ಮೇ 8ರ ತನಕ ಐದನೇ ಸುತ್ತಿನ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಕಾರ್ಯಕ್ರಮ

| Published : Apr 03 2024, 01:46 AM IST / Updated: Apr 03 2024, 07:42 AM IST

ಸಾರಾಂಶ

5 ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಕೊಡಗು ಜಿಲ್ಲೆಯಲ್ಲಿ ಮೇ 8ರ ವರೆಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ನಡೆಯಲಿದೆ.  

 ಮಡಿಕೇರಿ :  ಕೊಡಗು ಜಿಲ್ಲೆಯಲ್ಲಿ ಮೇ 8ರ ವರೆಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 5 ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ನಡೆಯಲಿದೆ.

ದನ, ಎಮ್ಮೆ, ಆಡು/ ಕುರಿ ಹಂದಿ ಸೇರಿದಂತೆ ಎಲ್ಲಾ ಸೀಳು ಗೊರಸಿನ ಪ್ರಾಣಿಗಳಲ್ಲಿ ಈ ರೋಗವು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಇದು ರೈತರಿಗೆ ಅಪಾರವಾದ ಅರ್ಥಿಕ ನಷ್ಟವನ್ನುಂಟು ಮಾಡುವ ರೋಗವಾಗಿರುತ್ತದೆ.

ಕಾಲುಬಾಯಿ ಜ್ವರವು ಒಂದು ವೈರಾಣು ರೋಗವಾಗಿದ್ದು ನಿರ್ದಿಷ್ಟ ಚಿಕಿತ್ಸೆ ಅಸಾಧ್ಯವಾಗಿರುತ್ತದೆ. ಕಾಲುಬಾಯಿ ರೋಗದಿಂದ ಗುಣಮುಖವಾದರೂ ಸಹ ಜಾನುವಾರುಗಳು ಬಿಸಿಲಿಗೆ ಏದುಸಿರು ಬಿಡುತ್ತವೆ. ಹೈನು ರಾಸುಗಳಲ್ಲಿ ಹಾಲಿನ ಇಳುವರಿ ಇಳಿಮುಖವಾಗಲಿದ್ದು ಗರ್ಭಪಾತ, ಗರ್ಭಕಟ್ಟುವಲ್ಲಿ ವಿಳಂಬ, ಎತ್ತು/ ಹೋರಿಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕ್ಷೀಣಿಸಿ ತೀವ್ರ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ.

ಲಸಿಕೆ ಹಾಕಿಸುವುದೊಂದೇ ಕಾಲುಬಾಯಿ ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿರುತ್ತದೆ. ಈ ರೋಗದ ವಿರುದ್ಧ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ, ರೋಗ ಬರದಂತೆ ತಡೆಗಟ್ಟಬಹುದಾಗಿದೆ. 20ನೇ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ ದನ ಹಾಗೂ ಎಮ್ಮೆಗಳ ಸಂಖ್ಯೆ 76,920 ಇದ್ದು, ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿರುತ್ತದೆ. ಈಗಾಗಲೇ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವ ಸಿದ್ದತೆ ಮಾಡಿಕೊಳಲಾಗಿದ್ದು 70 ಲಸಿಕಾದಾರರನ್ನೊಳಗೊಂಡ ಒಟ್ಟು 11 ತಂಡಗಳನ್ನು ರಚಿಸಲಾಗಿರುತ್ತದೆ. ಲಸಿಕಾದಾರರು ರೈತರ/ಜಾನುವಾರು ಮಾಲೀಕರ ಮನೆ ಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ.

ಲಸಿಕೆ ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗಳಿಗೆ ಬಂದಾಗ ಸಹಕಾರ ನೀಡಿ 4 ತಿಂಗಳ ಮೇಲ್ಪಟ್ಟ ಎಲ್ಲಾ ದನ / ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಕೋರಿದೆ.

ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ಮಡಿಕೇರಿ 9448647276, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ಸೋಮವಾರಪೇಟೆ 9448597496, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ವಿರಾಜಪೇಟೆ 9141093996, ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ಕುಶಾಲನಗರ 9448422269 ಹಾಗೂ ಸಹಾಯಕ ನಿರ್ದೇಶಕರು ಪಶುಆಸ್ಪತ್ರೆ ಪೊನ್ನಂಪೇಟೆ 9449081343 ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.