ಮಡಿಕೇರಿ: ರಸಗೊಬ್ಬರ ಖರೀದಿಗೆ ಇನ್ಮುಂದೆ ರೈತರು ಕಡ್ಡಾಯವಾಗಿ ಎಫ್‍ಐಡಿ ಹೊಂದಿರಬೇಕು. ಅಷ್ಟೇ ಅಲ್ಲ ತಮ್ಮ ಭೂಮಿಯನ್ನು ಸಹ ಎಫ್‍ಐಡಿಗೆ ಜೋಡಿಸಿರಬೇಕು. ಇದರ ಆಧಾರದಲ್ಲೇ ರಸಗೊಬ್ಬರವನ್ನು ಕೆ. ಕಿಸಾನ್ ತಂತ್ರಜ್ಞಾನ ಮೂಲಕ ವಿತರಣೆ ಮಾಡಲಾಗುತ್ತದೆ.

ಹೌದು ರಸಗೊಬ್ಬರ ತಯಾರಿಕೆಗೆ ವಿದೇಶದಿಂದ ಕಚ್ಚಾ ಸಾಮಗ್ರಿ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿದೆ. ಯುದ್ದದಿಂದ ರಸಗೊಬ್ಬರ ತಯಾರಿಕೆ ಕಚ್ಚಾ ಸಾಮಗ್ರಿಯ ಆಮದಿನಲ್ಲಿ ಭಾರಿ ಸಮಸ್ಯೆಯಾಗಿದೆ, ಹೀಗಾಗಿ ಈ ಬಾರಿ ರಸಗೊಬ್ಬರ ಉತ್ಪಾದನೆಯಲ್ಲಿ ಕುಸಿತವಾಗುವ ಸಾಧ್ಯತೆ ಇದೆ. ಇದರಿಂದ ರಸಗೊಬ್ಬರ ವಿತರಣೆಯ ಮೇಲೆ ವಿಶೇಷ ನಿಗಾ ಇರಿಸಲು ನಿರ್ಧರಿಸಲಾಗಿದೆ.ಈ ಕುರಿತು ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಟ್ಟನಿಟ್ಟಿನ ಸೂಚನೆ ನೀಡಿದ್ದು, ರೈತರು ರಸಗೊಬ್ಬರ ಖರೀದಿ ಮಾಡಬೇಕು ಎಂದಾದರೆ ಮೊದಲು ಎಫ್‍ಐಡಿ (ಫಾರ್ಮರ್ ಐಡೆಂಟಿಫಿಕೇಶನ್‌ ನಂಬರ್‌) ಹೊಂದಿರುವುದು ಕಡ್ಡಾಯ. ಅದಾದ ನಂತರ ಎಫ್‍ಐಡಿಗೆ ರೈತರು ತಮ್ಮ ಭೂಮಿಯನ್ನೆಲ್ಲ ಕಡ್ಡಾಯವಾಗಿ ಜೋಡಿಸಬೇಕು. ಇದರ ಆಧಾರದ ಮೇಲೆ ಹಾಕಿದ ಬೆಳೆಗೆ ರಸಗೊಬ್ಬರವನ್ನು ರೈತರಿಗೆ ಕೆ-ಕಿಸಾನ್ ತಂತ್ರಜ್ಞಾನದ ಮೂಲಕವೇ ವಿತರಣೆ ಮಾಡಲಾಗುವುದು.ಕಾಳಸಂತೆಗೆ ಬ್ರೇಕ್: ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಕಾಳಸಂತೆಯಲ್ಲಿ ದಂಧೆ ಮಾಡುವುದಕ್ಕೆ ಬ್ರೇಕ್ ಹಾಕುವುದು ಮತ್ತು ರೈತರು ಸಹ ಮಿತವ್ಯಯವಾಗಿ ರಸಗೊಬ್ಬರ ಬಳಕೆ ಮಾಡುವಂತಾಗಬೇಕು ಎನ್ನುವ ಕಾರಣಕ್ಕಾಗಿ ಕೆ. ಕಿಸಾನ್ ತಂತ್ರಜ್ಞಾನದ ಮೂಲಕ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ಅಂದರೆ ರೈತರ ಭೂಮಿ, ಹಾಕಿದ ಬೆಳೆಯ ಆಧಾರದಲ್ಲಿ ಬೇಕಾಗುವ ಪ್ರಮಾಣದ ರಸಗೊಬ್ಬರ ಮಾತ್ರ ಕೆ. ಕಿಸಾನ್ ತಂತ್ರಜ್ಞಾನದ ಮೂಲಕವೇ ವಿತರಣೆ ಮಾಡಲಾಗುತ್ತದೆ.