ಫೈಬರ್ ಹಲಗೆ ಸದ್ದಿಗೆ ಮಂಕಾದ ಚರ್ಮದ ವಾದ್ಯ

| Published : Mar 19 2024, 12:48 AM IST

ಸಾರಾಂಶ

ಕಲಾದಗಿ: ಹೋಳಿ ಹುಣ್ಣಿಮೆ ಸಮೀಪಿಸುತ್ತಿದೆ. ಎಲ್ಲೆಂದರಲ್ಲಿ ತಡ ರಾತ್ರಿವರೆಗೆ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ವಿವಿಧ ಶೈಲಿಯಲ್ಲಿ ಹಲಗೆ ನುಡಿಸುತ್ತಾ ಹೋಳಿ ಸಂಭ್ರಮದಲ್ಲಿದ್ದಾರೆ. ಆದರೆ, ಚರ್ಮದ ಹಲಗೆ ಬದಲಿಗೆ, ಫೈಬರ್ ಹಲಗೆಗಳ ಹಾವಳಿಯೇ ಹೆಚ್ಚಾಗಿದೆ. ಸಾಂಪ್ರದಾಯಿಕ ಮಹತ್ವ ಹೊಂದಿದ್ದ ಚರ್ಮದ ಹಲಗೆಗಳು ನೇಪಥ್ಯಕ್ಕೆ ಸರಿಯುತ್ತಿವೆ.

ಚಂದ್ರಶೇಖರ ಶಾರದಾಳ

ಕನ್ನಡಪ್ರಭ ವಾರ್ತೆ ಕಲಾದಗಿ

ಹೋಳಿ ಹುಣ್ಣಿಮೆ ಸಮೀಪಿಸುತ್ತಿದೆ. ಎಲ್ಲೆಂದರಲ್ಲಿ ತಡ ರಾತ್ರಿವರೆಗೆ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ವಿವಿಧ ಶೈಲಿಯಲ್ಲಿ ಹಲಗೆ ನುಡಿಸುತ್ತಾ ಹೋಳಿ ಸಂಭ್ರಮದಲ್ಲಿದ್ದಾರೆ. ಆದರೆ, ಚರ್ಮದ ಹಲಗೆ ಬದಲಿಗೆ, ಫೈಬರ್ ಹಲಗೆಗಳ ಹಾವಳಿಯೇ ಹೆಚ್ಚಾಗಿದೆ. ಸಾಂಪ್ರದಾಯಿಕ ಮಹತ್ವ ಹೊಂದಿದ್ದ ಚರ್ಮದ ಹಲಗೆಗಳು ನೇಪಥ್ಯಕ್ಕೆ ಸರಿಯುತ್ತಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಆಚರಿಸುವ ಹೋಳಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಬಣ್ಣದ ಹಬ್ಬಕ್ಕೆ ರಂಗು ನೀಡಲು ಮಾರುಕಟ್ಟೆಗೆ ಹಲಗೆ ವಾದ್ಯಗಳು ಲಗ್ಗೆಯಿಟ್ಟಿವೆ. ಜಗ್ಗ ನಕ್ಕ ಜಗ್ಗ ಎಂದು ನಾದ ಹೊಮ್ಮಿಸುವ ಹಲಗೆ ಖರೀದಿ ಸಂತೆ ಹಾಗೂ ಉಳಿದ ದಿನದಲ್ಲೂ ಬಲು ಜೋರಾಗಿ ನಡೆದಿದೆ.

