ಶಿಗ್ಗಾಂವಿ: ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಗಳ ಪೂರೈಕೆ ಹಾಗೂ ವಿತರಣೆ ಸುಗಮಗೊಳಿಸಲು ರೈತರಿಗೆ ಎಫ್‌ಐಡಿಯನ್ನು ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಇದೇ ಮೇ ೨ ರಂದು ಹೆದ್ದಾರಿ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಒಕ್ಕೂಟ ಕಬ್ಬು ಬೆಳೆಗಾರರ ಸಂಘದ ತಾಲೂಕಾಧ್ಯಕ್ಷ ಬಸಲಿಂಗಪ್ಪ ನರಗುಂದ ತಿಳಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್‌ಐಡಿ ಕಡ್ಡಾಯದಿಂದ ರೈತರಿಗೆ ಸರಿಯಾದ ವೇಳೆಗೆ ಗೊಬ್ಬರ ಸಿಗುವುದಿಲ್ಲ, ಸರ್ವರ್ ಸಮಸ್ಯೆಯಾಗಿ ವಿಳಂಬವಾಗುವ ಭೀತಿ ಕಾಡುತ್ತಿದೆ. ರಸಗೊಬ್ಬರ ಮಾರಾಟಗಾರರೂ ಸಹಿತ ರಾಜ್ಯಾದ್ಯಂತ ಇದನ್ನು ವಿರೋಧಿಸಿದ್ದಾರೆ. ವಿತರಿಸಲು ತಾಂತ್ರಿಕ ದೋಷ ಸಂಭವವಿದೆ. ಆದ್ದರಿಂದ ಮೊದಲು ಆಧಾರ್ ಕಾರ್ಡ್ ಮೂಲಕ ವಿತರಿಸುತ್ತಿದ್ದಂತೆಯೇ ಗೊಬ್ಬರ ವಿತರಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಎಫ್‌ಐಡಿ ಕಡ್ಡಾಯ ನಿಲ್ಲಿಸದೇ ಹೋದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದರು.ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ಕಂಕಣವಾಡ ಮಾತನಾಡಿ, ರಸಗೊಬ್ಬರ ಕಂಪನಿಗಳು ಉತ್ಪಾದಿಸಿರುವ ಗೊಬ್ಬರದ ಜೊತೆ ಲಿಂಕ್ ಮೂಲಕ ರೈತರಿಗೆ ನೀಡುತ್ತಿರುವುದರಿಂದ ರೈತರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಇದನ್ನು ಕೂಡಲೇ ಸರಕಾರ ರಸಗೊಬ್ಬರ ಕಂಪನಿಗಳಿಗೆ ಕಡಿವಾಣ ಹಾಕಬೇಕು, ಎಫ್‌ಐಡಿ ಕಡ್ಡಾಯ ಕಾನೂನು ಅವೈಜ್ಞಾನಿಕವಾಗಿರುವುದರಿಂದ ರೈತರಿಗೆ ಇದು ಮಾರಕವಾಗಲಿದ್ದು, ಕೂಡಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದರು.ವಿವಿಧ ರೈತ ಸಂಘಗಳ ಮುಖಂಡರಾದ ನಾಗರಾಜ ದೇಸಾಯಿ, ಗಿರಿಧರಗೌಡ ಪಾಟೀಲ, ಲಕ್ಷ್ಮಣ ಹಂಚಿನಮನಿ, ಈರಣ್ಣ ಸಮಗೊಂಡ, ರಮೇಶ ಜೋಳದ, ನಿಂಗಪ್ಪ ಓಲೇಕಾರ ಸೇರಿದಂತೆ ರೈತ ಮುಖಂಡರು ಇದ್ದರು.
ಎಫ್‌ಐಡಿ ಕಡ್ಡಾಯದ ವಿರುದ್ಧ ಹೋರಾಟ ಅನಿವಾರ್ಯ: ಬಸಲಿಂಗಪ್ಪ
ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಗಳ ಪೂರೈಕೆ ಹಾಗೂ ವಿತರಣೆ ಸುಗಮಗೊಳಿಸಲು ರೈತರಿಗೆ ಎಫ್‌ಐಡಿಯನ್ನು ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಇದೇ ಮೇ ೨ ರಂದು ಹೆದ್ದಾರಿ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.