ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸನಗರ
ಬರುವ ವಿಧಾನಸಭೆ ಕಲಾಪದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಇಟ್ಟಿರುವ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸದಿದ್ದರೆ ಮುಂದಿನ ದಿನದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಹೊಸನಗರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ ಸರ್ಕಾರವನ್ನು ಎಚ್ಚರಿಸಿದ್ದಾರೆ.ಸರ್ಕಾರಿ ನೌಕರರಿಗೆ ಸಂಬಂಧಿಸಿದ ಏಳನೇ ವೇತನ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೊಳಿಸುವುದು ಸೇರಿ ತಮ್ಮ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ತಾಲೂಕು ಕಚೇರಿ ಮುಂಭಾಗ ತಹಸೀಲ್ದಾರ್ ರಶ್ಮಿ ಹಾಲೇಶ್‌ರವರಿಗೆ ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ಸರ್ಕಾರದ ವಿರುದ್ಧ ನೌಕಕರು ಅಸಮಾಧಾನಗೊಂಡಿದ್ದಾರೆ. ನೌಕರರ ಸಂಘ ಅನಿರ್ಧಿಷ್ಟಾವಧಿ ಮುಷ್ಕರದ ಕರೆ ನೀಡಿದೆ ಅದಕ್ಕೂ ಮೊದಲು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ಮೊದಲ ಹಂತದ ಹೋರಾಟಕ್ಕೆ ಇಂದು ಚಾಲನೆ ನೀಡಲಾಗಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಸಮಾಜದ ಕಟ್ಟ ಕಡೆ ವ್ಯಕ್ತಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಮೀನ-ಮೇಷ ಮಾಡುತ್ತಿರುವ ಸರ್ಕಾರದ ನಡೆ ಖಂಡನಾರ್ಹ ಕರ್ನಾಟಕ ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು 7ನೇ ವೇತನ ಆಯೋಗ ಜಾರಿಯಾಗಿ ವರದಿ ನೀಡಿ 4 ತಿಂಗಳು ಕಳೆದಿದೆ. ಈ ಹಿಂದೆ ನೌಕರರ ಸಂಘವು ಸರ್ಕಾರಕ್ಕೆ ಮನವಿ ಮಾಡಿದಾಗ ನೀತಿ ಸಂಹಿತೆ ಮುಗಿಯಲಿ ಎಂದಿತ್ತು. ರಾಜ್ಯ ಸರ್ಕಾರ ಜಾರಿಗೆ ತರುವ ಜನಪರ ಕಾರ್ಯಕ್ರಮ ಯಶಸ್ವಿಯಾಗಿ ಜಾರಿಗೆ ತರಲು ಹಾಗೂ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸರ್ಕಾರಿ ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಜ್ಯದ ವಿವಿಧ ಹುದ್ದೆಗಳಲ್ಲಿ 2.60 ಲಕ್ಷ ನೌಕರರು ಕೆಲಸವನ್ನು ಹಾಲಿ ನೌಕರರು ಕೆಲಸ ನಿರ್ವಹಿಸುತ್ತಿರುವುದರಿಂದ ಸರ್ಕಾರಕ್ಕೆ ವಾರ್ಷಿಕ ಅಂದಾಜು 8500 ಕೋಟಿ ರು. ಉಳಿತಾಯವಾಗುತ್ತಿದೆ. ನಮ್ಮ ಸರ್ಕಾರಿ ನೌಕರರು ಪ್ರತಿದಿನ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರಿ ನೌಕರರು ಅವಲಂಬಿತ ಕುಟುಂಬದ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ತರಬೇಕೆಂದರು. ಮುಖ್ಯಮಂತ್ರಿಗಳು ಸರ್ಕಾರಿ ನೌಕರರ ಸಮ್ಮೇಳನದಲ್ಲಿ ನೀಡಿದ್ದ ಭರವಸೆಯಂತೆ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸದೇ ಇರುವುದರಿಂದ ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಸಹಜವಾಗಿಯೇ ವೇತನ ಪರಿಷ್ಕರಣೆ ವಿಳಂಬವಾಗುವುದೆಂಬ ಆತಂಕಕ್ಕೆ ಒಳಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರ ಹಾಗೂ ಸಂಘಟನೆ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಪರಿಸ್ಥಿತಿಯ ಒತ್ತಡವನ್ನು ಅರಿತು ಸರ್ಕಾರ ವರದಿಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎಂದರು.ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 2.50 ಲಕ್ಷ ಎನ್‌ಪಿಎಸ್ ಯೋಜನೆ ವ್ಯಾಪ್ತಿ ನೌಕರರ ಸಂಧ್ಯಾಕಾಲದ ಬದುಕು ಆರ್ಥಿಕ ಭದ್ರತೆಯಿಲ್ಲದೆ ದುಸ್ತರಗೊಳ್ಳುತ್ತಿದ್ದು, ಸರ್ಕಾರ ಅಂತಹ ನೌಕರರ ಕುಟುಂಬದ ನೆರವಿಗೆ ಧಾವಿಸಬೇಕಾದ ತುರ್ತು ಅಗತ್ಯವಿದೆ. ಮುಪ್ಪಿನ ವಯಸ್ಸಿನಲ್ಲಿ ನೌಕರರು ಮೂಲ ಅಗತ್ಯಗಳಿಗೂ ಪರದಾಟ ಮಾಡುವ ಸ್ಥಿತಿ ಬರಬಾರದು ಎನ್ನುವ ಆಶಯ ಸರ್ಕಾರಕ್ಕೆ ಇದ್ದರೆ ತಕ್ಷಣವೇ ಎನ್‌ಪಿಎಸ್ ಹೋಗಲಾಡಿಸಿ ಒಪಿಎಸ್ ಜಾರಿ ಮಾಡಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ರಾಜ್ಯ ಸರ್ಕಾರಿ ನೌಕರರಿಂದ ಉಗ್ರ ಹೋರಾಟ ಅನಿರ್ವಾಯ ಎಂದರು.
