳು ಪಾಳುಬಿದ್ದಿದ್ದು ಪ್ರಸ್ತುತ ಸೋಮ ಸೂತ್ರವಿರುವ ರಾಷ್ಟ್ರಕೂಟ ಅವಧಿಯದ್ದೆನ್ನಬಹುದಾದ ಶಿವಲಿಂಗವಿದೆ. ಇಂತಹ ಪ್ರಾಚೀನ ಶಿವಲಿಂಗಗಳು ತಾಲೂಕಿನ ಓಟೂರು, ಹೆಚ್ಚೆ, ಅಬಸಿ ಗ್ರಾಮಗಳಲ್ಲಿ ಕಂಡು ಬಂದಿದೆ.ಈ ಪಾಳು ಗುಡಿಯ ಸಮೀಪ ಆದಿ ಕದಂಬ, ಕದಂಬ ಕಾಲದ ರಾಶಿ ರಾಶಿ ಮಣ್ಣಿನ ಪಾನಪತ್ರೆಯ ತುಣುಕು, ಮಡಿಕೆಗಳು, ಹಿರೇಮಾಗಡಿ, ಹಂಚಿ ಗ್ರಾಮಗಳಲ್ಲಿ ಕಾಣಸಿಗುವ ಚಾಲುಕ್ಯ ಆರಂಭಿಕ ಹಂತದೆನ್ನಲಾದ ಸುಟ್ಟ ಇಟ್ಟಿಗೆಗಳು ಸಾಕಷ್ಟು ಪ್ರಮಾಣದಲ್ಲಿ ಕಂಡು ಬಂದಿದ್ದು ಅವುಗಳು ಗಾತ್ರದಲ್ಲಿ ಏಳು ಸೆಂ.ಮೀ ದಪ್ಪ, ೨೧ ಸೆಂ.ಮೀ ಅಗಲ ಹಾಗೂ ೪೦ ಸೆಂ.ಮೀ. ಉದ್ದ ಇವೆ. ಗಂಗರ ಕಾಲದ ನಿಸದಿ ಕಲ್ಲು ಕೂಡ ಕಾಣಿಸಿಕೊಂಡಿದೆ.
ಶಿಲ್ಪಗಳ ಅಧ್ಯಯನಕ್ಕೆ ಡಾ. ಶ್ರೀನಿವಾಸ ಪಾಡಿಗಾರ್, ಡಾ.ಜಗದೀಶ ಅಗಸಿ ಬಾಗಿಲು, ಡಾ. ಶೇಜೇಶ್ವರ ನಾಯಕ್ ಸಹಕರಿಸಿದ್ದಾರೆ. ಸ್ಥಳಕ್ಕೆ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ, ಮಂಜಪ್ಪ ಚುರ್ಚಿ ಗುಂಡಿ ಭೇಟಿ ನೀಡಿ ವೀಕ್ಷಿಸಿದ್ದಾರೆ.ಗುಡ್ಡೆಕೊಪ್ಪ ಗ್ರಾಮದಲ್ಲಿ ಆದಿ ಕದಂಬ, ಕದಂಬ ಕಾಲದ ಪಾನಪಾತ್ರೆಯ ಜತೆಗೆ ಯಥೇಚ್ಛ ಮಡಿಕೆ ಚೂರುಗಳು ಲಭಿಸಿವೆ. ಸಮೀಪದ ಬಿದರಗೆರೆ, ತೊಗರ್ಸಿಯಲ್ಲಿ ಕೂಡ ಶಾತವಾಹನರ ಅವಧಿಯ ಜೇಡಿ ವಿಗ್ರಹಗಳು ಪತ್ತೆಯಾಗಿದ್ದು ಪೂರ್ವದಲ್ಲಿ ಪೂರ್ಣಪ್ರಮಾಣದ ವಾಸಸ್ಥಾನವಿದ್ದ ಲಕ್ಷಣಗಳಿವೆ. ಉತ್ಖನನದ ಅವಶ್ಯಕತೆ ಇರುವ ಈ ಸ್ಥಳದಲ್ಲಿ ಶೋಧ ನಡೆದರೆ ಇನ್ನಷ್ಟು ಐತಿಹಾಸಿಕ ಮಹತ್ವದ ಸುಳಿವು ಪತ್ತೆಯಾಗಬಹುದು.
ಶ್ರೀಪಾದ ಬಿಚ್ಚುಗತ್ತಿ, ಇತಿಹಾಸ ಸಂಶೋಧಕ.