ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಅಕ್ರಮ ಗಣಿಗಾರಿಕೆ ವಿರುದ್ಧ ನಾನು ಏಕಾಂಗಿಯಾಗಿ ಹೋರಾಟಕ್ಕಿಳಿದಾಗ ನನಗೆ ಪ್ರಾಣ ಬೆದರಿಕೆ ಇತ್ತು. ಆದರೂ ನಾನು ಯಾವ ಬೆದರಿಕೆಗೂ ಹೆದರದೆ ಹೋರಾಟ ಮಾಡಿದ್ದೇನೆ. ಕೃಷ್ಣರಾಜಸಾಗರ ಅಣೆಕಟ್ಟು ಉಳಿಸುವ ಗುರಿಯನ್ನಿಟ್ಟುಕೊಂಡು ಅಕ್ರಮ ಗಣಿ ನಡೆಸುವವರ ವಿರುದ್ಧ ಸಮರ ನಡೆಸಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಶುಕ್ರವಾರ ನಗರದ ಜಿಪಂ ಸಂಕೀರ್ಣದ ಕಾವೇರಿ ಸಭಾಂಗಣದಲ್ಲಿ ಸಂಸದೆ ಸುಮಲತಾ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ವಲಯ, ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಯ ಕೊನೆಯ ಸಭೆಯಲ್ಲಿ ಮಾತನಾಡಿದರು.ಗಣಿ ವಿರುದ್ಧದ ನನ್ನ ಹೋರಾಟಕ್ಕೆ ಯಾರ ಬೆಂಬಲವೂ ಇರಲಿಲ್ಲ. ನಾನು ಗಣಿ ಹೋರಾಟಕ್ಕೆ ಇಳಿದಾಗ ನನಗೆ ನಿರಂತರವಾಗಿ ಒತ್ತಡ ಬರುತ್ತಿತ್ತು. ಗಣಿಗಾರಿಕೆ ಹೋರಾಟ ನಿಲ್ಲಿಸಬೇಕೆಂದು ಪ್ರಾಣ ಬೆದರಿಕೆಯನ್ನೂ ಹಾಕಿದ್ದರು. ಆದರೂ ನಾನು ಎದೆಗುಂದಲಿಲ್ಲ. ಅಕ್ರಮ ಗಣಿಗಾರಿಕೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಿದೆ. ಆಗ ನನ್ನ ಮೇಲೆ ಹಲ್ಲೆ ನಡೆಸುವ ಪ್ರಯತ್ನವೂ ನಡೆದಿತ್ತು. ಆಗ ಕೆಲವು ಮಹಿಳೆಯರು ನನ್ನ ರಕ್ಷಣೆಗೆ ನಿಂತಿದ್ದರು ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆ ವಿರುದ್ಧ ದಿಟ್ಟತನದ ಹೋರಾಟ ನಡೆಸಿದ ಪರಿಣಾಮವಾಗಿ ಹೈಕೋರ್ಟ್ ಕೃಷ್ಣರಾಜಸಾಗರ ಅಣೆಕಟ್ಟು ವ್ಯಾಪ್ತಿಯ ೨೦ ಕಿ.ಮೀ. ಸುತ್ತ ಗಣಿಗಾರಿಕೆಯನ್ನು ನಿಷೇಧಿಸಿದೆ. ಇದು ನನ್ನ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಹೇಳಿದರು. ಕೆಆರ್‌ಎಸ್ ಉಳಿವಿಗಾಗಿ ಅಕ್ರಮ ವಿರುದ್ಧ ನಾನು ಹೋರಾಟ ಮಾಡಿದ್ದೇನೆ. ಯಾವ ಬೆದರಿಕೆಗೆ ಹೆದರದೆ ಹೋರಾಡಿದ್ದೇನೆ ಎಂದು ನುಡಿದರು.