ಮಾ.8 ರಂದು ಮಹಾ ಶಿವರಾತ್ರಿ ಮರುದಿನ ಪ್ರಾರಂಭವಾದ ಹೋಳಿ ಹುಣ್ಣಿಮೆಯ ಆಚರಣೆಯ ಸಂಪ್ರದಾಯವೆಂಬಂತೆ ಗ್ರಾಮದೆಲ್ಲೆಡೆ ಮಕ್ಕಳು ಹಲಗೆ ಬಡಿಯುತ್ತ ಬಂತಪೋ ಬಂತಪೋ ಹೋಳಿ ಹುಣ್ಣಿಮೆ... ಜಡಿ ನಕ ಜಡಿ ನಕ... ಎಂದು ಸದ್ದು ಮಾಡುತ್ತ ಬೀದಿ ಬೀದಿಯಲ್ಲಿ ಫೈಬರ್ ಹಲಗೆಯ ಸದ್ದು ಮಾಡುತ್ತಿದ್ದಾರೆ. ಈ ಫೈಬರ್ ಹಲಗೆ ಸದ್ದಿನಲ್ಲಿ ಚರ್ಮದ ಹಲಗೆ ಸದ್ದು ಸದ್ದಿಲ್ಲದೆ ಸರಿದು ಹೋಗುತ್ತಿರುವುದು ವಿಷಾದನೀಯ.

ಕೆಲ ವರ್ಷಗಳ ಹಿಂದೆಯಷ್ಟೇ ಹೋಳಿ ಹುಣ್ಣಿಮೆ ಹಬ್ಬದಂದು ಎಲ್ಲರ ಕೈಯಲ್ಲಿ ಕಂಡು ಬರುತ್ತಿದ್ದ ಚರ್ಮದ ಹಲಗೆಯ ಜಾಗದಲ್ಲಿ ಈಗ ಫೈಬರ್ ಹಲಗೆ ಬಂದು ಕುಳಿತಿದೆ. ಜಾಗತೀಕರಣದ ಪ್ರಭಾವದಿಂದಾಗಿ ನಾವು ನಮ್ಮ ಹಬ್ಬಗಳ ಸಂದರ್ಭದಲ್ಲಿ ಅನೇಕ ಸಾಂಪ್ರದಾಯಿಕ ವಸ್ತುಗಳನ್ನು ಕಳೆದುಕೊಂಡಿದ್ದೇವೆ. ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಚರ್ಮದ ಹಲಿಗೆಗಳನ್ನು ಬಳಸುತ್ತಿದ್ದರು. ಆದರೆ, ಈಗ ಮಾರುಕಟ್ಟೆಯಲ್ಲಿ ಫೈಬರ್ ಹಲಗೆಗಳ ಮಾರಾಟ ಜೋರಾಗಿರುವುದರಿಂದ ಚರ್ಮದ ಹಲಗೆಗಳು ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ.

ಫೈಬರ್ ಹಲಗೆಗಳು ಮಾರುಕಟ್ಟೆ ಪ್ರವೇಶ ಮಾಡಿದ್ದರಿಂದ ಚರ್ಮದ ಹಲಗೆಗಳ ಮಾರಾಟ ಕಡಿಮೆಯಾಗಿದೆ. ನಮ್ಮ ಗ್ರಾಮೀಣ ಪ್ರದೇಶದ ಜನರು ಸಹಿತ ಆಧುನಿಕ ಫೈಬರ್ ಹಲಗೆಗಳನ್ನು ಖರೀದಿಗೆ ಮಾರು ಹೋಗಿರುವುದರಿಂದ ಚರ್ಮದ ಹಲಗೆಯನ್ನು ಕೇಳುವವರೇ ಇಲ್ಲದಂತಾಗಿದೆ. ಅನೇಕ ವರ್ಷಗಳ ಹಿಂದೆ ಚರ್ಮದ ಹಲಗೆಯ ವಾದನ ಮಾಡುತ್ತಿದ್ದ ಮಕ್ಕಳು ಈಗ ಫೈಬರ್ ಹಲಗೆಯ ಸದ್ದಿಗೆ ಮಾರು ಹೋಗಿದ್ದಾರೆ. ಹೆಚ್ಚಾಗಿ ಫೈಬರ್ ಹಲಗೆಯ ಖರೀದಿಸುತ್ತಿದ್ದಾರೆ. ಫೈಬರ್ ಹಲಗೆ ಮುಂದೆ ಚರ್ಮದ ಹಲಗೆಯನ್ನೇ ಕೇಳುವವರು, ಕೊಂಡುಕೊಳ್ಳುವವರ ಇಲ್ಲದಂತಾಗಿದೆ ಎಂದು ಲೋಕಾಪುರದ ಹಲಗೆ ವ್ಯಾಪಾರಸ್ಥರು ಹೇಳುತ್ತಾರೆ.

