ಜಿಲ್ಲೆಯ ನಿರಾಶ್ರಿತ ನೇಕಾರರಿಗೆ, ಕೆಎಚ್‌ಡಿಸಿಯ ನರಸಾಪುರ ಮತ್ತು ಶಿಗ್ಲಿ ವಿದ್ಯುತ್ ಘಟಕಗಳ ನೇಕಾರರಿಗೂ ಸೇರಿದಂತೆ ನೂರಾರು ನಿವೇಶನಗಳನ್ನು ತುರ್ತಾಗಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಲಾಯಿತು.

ಗದಗ: ಗದಗ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಯ ಸಾವಿರಾರು ನಿರಾಶ್ರಿತ ಮತ್ತು ವೃತ್ತಿಪರ ನೇಕಾರರು ತೀವ್ರ ಆರ್ಥಿಕ ಸಂಕಷ್ಟ ಮತ್ತು ಸಾಲದ ಹೊರೆಯಿಂದ ರೋಸಿ ಹೋಗಿದ್ದು, ತಮ್ಮ ಹಕ್ಕೊತ್ತಾಯಗಳನ್ನು ತಕ್ಷಣವೇ ಈಡೇರಿಸಬೇಕು. ಇಲ್ಲದಿದ್ದರೆ ಬೆಳಗಾವಿಯ ಚಳಿಗಾಲ ಅಧಿವೇಶನದ ವೇಳೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೋರಾಟ ತಿಳಿಸಿದ್ದಾರೆ.

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದರು.

​ರಾಜ್ಯದಲ್ಲಿ ಕೈಮಗ್ಗ ನೇಕಾರಿಕೆ ಜಗತ್ಪ್ರಸಿದ್ಧವಾಗಿದ್ದರೂ ಜಿಲ್ಲೆಯ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರು ಅವೈಜ್ಞಾನಿಕ ಕೂಲಿ ಮತ್ತು ಬೆಲೆ ನಿಗದಿಯಿಲ್ಲದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಲದ ಹೊರೆಯಿಂದ ರಾಜ್ಯದಲ್ಲಿ ಇದುವರೆಗೆ 55 ನೇಕಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ​ನೇಕಾರರನ್ನು ಕೇವಲ ವೋಟು ಬ್ಯಾಂಕ್ ಆಗಿ ಬಳಸಲಾಗುತ್ತಿದೆಯೇ ಹೊರತು ಸಮರ್ಪಕ ಯೋಜನೆಗಳು ಸಿಗುತ್ತಿಲ್ಲ.

ಜಿಲ್ಲೆಯ ನಿರಾಶ್ರಿತ ನೇಕಾರರಿಗೆ, ಕೆಎಚ್‌ಡಿಸಿಯ ನರಸಾಪುರ ಮತ್ತು ಶಿಗ್ಲಿ ವಿದ್ಯುತ್ ಘಟಕಗಳ ನೇಕಾರರಿಗೂ ಸೇರಿದಂತೆ ನೂರಾರು ನಿವೇಶನಗಳನ್ನು ತುರ್ತಾಗಿ ಹಂಚಿಕೆ ಮಾಡಬೇಕು. ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿರುವ 55 ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರಧನ ಒದಗಿಸಬೇಕು. 55 ವರ್ಷ ವಯಸ್ಸಿನ ಮೇಲ್ಪಟ್ಟ ನೇಕಾರರಿಗೆ ಮಾಸಿಕ ₹5 ಸಾವಿರ ಮಾಸಾಶನ ಜಾರಿಗೊಳಿಸಬೇಕು.

ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಂತೆ ನೇಕಾರರಿಗೆ ಬುನಕರ್ ಸಮ್ಮಾನ್ ಯೋಜನೆ ಜಾರಿಗೊಳಿಸಬೇಕು. ದೇಶದ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಲ್ಲಿ ನೇಕಾರರ ಉತ್ಪಾದನೆಗಳ ನೇರ ಮಾರಾಟಕ್ಕಾಗಿ ಮಳಿಗೆಗಳನ್ನು ಒದಗಿಸಿ ನೇಕಾರಿಕೆಯನ್ನು ಪ್ರೋತ್ಸಾಹಿಸಬೇಕು.

ಯೋಜನೆಯಿಂದ ಹೊರಗುಳಿದಿರುವ ನೇಕಾರರನ್ನು ಮತ್ತೊಮ್ಮೆ ಸರ್ವೆ ನಡೆಸಿ ಯೋಜನೆಯನ್ನು ರಾಜ್ಯದ ಎಲ್ಲ ನೇಕಾರರಿಗೆ ಸಮರ್ಪಕವಾಗಿ ಒದಗಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗದಗ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಆಗಮಿಸಿದ್ದ ನೇಕಾರರು ಭಾಗವಹಿಸಿದ್ದರು.