ಸಾರಾಂಶ
ಹಾವೇರಿ: ಗ್ರಾಪಂ ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಗ್ರಾಪಂ ಸದಸ್ಯರ ಮಹಾಒಕ್ಕೂಟದ ಉಪಾಧ್ಯಕ್ಷ ಶಿವಲಿಂಗಪ್ಪ ತಲ್ಲೂರ ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ನೌಕರರ ಎಲ್ಲ ವೃಂದದ ಸಂಘಗಳು ಹಾಗೂ ಗ್ರಾಪಂ ಸದಸ್ಯರ ಮಹಾಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಆರಂಭಿಸಲಾದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಆರ್‌ಡಿಪಿಆರ್ ವೃಂದದವರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸದರೂ ಮನ್ನಣೆ ನೀಡದೇ ಇರುವುದರಿಂದ ಬೆಂಗಳೂರು ಚಲೋ ಮಾಡಿ ಎರಡು ದಿನ ಹೋರಾಟ ಮಾಡಲಾಗಿತ್ತು. ಈಗ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹೋರಾಟ ಮಾಡಲಾಗುತ್ತದೆ. ಗ್ರಾಮೀಣಾಭಿವೃದ್ಧಿಗಾಗಿ ಸ್ಥಳೀಯ ಸರ್ಕಾರ ಜನಪ್ರತಿನಿಧಿಗಳು ಹಾಗೂ ಕಾರ್ಯವೃಂದದವರು ಒಂದಾಗಿದ್ದೇವೆ. ನಮ್ಮ ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡಿ ಬೇಡಿಕೆ ಈಡೇರಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪರಿಷತ್ ಸದಸ್ಯ ಸತೀಶ ಮುರಡೇರ ಮಾತನಾಡಿ, ಸರ್ಕಾರ ಪಿಡಿಒಗಳ ಹುದ್ದೆಯನ್ನು ಗೆಜೆಟೆಡ್ ಬಿ ದರ್ಜೆಗೆ ಏರಿಸಬೇಕು. ಜ್ಯೇಷ್ಠತಾ ಪಟ್ಟಿ ತಯಾರಿಸಿ ಬಡ್ತಿ ನೀಡುವಂತಾಗಬೇಕು. ವೃಂದ ಮತ್ತು ನೇಮಕಾತಿ ನೌಕರಸ್ನೇಹಿ ತಿದ್ದುಪಡಿ ತರಬೇಕು. ಅಭಿವೃದ್ಧಿ ಕಡೆಗೆ ಗಮನ ನೀಡಲು ಒತ್ತಡರಹಿತ ಕೆಲಸಕ್ಕೆ ಮಾರ್ಗಸೂಚಿ ಮಾಡಬೇಕು ಎಂದರು.ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಶಿವನಗೌಡ ತಿರಕನಗೌಡ್ರ ಮಾತನಾಡಿ, ಗ್ರಾಪಂನಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವವರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಶೀಘ್ರವಾಗಿ ಸ್ಪಂದಿಸುವಂತೆ ನಾವೆಲ್ಲರೂ ಒಂದಾಗಿದ್ದೇವೆ. ಸಿಪಾಯಿ, ನೀರಗಂಟಿ, ಸ್ವಚ್ಛತಾಗಾರ ಹಾಗೂ ಗ್ರಾಪಂನಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಮಾನ ವೇತನ, ಸೇವಾ ಭದ್ರತೆ, ಪಿಂಚಣಿ ಸಿಗಬೇಕಿದೆ ಎಂದರು.
ಕರ್ನಾಟಕ ರಾಜ್ಯ ಗ್ರಾಪಂ ಸದಸ್ಯರ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ಆನಂದ ಹವಳಣ್ಣನವರ, ಕರಾಪಅ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಚನ್ನವೀರೇಶ ರೂಡಗಿ, ಕಾರ್ಯದರ್ಶಿ ಗುಡ್ಡಪ್ಪ ನಾಯ್ಕ, ಖಜಾಂಚಿ ಮೌಲಾಸಾಬ ಯಲವಿಗಿ, ದಾವಲಸಾಬ ಕಮಗಾಲ, ಪ್ರಮುಖರಾದ ಮಲ್ಲಿಕಾರ್ಜುನ ಬಾಳೂರ, ಚಂದ್ರು ಲಮಾಣಿ, ಸೋಮಶೇಖರ ಏರೇಶಿಮಿ, ಶಂಕರ ಕಿಚಡಿ, ನಾಗಯ್ಯ ಬುರಡಿಕಟ್ಟಿಮಠ, ರಮೇಶ ಹುಲಸೋಗಿ, ಮಧು ದೇಶಿ, ಹಾಲೇಶ ಬಾರ್ಕಿ, ಪ್ರಕಾಶ ಉದಗಟ್ಟಿ, ನಾಗರಾಜ ನೆಗಳೂರ, ಕಲ್ಲಪ್ಪ ಚಿಕ್ಕೇರಿ, ಚಂದ್ರಕಾಂತ ಮಣ್ಣವಡ್ಡರ, ಜರೀನಾಬೇಗಂ ನದಾಫ್, ಶಾಬಾನಾ ನದಾಫ್, ಶಿಲ್ಪಾ ಮುದ್ದಿ, ಸುನೀತಾ ಗರಡಿ ಹಾಗೂ ಸಾವಿರಾರು ನೌಕರರು, ಸಿಬ್ಬಂದಿ ಪಾಲ್ಗೊಂಡಿದ್ದರು.