ರೈತರು ಈಗಾಗಲೇ ಎಫ್‍ಐಡಿ ಹೊಂದಿದ್ದರೆ ಅಥವಾ ಹೊಂದಿರದಿದ್ದರೆ ತಮ್ಮ ಎಲ್ಲ ಪಹಣಿ ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ಸಮೀಪದ ರೈತ ಸಂಪರ್ಕ ಕೇಂದ್ರ ಮತ್ತು ತೋಟಗಾರಿಕೆ ಇಲಾಖೆಗೆ ಭೇಟಿ ನೀಡಬೇಕು. ಎಫ್‍ಐಡಿ ಹೊಂದಿದ್ದರೆ ನಿಮ್ಮ ಎಲ್ಲ ಸರ್ವೇ ನಂಬರ್ ಆ ಎಫ್‍ಐಡಿಗೆ ಲಿಂಕ್ ಮಾಡಿಸಿಕೊಳ್ಳಲು ಹಾಗೂ ಎಫ್‍ಐಡಿ ಹೊಂದಿರದೆ ಇದ್ದಲ್ಲಿ ಹೊಸದಾಗಿ ಎಫ್‍ಐಡಿ ಸೃಜಿಸಿಕೊಳ್ಳಬೇಕು (ಸೃಜಿಸಿಕೊಳ್ಳಲು ಅಗತ್ಯ ದಾಖಲಾತಿಗಳೊಂದಿಗೆ ಕೇಂದ್ರವನ್ನು ಸಂಪರ್ಕಿಸಬೇಕು) ಎನ್ನಲಾಗಿದೆ.ರೈತರು ರಸಗೊಬ್ಬರ ಪಡೆಯಲು ಎಫ್‍ಐಡಿ ಕಡ್ಡಾಯವಾಗಿ ಹೊಂದಿರಬೇಕು. ಹೀಗಾಗಿ ಈಗಾಗಲೇ ಮಾಡಿಸಿಕೊಂಡಿದ್ದರೆ ಸರಿ, ಮಾಡಿಸಿಕೊಳ್ಳದಿದ್ದರೆ ರೈತ ಸಂಪರ್ಕ ಕೇಂದ್ರಕ್ಕೆ ಹಾಗೂ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಮಾಡಿಸಿಕೊಳ್ಳಬೇಕು. ತಮ್ಮ ಭೂಮಿಯ ಎಲ್ಲ ಪಹಣಿಯನ್ನು ಸಹ ಎಫ್‍ಐಡಿ ಜೋಡಿಸುವುದು ಕಡ್ಡಾಯ.ಮಾರಾಟದ ಮೇಲೂ ನಿಯಂತ್ರಣ: ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ರಸಗೊಬ್ಬರವನ್ನು ಕೆ-ಕಿಸಾನ್ ತಂತ್ರಾಂಶ ಮೂಲಕ ರೈತರ ಎಫ್‍ಐಡಿ ನಮೂದಿಸಿ ಮಾರಾಟ ಮಾಡಬೇಕು ಹಾಗೂ ತಮ್ಮ ಎಲ್ಲ ಓ ಫಾರಂ ನವೀಕರಣಗೊಳಿಸಬೇಕು. ಒಂದು ವೇಳೆ ಮಾರಾಟ ಮಾಡಿದಲ್ಲಿ ಹಾಗೂ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಪರವಾನಗಿ ಅಮಾನತು ಅಥವಾ ರದ್ದು ಮಾಡುವ ಎಚ್ಚರಿಕೆ ನೀಡಲಾಗಿದೆ. ಪ್ರತ್ಯೇಕ ಸಾಪ್ಟ್‍ವೇರ್: ಇದಕ್ಕಾಗಿ ಪ್ರತ್ಯೇಕ ಸಾಪ್ಟ್‍ವೇರ್ ಸಹ ಮಾಡಲಾಗಿದ್ದು, ಪ್ರತಿಯೊಂದರ ಮೇಲೆಯೂ ನಿಗಾ ಇರಿಸಲಾಗುತ್ತದೆ. ವಿತರಣೆಯಾದ ರಸಗೊಬ್ಬರ ಯಾರಿಗೆ ವಿತರಣೆಯಾಗಿದೆ ಮತ್ತು ಬಳಕೆಯಾಗಿದೆ ಎನ್ನುವುದನ್ನು ಪರಾಮರ್ಶೆ ಮಾಡಲಾಗುತ್ತದೆ ಎನ್ನುವುದು ಗಮನಾರ್ಹ ಸಂಗತಿ.ಕಟ್ಟುನಿಟ್ಟಿನ ಸೂಚನೆ: ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡುವ ರಸಗೊಬ್ಬರ ವಿತರಣೆಯಾಗಿರುವ ದೃಢೀಕರಣವನ್ನಾಧರಿಸಿ ರಾಜ್ಯಕ್ಕೆ ಹಂತ ಹಂತವಾಗಿ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರದ ಎಫ್‍ಐಡಿ ಕಡ್ಡಾಯ ಮಾಡಿ ಆದೇಶ ನೀಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ ತಿಳಿಸಿದ್ದಾರೆ.