ಸೋಮರಡ್ಡಿ ಅಳವಂಡಿ
ಕೊಪ್ಪಳ: ರಸಗೊಬ್ಬರ ಖರೀದಿಗೆ ಇನ್ಮುಂದೆ ರೈತರು ಕಡ್ಡಾಯವಾಗಿ ಎಫ್‌ಐಡಿ ಹೊಂದಿರಬೇಕು. ಅಷ್ಟೇ ಅಲ್ಲ, ತಮ್ಮ ಭೂಮಿಯನ್ನು ಸಹ ಎಫ್‌ಐಡಿಗೆ ಜೋಡಿಸಿರಬೇಕು. ಇದರ ಆಧಾರದಲ್ಲಿಯೇ ರಸಗೊಬ್ಬರವನ್ನು ಕೆ.ಕಿಸಾನ್ ತಂತ್ರಜ್ಞಾನದ ಮೂಲಕ ವಿತರಣೆ ಮಾಡಲಾಗುತ್ತದೆ.ಹೌದು, ರಸಗೊಬ್ಬರ ತಯಾರಿಕೆಗೆ ವಿದೇಶದಿಂದ ಕಚ್ಚಾ ಸಾಮಗ್ರಿ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿದೆ. ಯುದ್ಧದಿಂದ ರಸಗೊಬ್ಬರ ತಯಾರಿಕೆ ಕಚ್ಚಾ ಸಾಮಗ್ರಿಯ ಆಮದಿನಲ್ಲಿ ಭಾರಿ ಸಮಸ್ಯೆಯಾಗಿದೆ. ಹೀಗಾಗಿ ಈ ಬಾರಿ ರಸಗೊಬ್ಬರ ಉತ್ಪಾದನೆಯಲ್ಲಿ ಕುಸಿತವಾಗುವ ಸಾಧ್ಯತೆ ಇದೆ. ಇದರಿಂದ ರಸಗೊಬ್ಬರ ವಿತರಣೆಯ ಮೇಲೆ ವಿಶೇಷ ನಿಗಾ ಇರಿಸಲು ನಿರ್ಧರಿಸಲಾಗಿದೆ.
ಈ ಕುರಿತು ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ರೈತರು ರಸಗೊಬ್ಬರ ಖರೀದಿ ಮಾಡಬೇಕು ಎಂದಾದರೇ ಮೊದಲು ಎಫ್ ಐಡಿ ಹೊಂದುವುದು ಕಡ್ಡಾಯ. ಅದಾದ ನಂತರ ಎಫ್ ಐಡಿಗೆ ರೈತರು ತಮ್ಮ ಭೂಮಿಯನ್ನೆಲ್ಲ ಕಡ್ಡಾಯವಾಗಿ ಜೋಡಿಸಬೇಕು. ಇದರ ಆಧಾರದ ಮೇಲೆ ಹಾಕಿದ ಬೆಳೆಗೆ ರಸಗೊಬ್ಬರವನ್ನು ರೈತರಿಗೆ ಕೆ ಕಿಸಾನ್ ತಂತ್ರಜ್ಞಾನದ ಮೂಲಕವೇ ವಿತರಣೆ ಮಾಡಲಾಗುವುದು.ಕಾಳಸಂತೆಗೆ ಬ್ರೇಕ್: ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಕಾಳಸಂತೆಯಲ್ಲಿ ದಂಧೆ ಮಾಡುತ್ತಿರುವುದಕ್ಕೆ ಬ್ರೇಕ್ ಹಾಕುವುದು ಮತ್ತು ರೈತರು ಸಹ ಮಿತವ್ಯಯವಾಗಿ ರಸಗೊಬ್ಬರ ಬಳಕೆ ಮಾಡುವಂತಾಗಬೇಕು ಎನ್ನುವ ಕಾರಣಕ್ಕಾಗಿ ಕೆ. ಕಿಸಾನ್ ತಂತ್ರಜ್ಞಾನದ ಮೂಲಕ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ಅಂದರೆ ರೈತರ ಭೂಮಿ, ಹಾಕಿದ ಬೆಳೆಯ ಆಧಾರದಲ್ಲಿ ಬೇಕಾಗುವ ಪ್ರಮಾಣದ ರಸಗೊಬ್ಬರ ಮಾತ್ರ ಕೆ. ಕಿಸಾನ್ ತಂತ್ರಜ್ಞಾನದ ಮೂಲಕವೇ ವಿತರಣೆ ಮಾಡಲಾಗುತ್ತದೆ.
