ಸೋಮರಡ್ಡಿ ಅಳವಂಡಿ ಕೊಪ್ಪಳ

ರಾಜ್ಯಾದ್ಯಂತ ರಸಗೊಬ್ಬರ ಸೇರಿದಂತೆ ಕೃಷಿ ಇಲಾಖೆಯಿಂದ ಕೊಡುವ ಸಬ್ಸಿಡಿ, ರಿಯಾಯಿತಿ ದರದ ರಸಗೊಬ್ಬರ, ಬೀಜ ಹೀಗೆ ಯಾವುದೇ ಸೌಲಭ್ಯ ಪಡೆಯಲು ಇನ್ಮುಂದೆ ರೈತರು ಎಫ್ ಐಡಿ ಹೊಂದುವುದು ಕಡ್ಡಾಯ ಮಾಡಲಾಗಿದೆ.

ಕೃಷಿ ಇಲಾಖೆಯಿಂದ ಕೊಡಮಾಡುವ ಸಬ್ಸಿಡಿ ದುರ್ಬಳಕೆ ಮತ್ತು ಬೋಗಸ್ ಬಿಲ್ ಸೃಷ್ಟಿ ಹಾಗೂ ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.

ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯಸರ್ಕಾರ ಈಗ ರೈತರಿಗೆ ಎಫ್ ಐಡಿ ಮೂಲಕವೇ ಎಲ್ಲವನ್ನು ವಿತರಣೆ ಮಾಡಲು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಲಾಗಿದ್ದು. ಎಫ್ ಐಡಿ ಇಲ್ಲದ ರೈತರಿಗೆ ಇನ್ಮುಂದೆ ಸರ್ಕಾರದ ಯಾವ ಸೌಲಭ್ಯ ನೀಡದಿರಲು ನಿರ್ಧರಿಸಲಾಗಿದೆ.

ಅದರ ಭಾಗವಾಗಿ ಈಗ ರಾಜ್ಯಾದ್ಯಂತ ಎಫ್ ಐಡಿ ಮಾಡಿಸುವ ಅಭಿಯಾನ ಪ್ರಾರಂಭಿಸಿದ್ದು, ಎಫ್ ಐಡಿ ಮಾಡಿದರಷ್ಟೇ ಸಾಲದು, ರೈತರು ಇನ್ಮುಂದೆ ಅದಕ್ಕೆ ತಮ್ಮ ಹೆಸರಿನಲ್ಲಿರುವ ಅಷ್ಟೂ ಭೂಮಿ ಜೋಡಿಸಬೇಕು. ಇದರ ಆಧಾರದಲ್ಲಿಯೇ ಕೃಷಿ ಇಲಾಖೆಯ ವೆಬ್ ಸೈಟ್ ನಲ್ಲಿ ಬೆಳೆ ಅಪ್ಲೋಡ್ ಮಾಡಿದ್ದನ್ನು ಆಧರಿಸಿ ರೈತರಿಗೆ ಅಗತ್ಯ ರಸಗೊಬ್ಬರ ಮತ್ತು ಬೀಜ ಹಾಗೂ ಇತರೆ ಸಬ್ಸಿಡಿ ಪರಿಕರ ನೀಡಲಾಗುತ್ತದೆ.


ಇಕ್ಕಟ್ಟಿನಲ್ಲಿ ಕೆಲ ರೈತರು: ಕಂದಾಯ ಇಲಾಖೆಯಲ್ಲಿನ ನಿಧಾನಗತಿ ಮತ್ತು ಕಟ್ಟಳೆಗಳಿಂದ ಮೃತಪಟ್ಟಿರುವ ರೈತರ ಭೂಮಿ ಅವರ ಮಕ್ಕಳ ಹೆಸರಿಗೆ ವರ್ಗಾವಣೆಯಾಗಿಯೇ ಇಲ್ಲ. ಈಗಲೂ ಅವರ ಮಕ್ಕಳು ಅನುಭೋಗಿಸುತ್ತಿದ್ದರೂ ಪಹಣಿ ಮಾತ್ರ ಮೃತ ತಂದೆ, ತಾಯಿ ಹೆಸರಿನಲ್ಲಿಯೇ ಇರುತ್ತವೆ. ಹೀಗಾಗಿ, ಇಂಥವರು ಎಫ್ ಐಡಿ ಹೊಂದುವುದಕ್ಕೆ ಕಷ್ಟವಾಗುತ್ತದೆ ಮತ್ತು ಎಫ್ ಐಡಿ ಹೊಂದಿದರೂ ಸಹ ಅದಕ್ಕೆ ಭೂಮಿ ಜೋಡಿಸಲು ಆಗದೆ ಇರುವುದರಿಂದ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಿಂದ ಸರ್ಕಾರದ ಸಹಾಯಧನ, ಹಾಗೂ ರಸಗೊಬ್ಬರ, ಕ್ರಿಮಿನಾಶಕ ಸಬ್ಸಿಡಿ ಪಡೆಯಲು ಸಾಧ್ಯವಿಲ್ಲ.

ರಸಗೊಬ್ಬರ ಮತ್ತು ಬೀಜ ಮಾರಾಟಗಾರರು ಸಹ ರೈತರ ಎಫ್ ಐಡಿಯಲ್ಲಿ ನೊಂದಾಯಿಸಿಯೇ ಮಾರಾಟ ಮಾಡಬೇಕು. ಈ ಹಿಂದೆ ಆಧಾರ ಕಾರ್ಡ್ ಆಧಾರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ರೈತರ ಹೆಸರಿನಲ್ಲಿ ಇರುವ ಆಧಾರ ಕಾರ್ಡ್‌ ಬಳಕೆ ಮಾಡಿಕೊಂಡು ರೈತರು ರಸಗೊಬ್ಬರ,ಬೀಜ ಸೇರಿದಂತೆ ಸರ್ಕಾರದಿಂದ ಕೊಡಮಾಡುವ ಎಲ್ಲ ಸೌಲಭ್ಯ ಪಡೆಯುತ್ತಿದ್ದರು. ಆದರೆ, ಇನ್ಮುಂದೆ ಇದಕ್ಕೆ ಬ್ರೇಕ್ ಹಾಕಲಾಗಿದ್ದು, ಎಫ್ ಐಡಿ ಹೊಂದುವುದು ಕಡ್ಡಾಯ ಮತ್ತು ಅದಕ್ಕೆ ಅವರ ಹೆಸರಿನಲ್ಲಿರುವ ಭೂಮಿ ಜೋಡಿಸುವುದು ಕಡ್ಡಾಯ. ಹೀಗಾಗಿ, ರೈತರು ಎಫ್ ಐಡಿ ಇಲ್ಲದ ಹೊರತು ಏನೂ ಪಡೆಯಲು ಸಾಧ್ಯವಿಲ್ಲ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಯ ಮೂಲಕ ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ.

