ಸಾರಾಂಶ
-ಗ್ರಾಮೀಣ ಭಾಗದಲ್ಲಿ ಹದಗೆಟ್ಟ ರಸ್ತೆಗಳಿಂದ ಜನಸಾಮಾನ್ಯರಿಗೆ ತೊಂದರೆ ಕನ್ನಡಪ್ರಭ ವಾರ್ತೆ ಯಾದಗಿರಿ
ನಗರ ಸೇರಿ ಯಾದಗಿರಿ ಮತಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಡಿದ್ದು, ಅವುಗಳ ದುರಸ್ತಿಗೆ ಶಾಸಕ ಚೆನ್ನಾರಡ್ಡಿ ಪಾಟೀಲ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಕಿಡಿ ಕಾರಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಯಾದಗಿರಿ ನಗರದ ಪ್ರಮುಖ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಇಲ್ಲಿನ ಎಲ್ಐಸಿ ಕಚೇರಿ ಮುಂಭಾಗ, ಚರ್ಚ್, ಗಾಂಧಿವೃತ್ತ, ಹತ್ತಿಕುಣಿ ಸರ್ಕಲ್, ಹೊಸಳ್ಳಿ ಕ್ರಾಸ್, ಗಂಜ್ ರಸ್ತೆಯಿಂದ ಮುಂಡರಗಿ ರಸ್ತೆ, ಮುಸ್ಟೂರು, ಪಗಲಾಪುರ ಸೇತುವೆ, ಹಯ್ಯಾಳ ರಸ್ತೆ, ಮತ್ತು ದೋರನಹಳ್ಳಿ ಹೋಬಳಿಯ ರಸ್ತೆಗಳು, ಯಾದಗಿರಿ ಶಹಾಪುರ ಮುಖ್ಯ ರಸ್ತೆ, ಹೀಗೆ ಹಲವು ಗ್ರಾಮಗಳಲ್ಲಿ, ಹಾಗೂ ನಗರಗಳ ಪ್ರಮುಖ ಬಡಾವಣೆಯಲ್ಲಿ, ರಸ್ತೆಗಳ ಮಧ್ಯೆ ಕಂದಕ ಸೃಷ್ಟಿಯಾಗಿ, ಸಾರ್ವಜನಿಕರು ಮತ್ತು ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ.
ಪರಿಸ್ಥಿತಿ ಹೀಗಿದ್ದರೂ ಶಾಸಕ ಚೆನ್ನಾರಡ್ಡಿ, ಮೌನಕ್ಕೆ ಶರಣಾಗಿದ್ದು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಮತಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಜನತೆಗೆ ಭರವಸೆ ನೀಡಿ ಗೆದ್ದು ಬಂದವರು ತಮ್ಮ ಕರ್ತವ್ಯ ನಿರ್ವಹಿಸಬೇಕು. ಇಲ್ಲದಿದ್ದಲ್ಲಿ ತಮ್ಮ ಸ್ಥಾನಕ್ಕೆ ಯಾವ ರೀತಿ ನ್ಯಾಯ ಒದಗಿಸುತ್ತೀರಿ ಎಂಬುವುದನ್ನು ಸಾರ್ವಜನಿಕರಿಗೆ ಪ್ರತಿಭಟನೆ ಮೂಲಕ ತಿಳಿಸುತ್ತೇವೆ ಎಂದು ಒತ್ತಾಯಿಸಿದ್ದಾರೆ.ಕಲಬುರಗಿಯಲ್ಲಿ ಇತ್ತೀಚೆಗೆ ಜರುಗಿದ ಸಚಿವ ಸಂಪುಟ ಸಭೆಯಲ್ಲಿಯೂ ಸಹ ಯಾದಗಿರಿ ಮತಕ್ಷೇತ್ರಕ್ಕೆ ಯಾವುದೇ ಲಾಭವಾಗಿಲ್ಲ. ಇದರಿಂದ ಕಾಂಗ್ರೆಸ್ ಸರ್ಕಾರ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಅವರನ್ನು ಸಂಪೂರ್ಣ ನಿರ್ಲಕ್ಷಿಸಿದೆಯೋ ಅಥವಾ ಶಾಸಕ ಚೆನ್ನಾರೆಡ್ಡಿ ಅವರಿಗೆ ಮತಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲವೋ ಎಂಬುದನ್ನು ಸ್ಪಷ್ಟ ಪಡಿಸಲಿ ಎಂದು ಡಾ. ಶರಣಭೂಪಾಲರೆಡ್ಡಿ ಕಿಡಿ ಕಾರಿದ್ದಾರೆ.
ಈಗಿನ ಸರ್ಕಾರ ಜಿಲ್ಲಾಭಿವೃದ್ದಿ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದೆ. ಕೂಡಲೇ ಹದಗೆಟ್ಟ ರಸ್ತೆಗಳನ್ನು ರಿಪೇರಿ ಮಾಡಿಸದಿದ್ದರೆ, ಸಾರ್ವಜನಿಕರೊಂದಿಗೆ ಅದೇ ರಸ್ತೆಯ ಮೇಲೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.21ವೈಡಿಆರ್8ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ಜಿಲ್ಲಾ ಬಿಜೆಪಿ ಅಧ್ಯಕ್ಷರು.