ರೈತರು ಈಗಾಗಲೇ ಎಫ್‌ಐಡಿ ಹೊಂದಿದ್ದಲ್ಲಿ ಅಥವಾ ಹೊಂದಿರದೆ ಇದ್ದಲ್ಲಿ ತಮ್ಮ ಎಲ್ಲ ಪಹಣಿ ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ಸಮೀಪದ ರೈತ ಸಂಪರ್ಕ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಬೇಕು. ಎಫ್‌ಐಡಿ ಹೊಂದಿದ್ದಲ್ಲಿ ನಿಮ್ಮ ಎಲ್ಲ ಸರ್ವೇ ನಂಬರ್ ಆ ಎಫ್‌ಐಡಿಗೆ ಲಿಂಕ್ ಮಾಡಿಸಿಕೊಳ್ಳಲು ಹಾಗೂ ಎಫ್‌ಐಡಿ ಹೊಂದಿರದೆ ಇದ್ದಲ್ಲಿ ಹೊಸದಾಗಿ ಎಫ್‌ಐಡಿ ಸೃಜಿಸಿಕೊಳ್ಳಬೇಕು (ಸೃಜಿಸಿಕೊಳ್ಳಲು ಅಗತ್ಯ ದಾಖಲಾತಿಗಳೊಂದಿಗೆ ಕೇಂದ್ರ ಸಂಪರ್ಕಿಸಬೇಕು) ಎನ್ನಲಾಗಿದೆ.
ಮಾರಾಟದ ಮೇಲೆಯೂ ನಿಯಂತ್ರಣ: ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ರಸಗೊಬ್ಬರವನ್ನು ಕೆ-ಕಿಸಾನ್ ತಂತ್ರಾಂಶದ ಮೂಲಕ ರೈತರ ಎಫ್ಐಡಿ ನಮೂದಿಸಿ ಮಾರಾಟ ಮಾಡಬೇಕು ಹಾಗೂ ತಮ್ಮ ಎಲ್ಲ ಓ ಫಾರಂ ನವೀಕರಣಗೊಳಿಸಿಕೊಳ್ಳಬೇಕು. ಒಂದು ವೇಳೆ ಮಾರಾಟಗಾರರು ಓ ಫಾರಂಗಳ ನೋಂದಣಿ ಇಲ್ಲದೇ ಮಾರಾಟ ಮಾಡಿದಲ್ಲಿ ಹಾಗೂ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಪರವಾನಗಿ ಅಮಾನತು ಅಥವಾ ರದ್ದು ಮಾಡುವ ಎಚ್ಚರಿಕೆ ನೀಡಲಾಗಿದೆ.
ಪ್ರತ್ಯೇಕ ಸಾಪ್ಟವೇರ್ : ಇದಕ್ಕಾಗಿ ಪ್ರತ್ಯೇಕ ಸಾಪ್ಟವೇರ್ ಸಹ ಮಾಡಲಾಗುತ್ತಿದ್ದು, ಪ್ರತಿಯೊಂದರ ಮೇಲೆಯೂ ನಿಗಾ ಇರಿಸಲಾಗುತ್ತದೆ. ವಿತರಣೆಯಾದ ರಸಗೊಬ್ಬರ ಯಾರಿಗೆ ವಿತರಣೆಯಾಗಿದೆ ಮತ್ತು ಬಳಕೆಯಾಗಿದೆ ಎನ್ನುವುದನ್ನು ಪರಾಮರ್ಶೆ ಮಾಡಲಾಗುತ್ತದೆ ಎನ್ನುವುದು ಗಮನಾರ್ಹ ಸಂಗತಿ.ಕಟ್ಟುನಿಟ್ಟಿನ ಸೂಚನೆ: ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡುವ ರಸಗೊಬ್ಬರ ವಿತರಣೆಯನ್ನಾಧರಿಸಿದೆ. ಅಂದರೆ ರೈತರಿಗೆ ವಿತರಣೆಯಾಗಿರುವ ದೃಢೀಕರಣವನ್ನಾಧರಿಸಿ ರಾಜ್ಯಕ್ಕೆ ಹಂತಹಂತವಾಗಿ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ. ಹೀಗಾಗಿ, ರಾಜ್ಯ ಸರ್ಕಾರ ಎಫ್ ಐಡಿ ಕಡ್ಡಾಯ ಮಾಡಿ ಆದೇಶ ನೀಡಿದೆ.
ರೈತರು ರಸಗೊಬ್ಬರ ಪಡೆಯಲು ಎಫ್ ಐಡಿ ಕಡ್ಡಾಯವಾಗಿ ಹೊಂದಿರಬೇಕಾಗಿದೆ. ಹೀಗಾಗಿ ಈಗಾಗಲೇ ಮಾಡಿಸಿಕೊಂಡಿದ್ದರೆ ಸರಿ, ಮಾಡಿಸಿಕೊಳ್ಳದಿದ್ದರೆ ಮಾಡಿಸಿಕೊಳ್ಳಬೇಕು. ತಮ್ಮ ಎಲ್ಲ ಭೂಮಿಯ ಪಹಣಿಯನ್ನು ಸಹ ಎಫ್ ಐಡಿ ಜೋಡಿಸುವುದು ಕಡ್ಡಾಯ ಎಂದು ಕೃಷಿ ಇಲಾಖೆ ಜೆಡಿ ಕೃಷ್ಣಮೂರ್ತಿ ತಿಳಿಸಿದ್ದಾರೆ.