ಏನಿದು ಎಫ್ ಐಡಿ: ರೈತರ ಗುರುತಿನ ಸಂಖ್ಯೆ. ರೈತ ಸಂಪರ್ಕ ಕೇಂದ್ರದಲ್ಲಿ ಆಧಾರ ಕಾರ್ಡ್ ನ್ನು ನೀಡಿ, ನೋಂದಾಯಿಸಿಕೊಳ್ಳುವ ಮೂಲಕ ಎಫ್ ಐಡಿ ಸಂಖ್ಯೆ ಪಡೆಯಬೇಕು. ಈ ಸಂಖ್ಯೆಯ ಆಧಾರದಲ್ಲಿಯೇ ಎಲ್ಲವನ್ನು ವಿತರಣೆ ಮಾಡಲಾಗುತ್ತದೆ. ಆದರೆ, ಕೇವಲ ಎಫ್ ಐಡಿ ಇದ್ದರೆ ಸಾಲದು, ಅದಕ್ಕೆ ಪೂರಕವಾಗಿ ಭೂಮಿ ಎಫ್ಐಡಿಗೆ ಜೋಡಿಸುವುದು ಕಡ್ಡಾಯ. ಭೂ ರಹಿತರಿಗೆ ಕೊಡುವ ಸೌಲಭ್ಯ ಪಡೆಯಲು ಕೇವಲ ಎಫ್ ಐಡಿ ಮಾತ್ರ ಪಡೆಯಬಹುದಾಗಿದೆ. ಕೋಳಿ ಫಾರ್ಮ್ ಸೇರಿದಂತೆ ಉಪಕಸಬು ಮಾಡಲು ಸಹ ಎಫ್ ಐಡಿ ಹೊಂದುವುದು ಕಡ್ಡಾಯ ಮಾಡಲಾಗಿದೆ.

ರಾಜ್ಯಾದ್ಯಂತ ಈಗಾಗಲೇ 1 ಕೋಟಿ ರೈತರು ನೋಂದಣಿಯಾಗಿದ್ದಾರೆ. ಎಫ್ ಐಡಿ ಪಡೆದಿದ್ದಾರೆ. ಆದರೆ, ಇವರೆಲ್ಲರೂ ಸಹ ಭೂಮಿ ಹೊಂದಿರುವ ರೈತರೇ ಎಂದೇ ಅಲ್ಲ, ಇತರೆ ಉಪಕಸಬು ಮಾಡುವವರು ಇದ್ದಾರೆ. ದುರ್ಬಳಕೆಗೂ ಬ್ರೇಕ್:

ಎಫ್ ಐಡಿಗೆ ಭೂಮಿ ಜೋಡಿಸುವುದರಿಂದ ಇದ್ದ ಎಲ್ಲ ಭೂಮಿಯ ಮಾಹಿತಿಯೂ ಲಭ್ಯವಾಗುತ್ತದೆ. ಆಗ ದೊಡ್ಡ ರೈತರು ಸಣ್ಣ ರೈತರು ಎಂದು ಸುಳ್ಳು ಹೇಳಿ ಲಾಭ ಪಡೆಯುವುದಕ್ಕೂ ಬ್ರೇಕ್ ಬೀಳಲಿದೆ.

ಕೇಂದ್ರದ ಕಟ್ಟುನಿಟ್ಟಿನ ಸೂಚನೆ:ರೈತರ ಹೆಸರಿನಲ್ಲಿ ರಸಗೊಬ್ಬರ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಕೇಂದ್ರ ಸರ್ಕಾರ ರೈತರೇ ಎಫ್ ಐಡಿ ಬಳಕೆ ಮಾಡಿ, ರಸಗೊಬ್ಬರ ಪಡೆಯಬೇಕು. ಇದರ ಆಧಾರದಲ್ಲಿಯೇ ರಸಗೊಬ್ಬರ ಹಂಚಿಕೆ ಮಾಡುವುದಾಗಿ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ರೈತರು ಎಫ್ ಐಡಿ ಹೊಂದುವುದು ಕಡ್ಡಾಯ ಮತ್ತು ಸರ್ಕಾರದಿಂದ ಕೊಡಮಾಡುವ ಯಾವುದೇ ಸೌಲಭ್ಯ ಪಡೆಯಲು ಎಫ್ ಐಡಿ ಇರಲೇಬೇಕು. ಹೀಗಾಗಿ, ಜಾಗೃತಿ ಮೂಡಿಸಲಾಗುತ್ತದೆ ಎಂದು ಕೊಪ್ಪಳ ಕೃಷಿ ಇಲಾಖೆ ಜೆಡಿ ಕೃಷ್ಣಮೂರ್ತಿ ತಿಳಿಸಿದ್ದಾರೆ.