ಮತ್ತೊಂದು ಪ್ರಮುಖ ಬೇಡಿಕೆಯಾದ ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರುಸ್ಥಾಪಿಸುವ ಸಲುವಾಗಿ ಈ ಹಿಂದಿನ ಸರ್ಕಾರ ಇತರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲು 2023ರ ಮಾರ್ಚ್‌ನಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಸಮಿತಿಯು ಇದುವರೆವಿಗೂ ಒಂದೂ ಸಭೆಯನ್ನು ನಡೆಸಿಲ್ಲ ಹಾಗೂ ಹಳೆ ಪಿಂಚಣಿ ಯೋಜನೆ ಮರುಸ್ಥಾಪಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನವನ್ನು ಸಹ ನಡೆಸಿರುವುದಿಲ್ಲ. ಅಲ್ಲದೆ ಈ ಸಂಬಂಧ ಸರ್ಕಾರಕ್ಕೆ ಯಾವುದೇ ವರದಿಯನ್ನು ಇಲ್ಲಿಯವರೆವಿಗೂ ನೀಡಿಲ್ಲ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಯಾವಾಗ ಈಡೇರಿಸಲಿದೆ? ಎಂದು ಅವರು ಪ್ರಶ್ನಿಸಿದರು.ಮನವಿ ಪತ್ರ ನೀಡುವ ಸಂದರ್ಭದಲ್ಲಿ ಹೊಸನಗರ ತಾಲೂಕು ನೌಕರರ ಸಂಘದ ಖಜಾಂಚಿ ಪ್ರಭಾಕರ್, ರಾಜ್ಯ ಪರಿಷತ್ ಸದಸ್ಯ ಸುದೀಂದ್ರಕುಮಾರ್, ಗೌರವಾಧ್ಯಕ್ಷ ಜಗದೀಶ್ ಕಾಗಿನೆಲೆ, ಪ್ರಾಂಶುಪಾಲರಾದ ಸ್ವಾಮಿರಾವ್, ಗ್ರೇಡ್ 2 ತಹಶೀಲ್ದಾರ್ ರಾಕೇಶ್, ರೇಣುಕೇಶ್, ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್ ಸುರೇಶ್, ಶಿಕ್ಷಕರ ಸಂಘದ ಕಾರ್ಯದರ್ಶಿ ಆಲ್ತಾಫ್, ರೇಣುಕಯ್ಯ, ಕಟ್ಟೆ ಮಂಜುನಾಥ್, ಆರೋಗ್ಯ ಇಲಾಖೆ ಚೇತನಾವಿಷ್ಣು, ಮಹಾಬಲೇಶ್ವರ ಜೋಯ್ಸ್, ಆಸ್ಪತ್ರೆ ಸಿಬ್ಬಂದಿ, ಅಕ್ಷರ ದಾಸೋಹ ನಾಗರಾಜ್, ಚಿರಾಗ್, ಈಶ್ವರ್ ಫಟಗಾರ್, ಲಿಲ್ಲಿ ಡಿಸೋಜ, ಸುಮನ, ಅನಿತಾ, ಆಹಾರ ಇಲಾಖೆಯ ನಾಗರಾಜ್, ಶಿವಪ್ಪ ನಾಗರಾಜ್ ಕಿಣಿ, ರಾಘವೇಂದ್ರ, ಶಿಕ್ಷಣ ಇಲಾಖೆ ಮನು, ತಾಲೂಕು ಕಚೇರಿ ಸಿಬ್ಬಂದಿ, ಬಿಇಒ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.