ಬೆಲೆ ಜಾಸ್ತಿ:

ಚರ್ಮದ ಹಲಗೆಗೆ ಬೇಡಿಕೆ ಕಡಿಮೆ ಆಗುತ್ತಿರುವುದು ಹಾಗೂ ಫೈಬರ್ ಹಲಗೆಗೆ ಖರೀದಿ ಹೆಚ್ಚುತ್ತಿರುವುದಕ್ಕೆ ಬೆಲೆ ಕೂಡ ಪ್ರಮುಖ ಕಾರಣವಾಗಿದೆ. ಚರ್ಮದ ವಾದ್ಯಕ್ಕೆ ಹೋಲಿಸಿದರೆ ಫೈಬರ್ ಹಲಗೆ ಬೆಲೆ ಕಡಿಮೆ. ಮಧ್ಯಮ ಗಾತ್ರದ ಚರ್ಮದ ಹಲಗೆಗೆ ₹೨೫೦, ತುಸು ದೊಡ್ಡದು ₹೫೦೦, ದೊಡ್ಡ ಗಾತ್ರದ್ದು ₹೧೨೦೦ರ್ರ. ಆದರೆ, ಫೈಬರ್ ಹಲಗೆ ₹೫೦, ₹೧೫೦, ₹೨೦೦, ₹೪೦೦, ₹೫೦೦ ಗೆ ಮಾರಾಟವಾಗುತ್ತಿವೆ. ಆದ್ದರಿಂದ ಗ್ರಾಹಕರು ಕಡಿಮೆ ಬೆಲೆಯ ಫೈಬರ್ ಹಲಗೆ ಖರೀದಿಗೆ ಒಲವು ತೋರುತ್ತಿದ್ದಾರೆ. ಕೋಟ್... ಕಳೆದ ಹತ್ತು ವರ್ಷದಿಂದ ಹಲಗೆ ವ್ಯಾಪಾರ ಮಾಡುತ್ತಿದ್ದೇನೆ. ಚರ್ಮದ ಹಲಗೆ ಕೇಳುವವರ ಸಂಖ್ಯೆ ಕಡಿಮೆ ಇದ್ದು, ಫೈಬರ್ ಹಲಗೆಗಳು ಹೆಚ್ಚೆಚ್ಚು ಮಾರಾಟವಾಗುತ್ತಿವೆ.

ನಾಗರಾಜ ಪೋಳ. ಹಲಗೆ ವ್ಯಾಪಾರಸ್ಥ, ಬನಹಟ್ಟಿ

--

ಮನೆಯಲ್ಲಿನ ಮಕ್ಕಳು ಹಟ ಹಿಡಿದು ಹಲಗೆ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ. ಫೈಬರ ಹಲಗೆ ಸದ್ದು ಬಹಳ ಜೋರಾಗಿರುತ್ತದೆ. ಸಂತೆಯಲ್ಲಿ ಫೈಬರ್ ಹಲಗೆಗಳ ಕಡಿಮೆ ದರದಲ್ಲಿ ದೊರೆಯುತ್ತಿರುವುದರಿಂದ ಅವುಗಳನ್ನೆ ಖರೀದಿಸುತ್ತಿದ್ದೇವೆ.

ಮಹೇಶ್ ಆಡಗಲ್. ಕಲಾದಗಿ ಗ್ರಾಮಸ್ಥ