ಮಾ.೨೦ರೊಳಗೆ ಡ್ರೋನ್ ಸರ್ವೆ:ಸಂರಕ್ಷಿತ ಅರಣ್ಯ ಪ್ರದೇಶ ಮತ್ತು ಕಂದಾಯ ಇಲಾಖೆ ವ್ಯಾಪ್ತಿಯ ಗಡಿ ಗುರುತು ಹಾಗೂ ಎಷ್ಟು ಪ್ರಮಾಣದಲ್ಲಿ ಗಣಿಗಾರಿಕೆ ನಡೆಸಲಾಗಿದೆ ಎನ್ನುವುದರ ಸಂಬಂಧ ಹೈಕೋರ್ಟ್ ಡ್ರೋನ್ ಸರ್ವೆ ನಡೆಸಲು ಆದೇಶಿಸಿರುವುದರಿಂದ ಮಾ.೨೦ರೊಳಗೆ ಜಿಲ್ಲೆಯಲ್ಲಿ ಡ್ರೋನ್ ಸರ್ವೆ ನಡೆಸುವ ಸಂಬಂಧ ಸರ್ಕಾರದಿಂದ ಮಾಹಿತಿ ಬಂದಿರುವುದಾಗಿ ಗಣಿ ಅಧಿಕಾರಿ ರೇಷ್ಮಾ ಸಭೆಗೆ ವಿವರಣೆ ನೀಡಿದರು. ಆಗ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿ, ಕಳೆದೆರಡು ವರ್ಷಗಳಿಂದ ಇದೇ ಮಾತನ್ನೇ ಹೇಳುತ್ತಿದ್ದೀರಿ. ಕಳೆದ ನಾಲ್ಕರಿಂದ ಐದು ದಿಶಾ ಸಭೆಗಳಿಂದಲೂ ಇದನ್ನು ಕೇಳುತ್ತಲೇ ಇದ್ದೇನೆ. ಏನೂಂತನೇ ಅರ್ಥ ಆಗುತ್ತಿಲ್ಲ ಎಂದು ಬೇಸರದಿಂದ ನುಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ರಾಜ್ಯಮಟ್ಟದಲ್ಲೇ ಇದನ್ನು ಟೆಂಡರ್ ಕರೆದು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ)ದ ಮೂಲಕ ಡ್ರೋನ್ ಸರ್ವೆ ನಡೆಸಲಾಗುತ್ತಿದೆ. ಅದರಂತೆ ಮಂಡ್ಯ ಜಿಲ್ಲೆಯೊಳಗೆ ಮಾ.೨೦ರೊಳಗೆ ಡ್ರೋನ್ ಸರ್ವೆ ನಡೆಸಲಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಂಸದೆ ಸುಮಲತಾ ಅವರು ಗಣಿ ಮಾಲೀಕರಿಂದ ರಾಜಧನ ಸಂಗ್ರಹಿಸುವಲ್ಲಿ ಹಿನ್ನಡೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಧನ ಸಂಗ್ರಹಕ್ಕೆ ಈಗಾಗಲೇ ಹಲವು ಬಾರಿ ನೋಟೀಸ್ ನೀಡಿದ್ದೇವೆ. ಆದರೂ ಅವರು ಹಣ ಪಾವತಿಸಿಲ್ಲ ಎಂದಾಗ, ನೋಟೀಸ್‌ಗಳನ್ನು ನೀಡುವುದರಿಂದ ಏನು ಪ್ರಯೋಜನ. ರಾಜಧನ ಪಾವತಿಸದವರ ವಿರುದ್ಧ ಕ್ರಮ ಕೈಗೊಳ್ಳುವುದು ಯಾವಾಗ. ಇದರೊಳಗೆ ಇನ್ನೇನಾದರೂ ವಿಷಯ ಇದೆಯಾ. ಅಭಿವೃದ್ಧಿಗೆ ಅನುದಾನದ ಕೊರತೆ ಇದೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಹೀಗಿರುವಾಗ ಸರ್ಕಾರಕ್ಕೆ ಬರಬೇಕಾದ ರಾಜಧನ ವಸೂಲಿಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಹೇಗೆ. ಸರ್ಕಾರ ಮತ್ತು ಅಧಿಕಾರಿಗಳಿಂದಲೇ ಅಕ್ರಮ ಗಣಿಕೋರರಿಗೆ ರಕ್ಷಣೆ ಸಿಗುತ್ತಿರುವಂತೆ ಕಾಣಿಸುತ್ತಿದೆ. ಇದಕ್ಕೆಲ್ಲಾ ಯಾರು ಜವಾಬ್ದಾರರು ಎಂದು ಖಾರವಾಗಿ ಪ್ರಶ್ನಿಸಿದರು.ರಾತ್ರಿ ಪಾಳಿ ವೈದ್ಯರಿಗೂ ಬಯೋಮೆಟ್ರಿಕ್ ಅಳವಡಿಸಿ
ಮಿಮ್ಸ್ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ವೈದ್ಯರಿಗೂ ಬಯೋಮೆಟ್ರಿಕ್ ಅಳವಡಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್‌ಗೆ ಸೂಚನೆ ನೀಡಿದರು.ರಾತ್ರಿ ಪಾಳಿಯಲ್ಲಿ ವೈದ್ಯರು ಕರ್ತವ್ಯದಲ್ಲಿ ಇರುವುದಿಲ್ಲ, ಪಿಜಿ ವಿದ್ಯಾರ್ಥಿಗಳು ವೈದ್ಯರಿಗೆ ಫೋನ್ ಮಾಡಿ ಅವರು ನೀಡುವ ಸಲಹೆಯಂತೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ರೋಗಿಗಳು ಸಾಕಷ್ಟು ಪರದಾಡುವಂತಾಗಿದೆ ಎಂದು ದಿಶಾ ಸಮಿತಿ ಸದಸ್ಯರಾದ ಅಂಕರಾಜು ಮತ್ತು ಅರುಣಕುಮಾರಿ ಸಭೆಯ ಗಮನಕ್ಕೆ ತಂದರು.
ಇದಕ್ಕೆ ಉತ್ತರಿಸಿದ ಡಾ.ಶ್ರೀಧರ್, ವೈದ್ಯರು ಪಕ್ಕದ ಕೊಠಡಿಯಲ್ಲೇ ಇರುತ್ತಾರೆ. ಕರ್ತವ್ಯಕ್ಕೆ ಹಾಜರಾಗದವರಿಗೆ ನೋಟೀಸ್ ನೀಡಿದ್ದೇವೆ ಎಂದು ಸಮಜಾಯಿಷಿ ನೀಡಲು ಮುಂದಾದಾಗ ಸಂಸದೆ ಸುಮಲತಾ ಮಧ್ಯಪ್ರವೇಶಿಸಿ, ವೈದ್ಯರು ಇರುವುದೇ ಇಲ್ಲವೆಂದು ನಿಮ್ಮೆದುರಿನಲ್ಲೇ ಹೇಳುತ್ತಿದ್ದಾರೆ. ಪಕ್ಕದ ಕೊಠಡಿಯಲ್ಲಿ ವೈಧ್ಯರು ಇರುತ್ತಾರೆ ಎಂದ ಮೇಲೆ ಬಂದು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲವೇಕೆ. ಇದು ಸರಿಯಾದ ಉತ್ತರವಲ್ಲ ಎಂದಾಗ, ಜಿಲ್ಲಾಧಿಕಾರಿ ಡಾ.ಕುಮಾರ, ಇನ್ನು ಮುಂದೆ ರಾತ್ರಿ ಪಾಳಿ ವೈದ್ಯರಿಗೂ ಬಯೋಮೆಟ್ರಿಕ್ ಅಳವಡಿಸುವಂತೆ ನಿರ್ದೇಶಿಸಿದರು. ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಎಸ್ಪಿ ಎನ್.ಯತೀಶ್ , ಶಾಸಕ ಪಿ.ರವಿಕುಮಾರ ಹಾಜರಿದ್ದರು.